Advertisement

ಶಿಥಿಲಾವಸ್ಥೆಯಲ್ಲಿ 25 ವರ್ಷ ಹಿಂದಿನ ನೀರಿನ ಟ್ಯಾಂಕ್‌

11:56 PM Jan 20, 2021 | Team Udayavani |

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ದೊಂಡೇರಂಗಡಿ ಪಿಲತಕಟ್ಟೆ ಕುಂಜದಲ್ಲಿರುವ ನೆಲಮಟ್ಟದಲ್ಲಿರುವ ನೀರಿನ ಟ್ಯಾಂಕ್‌ ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಈಗ ಶಿಥಿಲಗೊಂಡಿದೆ. ಇದರಿಂದ ಜೀವಜಲ ವ್ಯರ್ಥವಾಗುತ್ತಿದೆ.

Advertisement

ಸುಮಾರು 50 ಸಾವಿರ ಲೀಟರ್‌ ಸಾಮರ್ಥ್ಯದ ಈ ಟ್ಯಾಂಕ್‌ ದೊಂಡೇರಂಗಡಿ ಪ್ರದೇಶಕ್ಕೆ ನೀರು ಪೂರೈಸುವ ಮೂಲವಾಗಿದೆ. 1995ನೇ ಸಾಲಿನಲ್ಲಿ ನಿರ್ಮಾಣಗೊಂಡ ಟ್ಯಾಂಕ್‌ನಿಂದ ಪ್ರಸ್ತುತ ಸುಮಾರು 175 ಕುಟುಂಬಗಳು ನೀರಿನ ಸಂಪರ್ಕ ಪಡೆದಿವೆ.

ದೊಂಡೇರಂಗಡಿ ಕುಕ್ಕಜೆಯ ಪಾಣಾರ ಕಾಲನಿ, ದೊಂಡೇರಂಗಡಿ ಪೇಟೆ, ಪೆಲತ್ತಕಟ್ಟೆ, ಇಸಾರ್‌ಮಾರ್‌, ಬುಕ್ಕಿಗುಡ್ಡೆ, ಕಾಲೇಜು ರಸ್ತೆ, ಗದ್ದಿಗೆ ಪ್ರದೇಶಗಳಿಗೆ ಇದರಿಂದಲೇ ನೀರು ಪೂರೈಕೆಯಾಗುತ್ತಿದೆ.

ಸ್ಲ್ಯಾಬ್‌ಗಳಿಗೆ ಹಾನಿ :

ಟ್ಯಾಂಕ್‌ ಶಿಥಿಲಗೊಂಡು ನೀರು ಸೋರಿಕೆ ಯಾಗುತ್ತಿರುವುದರಿಂದ ಟ್ಯಾಂಕ್‌ನ ಸ್ಲಾಬ್‌ಗಳಿಗೂ ಹಾನಿಯಾಗಿದೆ. ಅಲ್ಲದೇ ಒತ್ತಡ ಕಡಿಮೆಯಾಗಿ ಜನ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಎತ್ತರದ ಪ್ರದೇಶಗಳಿಗೆ ನೀರೇ ಬಾರದ ಸ್ಥಿತಿ ಇದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಸೋರಿಕೆಯಿಂದಾಗಿ ಟ್ಯಾಂಕ್‌ ಕುಸಿಯುವ ಅಪಾಯವೂ ಇದ್ದು ಹಾಗಾದರೆ ನೀರಿಗಾಗಿ ಪರದಾಡಬೇಕಾಗುತ್ತದೆ. ಗ್ರಾಮದ ಇನ್ನಷ್ಟು ಮಂದಿ  ನಳ್ಳಿ ನೀರಿನ ಸಂಪರ್ಕ ಪಡೆಯಲಿರುವುದರಿಂದ  ಹೊಸದಾಗಿ ಇನ್ನೊಂದು ಕೊಳವೆ ಬಾವಿ ನಿರ್ಮಿಸಿ ಮೋಟಾರ್‌ ಅಳವಡಿಸುವ ಅಗತ್ಯವಿದೆ. ಬೇಸಗೆಯಲ್ಲಿ ಈ ಭಾಗದಲ್ಲಿ ಬಹುತೇಕ ಖಾಸಗಿ ಬಾವಿಗಳು ಬರಿದಾಗಿ ಕುಡಿಯುವ ನೀರಿಗೆ ಸಂಕಷ್ಟ ಪಡಬೇಕಾಗುತ್ತದೆ. ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣದಿಂದ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಕಾಣಬಹುದಾಗಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಪಂಚಾಯತ್‌ಗೆ ಆದಾಯ :

ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣದಿಂದ ಹೆಚ್ಚಿನ ಮನೆಗೆ ನೀರು ಪೂರೈಕೆ ಮಾಡಬಹುದಾದ್ದರಿಂದ ಪಂಚಾಯತ್‌ಗೂ ಆದಾಯ ಹೆಚ್ಚಾಗಲಿದೆ. ನೀರು ಪೂರೈಕೆಯಲ್ಲಿ ಸಮಸ್ಯೆ ಇಲ್ಲದಿದ್ದರೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ನಳ್ಳಿ ನೀರಿನ ಸಂಪರ್ಕ ಪಡೆಯುವುದಾಗಿ ಹೇಳುತ್ತಾರೆ. ಇದರಿಂದ ನೀರಿನ ಬಿಲ್ಲು ಪಂಚಾಯತ್‌ಗೆ ನೇರವಾಗಿ ಪಾವತಿಯಾಗುವುದರಿಂದ ಪಂಚಾಯತ್‌ ಆದಾಯ ಹೆಚ್ಚಾಗಲಿದೆ.

ದೊಂಡೇರಂಗಡಿ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಟ್ಯಾಂಕ್‌ ತೀರಾ ಹಳೆಯದಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಶೀಘ್ರವಾಗಿ ಆಗುವಂತೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.-ಪ್ರಸನ್ನ ದೇವಾಡಿಗ, ಸ್ಥಳೀಯರು

ಜಲಜೀವನ್‌ ಮಿಷನ್‌ ಯೋಜನೆಯಡಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅಂದಾಜು ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗಿದೆ. ತ್ವರಿತವಾಗಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.-ಫ‌ರ್ಜಾನಾ ಎಂ., ಪಿಡಿಒ ಕಡ್ತಲ ಗ್ರಾ.ಪಂ.

 

ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next