Advertisement

ದಸರಾಗೆ 2500 ಹೆಚ್ಚುವರಿ ಬಸ್‌

03:18 PM Oct 13, 2018 | |

ಬೆಂಗಳೂರು: ಮೈಸೂರು ದಸರಾ ಹಾಗೂ ದಸರಾ ರಜೆ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

Advertisement

ದಸರಾ ಮಹೋತ್ಸವದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ, ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಸೇವೆ ಒದಗಿಸುತ್ತಿರುವ ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್‌ ಕ್ಲಾಸ್‌ ಸೇವೆಗಳ ಜತೆಗೆ 2500ಕ್ಕೂ ಅಧಿಕ ಹೆಚ್ಚುವರಿ ಬಸ್‌ಗಳ ವಿಶೇಷ ಸೇವೆ ಒದಗಿಸಲಾಗಿದೆ ಎಂದು ಕೆಎಸ್‌ಆರ್‌ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅ.17ರಿಂದ 22ರ ವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಗೆ 2500ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣದಿಂದ ವಿಶೇಷ ಬಸ್‌ಗಳು ಸಂಚಾರ ಮಾಡಲಿದೆ. ರಾಜ್ಯ ಮತ್ತು
ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.20, 21ರಂದು ವಿಶೇಷ ಬಸ್‌ಗಳು ಸಂಚರಿಸಲಿದೆ.

ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮೊದಲಾದ ಸ್ಥಳಗಳಿಗೆ ಹಾಗೂ ಹೈದರಬಾದ್‌, ಚೆನ್ನೈ, ಊಟಿ, ಕೊಡೈಕೆನಾಲ್‌, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ, ಏರ್ನಾಕುಲಂ, ಪಾಲ್ಗಾಟ್‌ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. 

ಮೈಸೂರಿಗೆ 300 ವಿಶೇಷ ಬಸ್‌: ನಗರದ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 150 ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡ ಲಾಗಿದೆ. ಮೈಸೂರು ಸುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆಆರ್‌ಎಸ್‌ ಅಣೆಕಟ್ಟು, ಬೃಂದಾವನ, ಶ್ರೀರಂಗಪಟ್ಟಣ, ನಂಜನ ಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್‌.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್‌.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 150 ವಾಹನಗಳು ಸೇರಿ 300 ವಿಶೇಷ ಬಸ್‌ ಸಂಚರಿಸಲಿದೆ.

Advertisement

ಕೆಎಸ್‌ಆರ್‌ಟಿಟಿ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಮನ್ವಯದಲ್ಲಿ ಮೈಸೂರು ನಗರದಲ್ಲಿನ
ಪ್ರಮುಖ ಪ್ರವಾಸಿ ತಾಣಗಳಿಗೆ ಹೋಪ್‌ ಆನ್‌-ಹೋಪ್‌ಆಫ್ ವೋಲ್ವೋ ನಗರ ಸಾರಿಗೆ ಬಸ್‌ ಸೇವೆ ಅ.20ರ ವರೆಗೂ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣದರ 150 ರೂ. ನಿಗದಿ ಪಡಿಸಲಾಗಿದೆ. 

ಫ್ಲೈ ಬಸ್‌ ಸೇವೆ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್‌ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಆನ್‌ಲೈನ್‌ ಬುಕ್ಕಿಂಗ್‌ ಆಗಿ www.ksrtc.in ಸಂಪರ್ಕಿಸಬಹುದು.
ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿ ಕರಿಗೆ ಹಾಗೂ ಪ್ರವಾಸಿಗರಿಗೆ ನಿಗಮದ ಸಾರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯಲಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯ್ತಿ ಇದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸಿಗರ ಸೆಳೆಯಲು ಹಲವು ಪ್ಯಾಕೇಜ್‌
ಗಿರಿದರ್ಶಿನಿ ವ್ಯವಸ್ಥೆಯಡಿ ಬಂಡೀಪುರ, ಗೋಪಾಲ ಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಪ್ಯಾಕೇಜ್‌ಗೆ ವಯಸ್ಕರಿಗೆ 350 ರೂ. ಹಾಗೂ ಮಕ್ಕಳಿಗೆ 175 ರೂ. ನಿಗದಿ ಮಾಡಲಾಗಿದೆ. ಜಲದರ್ಶಿನಿ ಪ್ಯಾಕೇಜ್‌ನಲ್ಲಿ ಬೈಲಕುಪ್ಪೆ ಸ್ವರ್ಣಮಂದಿರ, ದುಬಾರೆ ಅರಣ್ಯ ನಿಸರ್ಗಧಾಮ, ರಾಜಸೀಟ್‌, ಹಾರಂಗಿ ಜಲಾಶಯ ಮತ್ತು ಕೆ.ಆರ್‌. ಎಸ್‌ಗೆ ವಯಸ್ಕರಿಗೆ 375 ರೂ. ಹಾಗೂ ಮಕ್ಕಳಿಗೆ 190ರೂ., ದೇವದರ್ಶಿನಿಯಡಿ ನಂಜನಗೂಡು, ಬ್ಲಿಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಕ್ಕೆ ವಯಸ್ಕರಿಗೆ 275 ರೂ., ಮಕ್ಕಳಿಗೆ 140 ರೂ. ಶುಲ್ಕ ನಿಗದಿ ಮಾಡಲಾಗಿದೆ. ಈ ಎಲ್ಲ ವಾಹನಗಳು, ಬೆಳಗ್ಗೆ ಮೈಸೂರಿನಿಂದ ಹೊರಟು ವಿವಿಧ ಸ್ಥಳಗಳನ್ನು ಸಂದರ್ಶಿಸಿ, ಸಾಯಂಕಾಲ ಮೈಸೂರಿಗೆ ವಾಪಾಸ್‌ಆಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next