Advertisement
ರಾಜ್ಯ ಸರಕಾರ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ವಿಧವೆಯರು, ಅಂಗವಿಕಲರು, ತೃತೀಯ ಲಿಂಗಿಗಳು, ಪರಿತ್ಯಕ್ತರು ಸೇರಿ ಸುಮಾರು 67 ವರ್ಗಗಳ ಜನರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡುತ್ತದೆ. ಅನೇಕ ವರ್ಷಗಳಿಂದ ಈ ವರ್ಗಗಳ ಜನರಿಗೆ ಮನೆ ಹಂಚಿಕೆ ಮಾಡಿಲ್ಲ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮೈತ್ರಿ ಸರಕಾರ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿಯೂ ವಿಶೇಷ ವರ್ಗಗಳಿಗೆ ಯಾವುದೇ ಮನೆ ಹಂಚಿಕೆಯಾಗಿಲ್ಲ.
Related Articles
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಿಶೇಷ ವರ್ಗಗಳ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಮೂಲಕ ವಿಶೇಷ ವರ್ಗಗಳ ಫಲಾನುಭವಿಗಳಿಗೆ ಆಶ್ರಯ ಮನೆ ಹಂಚಿಕೆ ಮಾಡಲು ತೀರ್ಮಾನಿಸಿ, ಜಿಲ್ಲಾವಾರು ಪಂಚಾಯತ್ ಮಟ್ಟದಲ್ಲಿ ವಿಶೇಷ ವರ್ಗಗಳ ಫಲಾನುಭವಿಗಳ ಪಟ್ಟಿಯನ್ನೂ ಸಿದ್ದಪಡಿಸಿ, ಜಿಲ್ಲಾಡಳಿತಗಳ ಮೂಲಕ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗಿದೆ.
Advertisement
ಈಗಿರುವ ಮಾಹಿತಿ ಪ್ರಕಾರ ಹಿಂದಿನ ಸರಕಾರದ ಅವಧಿಯಲ್ಲಿ ಆಯ್ಕೆಯಾಗಿರುವ ವಿಶೇಷ ವರ್ಗಗಳ ಸುಮಾರು 53 ಸಾವಿರ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರಕಾರ ರದ್ದುಪಡಿಸಿದ್ದು, ಹೊಸದಾಗಿ ಮತ್ತೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲು ರಾಜೀವ್ ಗಾಂಧಿ ವಸತಿ ನಿಗಮ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಆಯ್ಕೆಯಾದವರ ಪಟ್ಟಿಯನ್ನು ನಿಗದಿತ ಸಮಯದಲ್ಲಿ ಜಿಲ್ಲಾಡಳಿತಗಳು ನಿಗಮಕ್ಕೆ ಸಲ್ಲಿಸದೆ ಇರುವುದರಿಂದ ಹಾಗೂ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳದೆ ಇರುವುದರಿಂದ ಹೊಸ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆ ಪಡೆಯಲು ಹಿಂದೇ ಟುವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗಗಳ ಫಲಾನುಭವಿಗಳಿಗೆ ನೀಡುವ ಅನುದಾನದಲ್ಲಿ ವ್ಯತ್ಯಾಸವಿದ್ದು, ವಿಶೇಷ ವರ್ಗಗಳ ಫಲಾನುಭವಿಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗಗಳಿಗೂ ಒಂದೇ ರೀತಿಯ ಅನುದಾನ ನೀಡಲಾಗುತ್ತದೆ. ಹೀಗಾಗಿ ಈ ವರ್ಗದಲ್ಲಿ ಮನೆಗಳನ್ನು ತೆಗೆದುಕೊಳ್ಳಲು ಫಲಾನುಭವಿಗಳು ಹಿಂದೇಟು ಹಾಕುತ್ತಾರೆಂಬ ಅಭಿಪ್ರಾಯ ನಿಗಮದಲ್ಲಿದೆ. – ಶಂಕರ ಪಾಗೋಜಿ