ಬೆಂಗಳೂರು: ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯುವ ಉದ್ದೇಶದಿಂದ ಚುನಾವಣಾ ಆಯೋಗ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 250 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದರು.
ಬಿಬಿಎಂಪಿ, ವಾರ್ತಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಚುನಾವಣಾ ಆಯೋಗದ ಸಹಯೋಗದಲ್ಲಿ ಮಂಗಳವಾರ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಿದ್ದ “ಸಖಿ ಮಾದರಿ ಮತಗಟ್ಟೆ’ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಮತದಾರರ ಸಂಖ್ಯೆಗೆ ಅನುಗುಣವಾಗಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 8,500 ಮತಗಟ್ಟೆಗಳಿದ್ದು, ಈ ಪೈಕಿ ಮಹಿಳೆಯರಿಗೆ 250 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 23 ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು.
ಈ ಬಾರಿ ಸಖಿ ಮತಗಟ್ಟೆಗಳನ್ನು ಪರಿಚಯಿಸಲಾಗುತ್ತಿದೆ. ಮಹಿಳಾ ಅಧಿಕಾರಿಗಳೇ ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಹಿಳೆಯರು ಮುಕ್ತ ಮತದಾನ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಸಖಿ ಮತಗಟ್ಟೆಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಪುರುಷರು ಮತಚಲಾಯಿಸಬಹುದು ಎಂದು ಹೇಳಿದರು.
ಮತದಾನ ಪ್ರಕ್ರಿಯೆಯಲ್ಲಿ ಮಹಿಳಾ ಮತದಾರರು ಕಡಿಮೆಯಾಗುತ್ತಿರುವುದರಿಂದ, ಮಹಿಳೆಯರಿಗಾಗಿಯೇ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಸಖಿ ಮತಗಟ್ಟೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.
ನಟಿ ಪಾವನಿ, ರೂಪದರ್ಶಿಯರಾದ ಮಮತಾ, ಪ್ರತಿಭಾ ಸಂಜೀವ್ ಮಠ, ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ.ವೆಂಕಟೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.