ಹೊಸದಿಲ್ಲಿ : ಸಹಾರಾ ಸಮೂಹದ ಮುಖ್ಯಸ್ಥ, 68ರ ಹರೆಯದ ಸುಬ್ರತಾ ರಾಯ್ ಅವರ ಪೆರೋಲ್ ಅನ್ನು ಸುಪ್ರೀಂ ಕೋರ್ಟ್ ಜುಲೈ 15ರ ವರೆಗೆ ವಿಸ್ತರಿಸಿದೆ. ಅಷ್ಟರೊಳಗೆ ರಾಯ್ ಅವರು 2,550 ಕೋಟಿ ರೂ.ಗಳನ್ನು ಕೋರ್ಟಿನಲ್ಲಿ ಠೇವಣಿ ಮಾಡದಿದ್ದರೆ ಅವರು ಮತ್ತೆ ಜೈಲಿಗೆ ಮರಳಬೇಕಾಗುವುದು ಎಂಬ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.
ಹೂಡಿಕೆದಾರರಿಗೆ ಸಹಸ್ರಾರು ಕೋಟಿ ರೂ. ಬಾಕಿ ಇರಿಸಿದ ಕಾರಣಕ್ಕೆ 2014ರಲ್ಲಿ ಬಂಧಿತರಾಗಿದ್ದ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿತ್ತು. ಇಂದು ಕೋರ್ಟಿನಲ್ಲಿ ಹಾಜರಿದ್ದ ಸುಬ್ರತಾ ರಾಯ್ ಅವರು ತಾನು 2,550 ಕೋಟಿ ರೂ.ಗಳಿಗೆ ಎರಡು ಚೆಕ್‌ಗಳನ್ನು ನೀಡುವುದಾಗಿ ನ್ಯಾಯಾಧೀಶರಲ್ಲಿ ಹೇಳಿದರು.
ಈ ಚೆಕ್ಕುಗಳು ವಟಾವಣೆ ಆಗದಿದ್ದಲ್ಲಿ ನಿಮ್ಮನ್ನು ಮತ್ತೆ ನಾವು ಕೋರ್ಟಿನಿಂದ ನೇರವಾಗಿ ತಿಹಾರ್ ಜೈಲಿಗೆ ಕಳುಹಿಸುತ್ತೇವೆ ಎಂದು ನ್ಯಾಯಾಧೀಶರು ರಾಯ್ ಅವರಿಗೆ ಎಚ್ಚರಿಕೆಯನ್ನು ಕೊಟ್ಟರು.
ಹೂಡಿಕೆದಾರರಿಗೆ 24,000 ಕೋಟಿ ರೂ.ಗಳನ್ನು ಪಾವತಿಸಬೇಕಿದ್ದ ಸಹಾರಾ ಸಮೂಹ ಈ ತನಕ ಕೇವಲ 12,000 ಕೋಟಿ ರೂ.ಗಳನ್ನು ಮಾತ್ರವೇ ಪಾವತಿಸಿದೆ. ಈ 12,000 ಕೋಟಿ ರೂ. ಬಾಕಿ ಪಾವತಿಯ ಹಲವಾರು ಗಡುವುಗಳನ್ನು ಸಹಾರಾ ಸಂಸ್ಥೆ ಉಲ್ಲಂಘನೆ ಮಾಡಿದೆ.
ಅಂತಿರುವಾಗ ಸಹಾರಾ ಈ ಕೂಡಲೇ 5,000 ಕೋಟಿ ರೂ.ಗಳನ್ನು ತುರ್ತಾಗಿ ಒದಗಿಸಬೇಕು; ಇದರ ಅರ್ಧಾಂಶ ಮೊತ್ತದ ಹಣವನ್ನು ಜೂನ್ 15ರೊಳಗಾಗಿ ಪೂರೈಸಬೇಕು ಎಂದು ನ್ಯಾಯಾಲಯ ಕಟ್ಟಪ್ಪಣೆ ಮಾಡಿದೆ.
ಕಳೆದ ಬಾರಿಯ ವಿಚಾರಣೆ ವೇಳೆ ರಾಯ್ ಅವರ ವಕೀಲರಾಗಿರುವ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ಸಹಾರಾ ಸಮೂಹದ 34,000 ಕೋಟಿ ರೂ. ಬೆಲೆಬಾಳುವ 10,000 ಎಕರೆ ಭೂಮಿಯ ಆ್ಯಂಬಿ ವ್ಯಾಲಿ ಟೌನ್‌ಶಿಪ್ ಆಸ್ತಿಯನ್ನು ಹರಾಜು ಹಾಕಲು ನಿರ್ಧರಿಸಿರುವುದನ್ನು ವಿರೋಧಿಸಿ ವಾದಿಸಿದ್ದರು.