Advertisement

25 ಸಾವಿರ ಹೆಕ್ಟೇರ್‌ ಪ್ರದೇಶದ ಕಬ್ಬು ಬೆಳೆ ಹಾನಿ

12:47 PM Jul 17, 2019 | Suhan S |

ಮಂಡ್ಯ: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿತು ಎಂಬಂತೆ ಬೆಳೆ ಒಣಗಿದ ಮೇಲೆ ನೀರು ಬಿಟ್ಟರೆ ಏನು ಪ್ರಯೋಜನ. ರೈತರು ನೀರಿಗಾಗಿ ಕೂಗಿಟ್ಟಾಗಲೇ ನಾಲೆಗಳಿಗೆ ನೀರು ಹರಿಸಿದ್ದರೆ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದ ಜಿಲ್ಲೆಯ 25218 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹಾನಿಗೊಳಗಾಗಿದೆ.

Advertisement

ಜಿಲ್ಲೆಯ 35268 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆದು ನಿಂತಿದೆ. ಈ ಪೈಕಿ 25218 ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದ್ದು, 10050 ಹೆಕ್ಟೇರ್‌ ಪ್ರದೇಶದ ಕಬ್ಬು ಬೆಳೆ ಉತ್ತಮ ಸ್ಥಿತಿಯಲ್ಲಿದೆ. 5401 ಹೆಕ್ಟೇರ್‌ನಲ್ಲಿರುವ ಕಬ್ಬು ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಗಿದೆ.

ಇದೀಗ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಿರುವುದರಿಂದ 19817 ಹೆಕ್ಟೇರ್‌ನಲ್ಲಿರುವ ಬೆಳೆ ಚೇತರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದು, ಇದರಲ್ಲೂ ಪೂರ್ಣ ಪ್ರಮಾಣದ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಮಂಡ್ಯ ತಾಲೂಕಲ್ಲಿ ಹೆಚ್ಚು ಹಾನಿ: ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಕಬ್ಬು ಬೆಳೆ ಹಾನಿಗೊಳಗಾಗಿರುವುದರಲ್ಲಿ ಮಂಡ್ಯ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಈ ತಾಲೂಕಿನಲ್ಲಿರುವ 13754 ಹೆಕ್ಟೇರ್‌ ಕಬ್ಬಿನಲ್ಲಿ 10972 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಗೆ ಹಾನಿ ಸಂಭವಿಸಿದೆ. 2782 ಹೆಕ್ಟೇರ್‌ನಷ್ಟು ಬೆಳೆ ಉತ್ತಮ ಸ್ಥಿತಿಯಲ್ಲಿದ್ದರೆ, 3294 ಹೆಕ್ಟೇರ್‌ ಬೆಳೆ ನಾಶವಾಗಿದೆ. ನೀರು ದೊರಕಿದರೆ 7678 ಹೆಕ್ಟೇರ್‌ನಲ್ಲಿರುವ ಬೆಳೆ ಚೇತರಿಕೆ ಕಾಣುವ ಲಕ್ಷಣಗಳಿವೆ.

ಮದ್ದೂರಲ್ಲಿ 1090 ಹೆಕ್ಟೇರ್‌ನಲ್ಲಿ ಬೆಳೆ ನಾಶ: ಮದ್ದೂರು ತಾಲೂಕಿನ ಒಟ್ಟು 8174 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 5539 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, 1545 ಹೆಕ್ಟೇರ್‌ನಲ್ಲಿ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. 1090 ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದ್ದು, 5539 ಹೆಕ್ಟೇರ್‌ ಪ್ರದೇಶದ ಬೆಳೆಗೆ ನೀರು ದೊರಕಿದರೆ ಇಳುವರಿಯಲ್ಲಿ ಪ್ರಗತಿ ಕಾಣುವ ಸಾಧ್ಯತೆಗಳಿವೆ.

Advertisement

ಮಳವಳ್ಳಿಯಲ್ಲಿ 165 ಹೆಕ್ಟೇರ್‌ ಬೆಳೆ ಹಾನಿ: ಮಳವಳ್ಳಿ ತಾಲೂಕಿನಲ್ಲಿರುವ 951 ಹೆಕ್ಟೇರ್‌ನಲ್ಲಿರುವ ಕಬ್ಬು ಬೆಳೆಯಲ್ಲಿ 625 ಹೆಕ್ಟೇರ್‌ ಬೆಳೆ ಹಾನಿಗೊಳಗಾಗಿದೆ. ಕೇವಲ 326 ಹೆಕ್ಟೇರ್‌ನಲ್ಲಿರುವ ಕಬ್ಬು ಉತ್ತಮ ಸ್ಥಿತಿಯಲ್ಲಿದ್ದು, 165 ಹೆಕ್ಟೇರ್‌ ಬೆಳೆ ಪೂರ್ಣ ಹಾನಿಗೊಳಗಾಗಿದೆ. 460 ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ನೀರು ದೊರಕಿದರೆ ಚೇತರಿಕೆ ಕಾಣಬಹುದು.

ಶ್ರೀರಂಗಪಟ್ಟಣದಲ್ಲಿ 1002 ಹೆಕ್ಟೇರ್‌ನಲ್ಲಿ ಬೆಳೆ ತ್ತಮ ಸ್ಥಿತಿ: ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ 2059 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 1057 ಹೆಕ್ಟೇರ್‌ನಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿದೆ. 1002 ಹೆಕ್ಟೇರ್‌ನಲ್ಲಿ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು, 83 ಹೆಕ್ಟೇರ್‌ನಲ್ಲಿ ಸಂಪೂರ್ಣ ಹಾನಿಯಾಗಿದೆ. ಈ ಬೆಳೆಗೆ ನೀರು ಹರಿಸಿದರೂ ಚೇತರಿಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. 974 ಹೆಕ್ಟೇರ್‌ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ನೀರು ದೊರೆತರಷ್ಟೇ ಬೆಳೆಯ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ.

ಪಾಂಡವಪುರದಲ್ಲಿ ಒಣಗುತ್ತಿದೆ ಕಬ್ಬು: ಪಾಂಡವಪುರ ತಾಲೂಕಿನ 3767 ಹೆಕ್ಟೇರ್‌ ಪ್ರದೇಶದಲ್ಲಿರುವ ಕಬ್ಬಿನ ಪೈಕಿ 2938 ಹೆಕ್ಟೇರ್‌ನಲ್ಲಿರುವ ಕಬ್ಬು ಒಣಗುತ್ತಿದೆ. 3829 ಹೆಕ್ಟೇರ್‌ನಲ್ಲಿರುವ ಕಬ್ಬು ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ನೀರು ಹರಿಸಿದರೂ ಚೇತರಿಕೆ ಕಾಣಲಾಗದೆ ಸಂಪೂರ್ಣ ಹಾನಿಗೊಳಗಾಗಿರುವ ಕಬ್ಬಿನ ಪ್ರದೇಶ 302 ಹೆಕ್ಟೇರ್‌ನಷ್ಟಿದೆ. 2636 ಹೆಕ್ಟೇರ್‌ ಪ್ರದೇಶದಲ್ಲಿರುವ ಕಬ್ಬಿಗೆ ನೀರು ಸಿಕ್ಕರೆ ಚೇತರಿಕೆ ಕಾಣಬಹುದು.

ಕೆ.ಆರ್‌.ಪೇಟೆಯಲ್ಲಿ 442 ಹೆಕ್ಟೇರ್‌ನಲ್ಲಿ ಬೆಳೆ ಸಂಪೂರ್ಣ ಹಾನಿ: ಕೆ.ಆರ್‌.ಪೇಟೆ ತಾಲೂಕಿನ 6411 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆದು ನಿಂತಿದೆ. ಇದರಲ್ಲಿ 2870 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಒಣಗುವ ಸ್ಥಿತಿಯಲ್ಲಿದೆ. 3541 ಹೆಕ್ಟೇರ್‌ನಲ್ಲಿರುವ ಕಬ್ಬು ಉತ್ತಮ ಸ್ಥಿತಿಯಲ್ಲಿದ್ದು, 442 ಹೆಕ್ಟೇರ್‌ನಲ್ಲಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. 2428 ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ನೀರು ದೊರೆತರಷ್ಟೇ ಇಳುವರಿ ಸುಧಾರಣೆ ಕಾಣಲು ಸಾಧ್ಯವಾಗುವ ಸಂಭವವಿದೆ.

ನಾಗಮಂಗಲ ತಾಲೂಕಿನಲ್ಲಿರುವ 152 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 127 ಹೆಕ್ಟೇರ್‌ನಲ್ಲಿ ಕಬ್ಬು ಒಣಗುತ್ತಿದ್ದು, 25 ಹೆಕ್ಟೇರ್‌ನಲ್ಲಷ್ಟೇ ಬೆಳೆ ಸುಸ್ಥಿತಿಯಲ್ಲಿದೆ. 25 ಹೆಕ್ಟೇರ್‌ನಲ್ಲಿ ಕಬ್ಬು ಪೂರ್ಣ ಒಣಗಿದ್ದು,102 ಹೆಕ್ಟೇರ್‌ ಪ್ರದೇಶದ ಕಬ್ಬಿಗೆ ನೀರು ದೊರೆತರಷ್ಟೇ ಉಳಿಯುವ ಸಾಧ್ಯತೆಗಳಿವೆ.

ಹೆಚ್ಚಿದ ಗಾಳಿಯಿಂದ ಇಳುವರಿ ಕುಸಿತ:

ಬಿಸಿಲಿನ ಪ್ರಮಾಣ ಹೆಚ್ಚಿದ್ದರೂ ಗಾಳಿಯ ತೀವ್ರತೆ ಹೆಚ್ಚಿರಬಾರದು. ಬಿಸಿಲಿನ ತಾಪದಿಂದ ಕಬ್ಬಿನ ಮೇಲ್ಭಾಗವಷ್ಟೇ ಒಣಗಿದಂತೆ ಕಂಡುಬರುತ್ತದೆ. ಈ ಬಾರಿ ಬಿಸಿಲಿನ ತೀವ್ರತೆ, ಮಳೆಯ ಕೊರತೆ, ನೀರಿನ ಅಬಾವದ ಜೊತೆಗೆ ಗಾಳಿಯ ತೀವ್ರತೆಯೂ ಹೆಚ್ಚಿತ್ತು. ವಾತಾವರಣದಲ್ಲಿ ಬೀಸುವ ಗಾಳಿಯ ಪ್ರಮಾಣ ಹೆಚ್ಚಿದ್ದರೆ ಭೂಮಿಯೊಳಗಿನ ತೇವಾಂಶವನ್ನೂ ಅದು ಕಡಿಮೆ ಮಾಡಿಬಿಡುತ್ತದೆ. ಇದರಿಂದ ಬೆಳೆಯ ಇಳುವರಿ ವೇಗವಾಗಿ ಕುಸಿಯುತ್ತದೆ. ಇದು ಬೆಳೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ರೈತ ಹನಿಯಂಬಾಡಿ ನಾಗರಾಜು.
ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ:

ಒಂದು ಅಂದಾಜಿನ ಪ್ರಕಾರ ಕಬ್ಬು ಬೆಳೆಯ ಒಟ್ಟು ವಿಸ್ತೀರ್ಣದಲ್ಲಿ 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹಾನಿಗೊಳಗಾಗಿದೆ. ಈಗ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಂಡಿದೆ. ನೀರು ಹರಿಸಿದ ಹತ್ತು ದಿನಗಳ ಬಳಿಕ ಮತ್ತೂಮ್ಮೆ ಕಬ್ಬು ಬೆಳೆ ಹಾನಿಯ ಸಮೀಕ್ಷೆ ನಡೆಸಲಾಗುವುದು. ಆಗ ನಮಗೆ ಜಿಲ್ಲೆಯ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿದೆ ಎಂಬ ನಿಖರತೆ ಗೊತ್ತಾಗಲಿದೆ. ಇದೀಗ ಬೆಳೆ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಅಲಸಂದೆ, ಉದ್ದು, ಎಳ್ಳು ಜಿಲ್ಲೆಯಲ್ಲಿ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಆ್ಯಪ್‌ ಮೂಲಕ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದ್ದಾರೆ.
● ಮಂಡ್ಯ ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next