ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ದಾಖಲೆಯ 1,664 ಕೋವಿಡ್ 19 ಸೋಂಕು ಪೀಡಿತರು ಗುಣಮುಖರಾಗಿದ್ದಾರೆ.
ಸೋಮವಾರ ಈ ಸಂಖ್ಯೆ 730 ಆಗಿತ್ತು, ಇದು ದಾಖಲೆಯ ಜಿಗಿತವಾಗಿದೆ.
ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 25 ಸಾವಿರದ ಗಡಿ ದಾಟಿದೆ.
ಜತೆಗೆ ಮಂಗಳವಾರ 3,649 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದರೆ 61 ಸೋಂಕು ಪೀಡಿತರು ಸಾವಿಗೀಡಾಗಿದ್ದಾರೆ.
Related Articles
ರಾಜ್ಯದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 71,069ಕ್ಕೆ, ಸಾವು 1,464ಕ್ಕೆ, ಗುಣಮುಖರ ಸಂಖ್ಯೆ 25,459ಕ್ಕೆ ಏರಿದೆ.
ಸದ್ಯ 44,140 ಮಂದಿ ಸೋಂಕು ಪೀಡಿತರು ಆಸ್ಪತ್ರೆ, ಕೋವಿಡ್ 19 ಕೇರ್ ಸೆಂಟರ್ ಮತ್ತು ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಕಳೆದ ಎರಡು ವಾರದಿಂದ ದಿನವೂ ಸರಾಸರಿ ಒಂದು ಸಾವಿರ ಮಂದಿ ಗುಣಮುಖರಾಗುತ್ತಿದ್ದಾರೆ.
ಅರ್ಧಕ್ಕಿಳಿದ ಪಾಸಿಟಿವಿಟಿ ದರ
ಕಳೆದ ಗುರುವಾರ, ಜು.16ರಂದು ರಾಜ್ಯದಲ್ಲಿ ಹೆಚ್ಚು ಪಾಸಿಟಿವಿಟಿ ದರ ಶೇ.17.7 ದಾಖಲಾಗಿತ್ತು. ಅಂದು ಪರೀಕ್ಷೆಗೊಳಪಟ್ಟ ಪ್ರತೀ 100 ಮಂದಿಯಲ್ಲಿ 17ರಷ್ಟು ಪಾಸಿಟಿವಿಟಿ ಇತ್ತು. ಆದರೆ ಮಂಗಳವಾರ ಪಾಸಿಟಿವಿಟಿ ಪ್ರಮಾಣ 8.3ಕ್ಕೆ ಇಳಿಕೆಯಾಗಿದ್ದು, ಮಂಗಳವಾರ ಪರೀಕ್ಷೆಗೊಳಪಟ್ಟ ಪ್ರತೀ 10 ಮಂದಿಯಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕು ಪರೀಕ್ಷೆ ಹೆಚ್ಚಳವಾದರೂ ಸೋಂಕು ಪ್ರಕರಣ ಹೆಚ್ಚಳವಾಗದಿರುವುದು ಸಮಾಧಾನಕರ ಅಂಶ.
ದ.ಕ., ಉಡುಪಿ: 233 ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 149 ಪಾಸಿಟಿವ್ ವರದಿಯಾಗಿವೆೆ. ಉಡುಪಿಯಲ್ಲಿ 84 ಪ್ರಕರಣಗಳು ವರದಿಯಾಗಿವೆ. 92 ಮಂದಿ ಗುಣಮುಖರಾಗಿದ್ದಾರೆ.
ಪುತ್ತಿಗೆ ಶ್ರೀಗಳಿಗೆ ಪಾಸಿಟಿವ್
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರಿಗೆ ಕೋವಿಡ್ 19 ಪಾಸಿಟಿವ್ ವರದಿಯಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.