ಹುಬ್ಬಳ್ಳಿ: ಲಾಕ್‌ಡೌನ್‌ದಿಂದ ಹೂವಿನ ಬೆಳೆ ನಷ್ಟಕ್ಕೆ ರೈತರಿಗೆ ತಾತ್ಕಾಲಿಕ ಪರಿಹಾರ ಹಾಗೂ ಮುಂಬರುವ ದಿನಗಳಲ್ಲಿ ಹೂವು ಬೆಳೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕ್ರಮವಾಗಿ ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರೂ. ಪರಿಹಾರವನ್ನು ಸರಕಾರ ಘೋಷಿಸಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಅಲ್ಪಾವಧಿ ಹೂವು ಬೆಳೆಗಳಾದ ಚೆಂಡು, ಸೇವಂತಿಗೆ, ಆಸ್ಕರ್ ಮತ್ತಿತರ ಹೂಗಳು ಹಾಗೂ ಬಹು ವಾರ್ಷಿಕ ಬೆಳೆಗಳಾದ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್, ಗ್ಲಾಡಿಯೋಲಸ್ ಇತ್ಯಾದಿ ಹೂವು ಬೆಳೆಗಳನ್ನು ಬೆಳೆದಿರುವ ರೈತರು ಇದರ ಪ್ರಯೋಜನ ಪಡೆಯಬಹುದು ಹೂವಿನ ಬೆಳೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಲಾಕ್‌ಡೌನ್ ಆಗಿದ್ದರಿಂದ ಬೇಡಿಕೆ ಇಲ್ಲದೆ, ಮಾರಾಟ ಸ್ಥಳಗಳಿಗೆಸಾಗಿಸಲಾಗದೆ ಬೆಳೆ ಹಾನಿಯಾಗಿದೆ.
ಫಸಲು ಹಾನಿಯಾಗಿರುವ ಪ್ರತಿ ರೈತ ಫಲಾನುಭವಿಗೆ ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರೂ.ಗಳಂತೆ ಗರಿಷ್ಠ ಒಂದು ಹೆಕ್ಟೇರ್ ವರೆಗೆ ಪರಿಹಾರ ನೀಡಲಾಗುವುದು. ಪರಿಹಾರ ನೀಡಲು ಅಗತ್ಯವಿರುವ 3183.75 ಲಕ್ಷ ರೂ.ವನ್ನು ತೋಟಗಾರಿಕೆ ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಹೂವು ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಾನುಭವಿ ಅರ್ಹತೆ: ಜಮೀನು ಅವರ ಹೆಸರಿನಲ್ಲಿರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (ನೋಟರಿ ದೃಢೀಕೃತ). ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರುಮರಣ ಹೊಂದಿದ್ದರೆ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು. ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸದೆ ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು ಅಥವಾ ತಾಲೂಕುಗಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.