Advertisement

ಚಮೋಲಿ: 26 ಮೃತದೇಹ ಪತ್ತೆ, ಇನ್ನೂ 170 ಮಂದಿ ನಾಪತ್ತೆ ; ಮುಂದುವರಿದ ರಕ್ಷಣ ಕಾರ್ಯಾಚರಣೆ

01:13 AM Feb 09, 2021 | Team Udayavani |

ಹೊಸದಿಲ್ಲಿ/ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಸ್ಫೋಟಿಸಿ ಉಂಟಾದ ಪ್ರವಾಹದಲ್ಲಿ ಅಸುನೀಗಿದವರ ಸಂಖ್ಯೆ ಸೋಮವಾರ 26ಕ್ಕೆ ಏರಿದೆ. ನಾಪತ್ತೆಯಾಗಿರುವ ಇನ್ನೂ 170 ಮಂದಿಗಾಗಿ ಸೇನೆ, ಎನ್‌ಡಿಆರ್‌ಎಫ್, ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ದಳ ಶೋಧ ಮುಂದುವರಿಸಿವೆ.

Advertisement

ದುರಂತದಲ್ಲಿ ಅಸುನೀಗಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಯಪಡಲಾಗಿದೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಾತನಾಡಿ, ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಜೋಗಿಮಠದಲ್ಲಿ ಸೇನೆ, ಐಟಿಬಿಪಿ, ಎನ್‌ಡಿಆರ್‌ಎಫ್, ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ದಳಗಳು ತಪೋವನ- ವಿಷ್ಣುಗಢ ವಿದ್ಯುತ್‌ ಯೋಜನೆಯ ಸ್ಥಾವರದಲ್ಲಿ ಸಿಕ್ಕಿ ಹಾಕಿಕೊಂಡಿರುವ 30-35 ಮಂದಿಯನ್ನು ಪಾರು ಮಾಡಲು ಅಹೋರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್‌ ಕುಮಾರ್‌ ಹೇಳಿದ್ದಾರೆ.

ಹೂಳಿನ ಅಡಿಯಲ್ಲಿ ಸಿಲುಕಿರುವವರ ಪತ್ತೆಗಾಗಿ ಶ್ವಾನದಳ ಬಳಕೆ ಮಾಡಲಾಗುತ್ತಿದೆ. ಅರ್ತ್‌ ಮೂವರ್‌, ಜೆಸಿಬಿಗಳ ಮೂಲಕ ಮಣ್ಣು ತೆಗೆಯಲಾಗುತ್ತದೆ. ತಪೋವನ ಸುರಂಗದಲ್ಲಿ ಕೆಸರು ಮಣ್ಣು ರಾಶಿ ಬಿದ್ದಿದೆ. 80 ಮೀ. ಉದ್ದಕ್ಕೆ ಮಣ್ಣು ತೆರವು ಮಾಡಲಾಗಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ಹೇಳಿದ್ದಾರೆ. ಇನ್ನೂ 100 ಮೀ. ಉದ್ದಕ್ಕೆ ಮಣ್ಣು ತುಂಬಿದೆ. 300 ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದಿದ್ದಾರೆ.

ಇಸ್ರೋ, ಡಿಆರ್‌ಡಿಒ ಸಹಿತ ಕೇಂದ್ರದ ಹಲವು ಸಂಸ್ಥೆಗಳು ನೆರವು, ಕಾರ್ಯಾಚರಣೆಗೆ ಸಹಕರಿಸುತ್ತಿವೆ.

ಯೋಜನೆ ವಿಳಂಬ?
ಸ್ಫೋಟದಿಂದಾಗಿ ಎನ್‌ಟಿಪಿಸಿಯು ತಪೋವನ- ವಿಷ್ಣುಗಢದಲ್ಲಿ ನಿರ್ಮಿಸುತ್ತಿರುವ ಉಷ್ಣ ವಿದ್ಯುತ್‌ ಸ್ಥಾವರ ಕಾರ್ಯಾರಂಭ ವಿಳಂಬವಾಗಲಿದೆ.

Advertisement

ನೀರ್ಗಲ್ಲು ಸ್ಫೋಟದಿಂದ ಅಲ್ಲ
ದುರಂತಕ್ಕೆ ಏಕಾಏಕಿ ಹಿಮಪಾತವಾದದ್ದೇ ಕಾರಣ. ನೀರ್ಗಲ್ಲು ಸ್ಫೋಟ ಅಲ್ಲ ಎಂದು ಇಸ್ರೋ ವಿಜ್ಞಾನಿಗಳು ದೃಢಪಡಿಸಿದ್ದಾರೆ ಎಂದು ಸಿಎಂ ರಾವತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next