Advertisement

ಯುಕೆಪಿಗೆ 2500 ಕೋಟಿ ಹೆಚ್ಚುವರಿ ಅನುದಾನ

06:01 PM Jan 31, 2022 | Team Udayavani |

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಪುನರ್‌ವಸತಿ, ಭೂಸ್ವಾ ಧೀನ ಹಾಗೂ ವಿವಿಧ ಕಾಮಗಾರಿಗಳಿಗೆ ಸರ್ಕಾರ 2500 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದು, ಈಗಾಗಲೇ 950 ಕೋಟಿ ನೀಡಲಾಗಿದೆ. ಏಪ್ರಿಲ್‌ನಲ್ಲಿ ಇನ್ನೂ 900 ಕೋಟಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಬೀಳಗಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಲ್ಲಿ ಹೆರಕಲ್‌ ದಕ್ಷಿಣ ಏತ ನೀರಾವರಿ ಯೋಜನೆಯ ಪಶ್ಚಿಮ ಮುಖ್ಯ ಕಾಲುವೆಯ ವಿತರಣೆ ಉಪಕಾಲುವೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೆರಕಲ್‌ ಏತ ನೀರಾವರಿ ಯೋಜನೆಯ ಮುಂದುವರಿದ ಭಾಗವಾದ ಈ ಉಪ ಕಾಲುವೆಗಳ ನಿರ್ಮಾಣ ಕಾಮಗಾರಿಯಿಂದ 20 ಗ್ರಾಮಗಳಿಗೆ ಒಟ್ಟು 10 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ 71.89 ಕೋಟಿ ಅನುದಾನ ಖರ್ಚು ಮಾಡಲಾಗುತ್ತಿದೆ. ಹಿಂದೆ ಜಗದೀಶ ಶೆಟ್ಟರ ಸಿಎಂ ಆಗಿದ್ದಾಗ 2013ರಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಅನಿವಾರ್ಯ ಕಾರಣದಿಂದ ಸ್ಥಗಿತಗೊಂಡಿದ್ದು, ನಂತರ 2019ರಲ್ಲಿ ನಮ್ಮ ಸರಕಾರ ಮತ್ತೆ ಅಧಿ ಕಾರಕ್ಕೆ ಬಂದ ಬಳಿಕ ಈ ಕಾರ್ಯಕ್ಕೆ ವೇಗ ನೀಡಲಾಗಿದೆ ಎಂದರು.

ರಾಜ್ಯದ ನೀರಾವರಿ ಸಮಗ್ರ ಅಭಿವೃದ್ಧಿಗಾಗಿ 1.50 ಲಕ್ಷ ಸಾವಿರ ಕೋಟಿ ರೂ.ಗಳ ಕಾಮಗಾರಿಗೆ ಹಿಂದಿನ ಸರಕಾರ ಹಾಗೂ ಇಂದಿನ ಸರಕಾರ ಮಂಜೂರಾತಿ ನೀಡಿದ್ದವು. ಸಮಗ್ರ ನೀರಾವರಿಗೆ ರಾಜ್ಯದಲ್ಲಿ ಲಭ್ಯವಿರುವ ನೀರನ್ನು ಉಪಯೋಗ ಮಾಡಿಕೊಳ್ಳಬೇಕಾದರೆ ನಮಗೆ 2.5 ಲಕ್ಷ ಕೋಟಿ ಅನುದಾನದ ಅಗತ್ಯವಿದೆ. ಆಗ 20 ಲಕ್ಷ ಹೆಕ್ಟೇರ್‌ ಭೂಮಿ ನೀರಾವರಿಗೆ ಒಳಪಡುತ್ತದೆ. ಈ ಕಾರ್ಯವನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀರು ಹಂಚಿಕೆ ವಿಷಯದಲ್ಲಿ ಮಹಾರಾಷ್ಟ್ರ, ಆಂದ್ರ, ತೆಲಂಗಾಣ ರಾಜ್ಯದವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೋರ್ಟ್‌ನಲ್ಲಿ ಪ್ರಕರಣ ಇದೆ. 130 ಟಿಎಂಸಿ ನೀರನ್ನು ಸಂಪೂರ್ಣ ಬಳಕೆ ಮಾಡಲು ಆಗಿಲ್ಲ. ಆದರೆ ತೀರ್ಪು ನಮ್ಮ ಪರ ಬರಲಿದೆ ಎಂದು ಆಶಯವಿದೆ. 130 ಟಿಎಂಸಿ ನೀರನ್ನು ಸಂಪೂರ್ಣ ಬಳಕೆ ಮಾಡಿದಲ್ಲಿ 15 ಲಕ್ಷ ನೀರಾವರಿಗೆ ಒಳಪಡಲಿದೆ ಎಂದು ತಿಳಿಸಿದರು.

Advertisement

ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದಾಗ, ನೀರಾವರಿ ಬಗ್ಗೆ ವಿಶೇಷ ಕಳಕಳಿ ಇರುವದರಿಂದ ನೀರು ನಿಲ್ಲಿಸಲು ಅನುಮತಿ ದೊರೆತರೆ ಇದರಿಂದ 20 ಹಳ್ಳಿ ಸ್ಥಳಾಂತರ, 75 ಸಾವಿರ ಎಕರೆ ಮುಳುಗಡೆ ಆಗಲಿದ್ದು, ನಮಗೆ 1.32 ಲಕ್ಷ ಎಕರೆ ಭೂಮಿ ಸ್ವಾ ಧೀನಪಡಿಸಿಕೊಳ್ಳಬೇಕಿದೆ. ಇದರಲ್ಲಿ ಮುಳುಗಡೆ ಸಂತ್ರಸ್ತರಿಗೆ, ಪುನರ್ವಸತಿಗೆ ಹಾಗೂ ಕಾಲುವೆ ನಿರ್ಮಾಣ ವಿವಿಧ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ.

ಇದಕ್ಕಾಗಿ 2500 ಕೋಟಿ ರೂ. ಹೆಚ್ಚುವರಿ ಮಂಜೂರು ಮಾಡಲಾಗಿದೆ. 2021-22ರ ವರ್ಷದ ಸಂಪೂರ್ಣ ಹಣ ಪುನರ್ವಸತಿ ಮತ್ತು ಪುನರ್‌ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು ಎಂದರು. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವ ಸರಕಾರ ಬಂದ ಮೇಲೆ ನಮ್ಮ ಜಿಲ್ಲೆಗೆ 950 ಕೋಟಿ ರೂ. ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಪ್ರಾರಂಭಗೊಂಡಿದೆ.

ಬರುವ ಎಪ್ರಿಲ್‌ ಮಾಹೆಯಲ್ಲಿ ಇನ್ನು 900 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದು, ಅದನ್ನು ಸಹ ಮಂಜೂರು ಮಾಡುವ ಭರವಸೆ ನೀಡಿದೆ. ಇದರಲ್ಲಿ ಅನವಾಲ, ಭಗವತಿ, ಶಿರೂರ ಏತ ನೀರಾವರಿ ಕಾಮಗಾರಿಗಳಲ್ಲದೇ ಕೆರೆ ತುಂಬುವ ಕಾರ್ಯ ನಡೆಯಲಿದೆ. ಜಿಲ್ಲೆಯ ಅತೀ ಮುಖ್ಯವಾದ ನೀರಾವರಿ ಯೋಜನೆ ಸಸಾಲಟ್ಟಿ ಯೋಜನೆ ನನೆಗುದ್ದಿಗೆ ಬಿದ್ದಿದ್ದು, ಇದು ಪ್ರಾರಂಭಗೊಂಡರೆ ತೇರದಾಳ, ಜಮಖಂಡಿ, ಮುಧೋಳ ಬೀಳಗಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬೀಳಗಿ ಮತಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಿಸುವ ನಿಟ್ಟಿನಲ್ಲಿ ಅನೇಕ ನೀರಾವರಿ ಕಾಮಗಾರಿಗಳು ನಡೆಯುತ್ತಿದೆ. ಅವುಗಳು ವಿವಿಧ ಹಂತಗಳಲ್ಲಿವೆ. ಎತ್ತರ ಪ್ರದೇಶದಲ್ಲಿ ಇರುವ ಭೂಮಿಗೆ ನೀರಾವರಿಗೆ 100 ಬೋರವೆಲ್‌ ಗಳ ವ್ಯವಸ್ಥೆ, 36 ಕೆರೆ ತುಂಬುವ ಯೋಜನೆ  ಹಾಕಿಕೊಳ್ಳಲಾಗಿದೆ. ಅಲ್ಲದೇ ತಲಾ 20 ಕೋಟಿ ವೆಚ್ಚದಲ್ಲಿ ಎರಡು 110 ಕೆವಿ ವಿದ್ಯುತ್‌ ಸ್ಟೇಷನ್‌ ಮಾಡಲಾಗುತ್ತಿದೆ. ಟ್ರಾನ್ಸ್‌ಫಾರರ್‌ ಸುಟ್ಟು ಹೋದಲ್ಲಿ 24 ಗಂಟೆಗಳಲ್ಲಿ ಹೊಸ ಟ್ರಾನ್ಸಫಾರ್ಮರ್‌ಜೋಡಣೆಗೆ ವಿದ್ಯುತ್‌ ಪರಿವರ್ತಕ ಬ್ಯಾಂಕ್‌ ಸ್ಥಾಪಿಸಲಾಗಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯ ಅಧ್ಯಕ್ಷ ಮುತ್ತು ದೇಸಾಯಿ ಮಾತನಾಡಿದರು. ಪ್ರಾಸ್ತಾವಿಕವಾಗಿ ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಕೆರೂರ ಚರಂತಿಮಠದ ಡಾ|ಶಿವಕುಮಾರ ಸಾನಿಧ್ಯ ವಹಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ, ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಪಿಕಾರ್ಡ್‌ ಬ್ಯಾಂಕಿನ ಅಧ್ಯಕ್ಷ ಮಹಾಂತೇಶ ಮಮದಾಪುರ, ಡಿಸಿಸಿ ನಿರ್ದೇಶಕ ಕುಮಾರ ಜನಾಲಿ, ಆನಂದರಾವ್‌ ದೇಸಾಯಿ, ಶರತ್‌ ನಾಡಗೌಡ, ಮಹೇಶ ನಾಡಗೌಡ ಮುಂತಾದವರು ಉಪಸ್ಥಿತರಿದ್ದರು.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಯುಕೆಪಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಳುಗಡೆಯಾಗಲಿರುವ 20 ಹಳ್ಳಿಗಳ ಸ್ಥಳಾಂತರ, 1.32 ಲಕ್ಷ ಎಕರೆ ಭೂಮಿ ಸ್ವಾ ಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ 2020-21ರಲ್ಲಿ 2500 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ಭೂಸ್ವಾಧೀನ ಕಾರ್ಯಕ್ಕಾಗಿಯೇ 60 ಸಾವಿರ ಕೋಟಿ ಅಗತ್ಯವಿದೆ. ಪ್ರಸಕ್ತ ಬಜೆಟ್‌ನಲ್ಲಿ ಭಗವತಿ, ಅನವಾಲ, ಕೆರೂರ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳಿಗೆ 900 ಕೋಟಿ ಮೀಸಲಿಡಲಾಗುವುದು.
ಗೋವಿಂದ ಕಾರಜೋಳ,
ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next