Advertisement
ಇದಕ್ಕಾಗಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕ್ವಾರಂಟೈನ್ ವ್ಯವಸ್ಥೆಯನ್ನು ಆಯಾ ತಾಲೂಕುಗಳಲ್ಲಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸೂಚಿಸಿದರು.
Related Articles
ಶಾಸಕ ಯು.ಟಿ. ಖಾದರ್ ಮಾತನಾಡಿ, ಜಿಲ್ಲೆಗೆ ಬರುವವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ತಮ್ಮ ಮನೆ ಅಥವಾ ಸಂಬಂಧಿಕರ ಮನೆಗಳಲ್ಲಿ ಕ್ವಾರಂಟೈ ನ್‌ಗೆ ಒಳಪಡಲು ಇಚ್ಛಿಸಿದರೆ, ಸೂಕ್ತ ಕ್ರಮಗಳೊಂದಿಗೆ ಅವಕಾಶ ಕಲ್ಪಿಸಿದರೆ ಉತ್ತಮ ಎಂದರು.
Advertisement
ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಮಾತನಾಡಿ, ತುರ್ತು ಆರೋಗ್ಯ ಸಂದರ್ಭವಾದ ಕಾರಣ ಖಾಸಗಿ ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳ ರೂಂಗಳನ್ನು ಪಡೆಯಬೇಕು ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಖಾಸಗಿ ವೈದ್ಯಕೀಯ, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳನ್ನು ಕೂಡಾ ಬಳಸಿಕೊಳ್ಳಬೇಕು ಎಂದರು. ವಿ.ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಸಾಕಷ್ಟು ಸಂಖ್ಯೆಯಲ್ಲಿ ಗರ್ಭಿಣಿಯರೂ ಆಗಮಿಸುವುದರಿಂದ ಅವರಿಗೆ ಹೋಂ ಕ್ವಾರಂಟೈನ್‌ಗೆ ವಿಶೇಷ ಆದ್ಯತೆ ನೀಡಿ ಎಂದರು.
ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ, ನಳಿನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ್ ನಾೖಕ್, ಡಾ| ವೈ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಆಗ್ರಹಿಸಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತಿತರಿದ್ದರು.
ತುರ್ತು ಅಗತ್ಯಕ್ಕೆ ಅವಕಾಶಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಮಾತನಾಡಿ, ಕೇಂದ್ರ ಸರಕಾರದ ಆದೇಶದ ಪ್ರಕಾರ ಪ್ರಸ್ತುತ ಆ ಅರ್ಜಿಗಳಲ್ಲಿ ಕುಟುಂಬದಲ್ಲಿ ಮರಣ ಸೇರಿದಂತೆ ತುರ್ತು ಆಗಮನ, ಗರ್ಭಿಣಿಯರು, ವೈದ್ಯಕೀಯ ಸೌಲಭ್ಯ ಪಡೆಯಬೇಕಾದವರು, ಪ್ರವಾಸಕ್ಕೆ ತೆರಳಿ ಬಾಕಿಯಾಗಿರುವವರು, ವಿದ್ಯಾರ್ಥಿಗಳು, ಹೊರ ದೇಶಗಳಿಂದ ಬಂದು ಇತರ ರಾಜ್ಯಗಳಲ್ಲಿ ಬಾಕಿಯಾದವರು, ವಜಾಗೊಂಡ ಕಾರ್ಮಿಕರು ಸೇರಿದಂತೆ ತುರ್ತು ಅಗತ್ಯಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದರು. ಸೋಂಕಿನ ಲಕ್ಷಣ ಇದ್ದರೆ ವೆನ್ಲಾಕ್‌ಗೆ
ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಗೆ ಆಗಮಿಸುತ್ತಿರುವವರಲ್ಲಿ ಮೇಲ್ನೋಟಕ್ಕೆ ಸೋಂಕಿನ ಗುಣ ಲಕ್ಷಣ ಕಂಡು ಬಂದರೆ ಮಾತ್ರ ಅಂಥವರನ್ನು ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್‌ಗೆ ದಾಖಲಿಸಲಾಗುತ್ತದೆ. ಉಳಿದವರನ್ನು ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುವುದು. ಈ ಕುರಿತಂತೆ ಯಾವುದೇ ಗೊಂದಲದ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು. ‘ಮೂಲ ಪತ್ತೆ ಮಾಡಿಯೇ ಸಿದ್ಧ ‘
ಜಿಲ್ಲೆಯಲ್ಲಿ ಕೋವಿಡ್ ಹರಡಿರುವುದರ ಮೂಲ ಪತ್ತೆಯಲ್ಲಿ ತಜ್ಞರನ್ನೊಳಗೊಂಡ ಜಿಲ್ಲಾ ಮಟ್ಟದ ತಂಡ ಮಧ್ಯಾಂತರ ವರದಿ ನೀಡಿದೆ. ಆದರೆ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಸೋಂಕು ಪತ್ತೆಯಾದ ಸಂದರ್ಭ ಕೇರಳದ ರೋಗಿಗಳು ಅಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿರುವುದರಿಂದ ಆ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿದ್ದು, ತಂಡವು ಕಾಲಾವಕಾಶ ಕೋರಿದೆ. ಆದರೆ ಮೂಲ ಶೋಧನೆ ಮಾಡದೆ ಬಿಡುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ‘ಕೋವಿಡ್ ಮೂಲ ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎನ್ನುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಆರೋಪಕ್ಕೆ ಸಚಿವರು ಈ ಉತ್ತರ ನೀಡಿದರು. ಕೇರಳದ ಮಾಹಿತಿಗಳು ಬರಲು ಕೊಂಚ ಕಾಲಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೆ ಕಾಯೋಣ ಎಂದರು. ಇದಕ್ಕೆ, ‘ಬಂಟ್ವಾಳದ ಮಹಿಳೆ ಮೃತಪಟ್ಟು 18 ದಿನಗಳಾದರೂ ಇನ್ನೂ ತನಿಖಾ ವರದಿ ಸಿದ್ಧಪಡಿಸಲು ಆಗಿಲ್ಲ ಎಂದರೆ ಇದು ವೈಫಲ್ಯವಲ್ಲವೇ?’ ಎಂದು ಐವನ್ ಪ್ರಶ್ನಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಮಾತನಾಡಿ, ಮೈಕ್ರೋ ಬಯಾಲಜಿಸ್ಟ್ ಡಾ| ಆನಂದ್ ಅವರನ್ನೊಳಗೊಂಡ 6 ಮಂದಿಯ ತಂಡ ಪ್ರಕರಣದ ಕುರಿತಂತೆ ಮೂರು ದಿಕ್ಕಿನಲ್ಲಿ ಪರಿಶೀಲನೆ ನಡೆಸುತ್ತಿದೆ. ಬಂಟ್ವಾಳ ಕಸ್ಬಾದ ಮೃತಪಟ್ಟ ಮಹಿಳೆ, ಫಸ್ಟ್ ನ್ಯೂರೊ ಆಸ್ಪತ್ರೆ ಹಾಗೂ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೇರಳ- ಕಾಸರಗೋಡಿನ ರೋಗಿಗಳ ಕುರಿತಂತೆಯೂ ಪರಿಶೀಲನೆ ಮಾಡಲಾಗುತ್ತಿದೆ ಎಂದರು. ಶಾಸಕ ಡಾ| ಭರತ್ ಶೆಟ್ಟಿ, ಯು.ಟಿ ಖಾದರ್ ಮಾತನಾಡಿದರು.