ವಾಡಿ: ಶಾಲಾ ಕಟ್ಟಡದ ಸುತ್ತಲೂ ಬೆಳೆದಿದ್ದ ಪೊದೆಯಲ್ಲಿನ ವಿಷಕಾರಿ ಸಸ್ಯವೊಂದರ ಬೀಜದ ಕಾಯಿಗಳನ್ನು ತಿಂದು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಯಾಗಾಪುರ ಗ್ರಾಪಂ ವ್ಯಾಪ್ತಿಯ ಹಿರಾಮಣಿ ತಾಂಡಾದಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.
ಹೀರಾಮಣಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸುತ್ತಲೂ ದಟ್ಟವಾದ ಪೊದೆ ನಿರ್ಮಾಣವಾಗಿದೆ. ಮದ್ಯಾಹ್ನದ ಊಟದ ನಂತರ ವಿದ್ಯಾರ್ಥಿಗಳು ಆಟವಾಡುತ್ತ ಸಸ್ಯಗಳ ಸಮೀಪ ಹೋಗಿದ್ದಾರೆ. ವಿದ್ಯಾರ್ಥಿಯೋರ್ವ ಸಸ್ಯಯೊಂದರ ಬೀಜದ ಕಾಯಿಯನ್ನು ಕೀತ್ತು ತಿಂದಿದ್ದಾನೆ. ನಂತರ ಜತೆಗಿದ್ದ ಇತರ ವಿದ್ಯಾರ್ಥಿಗಳೂ ಸಹ ಬೀಜದ ಕಾಯಿಯನ್ನು ತಿಂದಿದ್ದಾರೆ ಎನ್ನಲಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ ಓರ್ವ ವಿದ್ಯಾರ್ಥಿಗೆ ಹೊಟ್ಟೆನೋವು ಉಂಟಾಗಿ ವಾಂತಿ ಮಾಡಿಕೊಂಡಿದ್ದಾನೆ. ವಾಂತಿಗೆ ಬೀಜದ ಕಾಯಿಯೇ ಕಾರಣವಾಗಿದೆ ಎಂದು ಸಂಶಯಪಟ್ಟ ಕಾಯಿ ತಿಂದ ಸಹಪಾಟಿ ವಿದ್ಯಾರ್ಥಿಗಳೆಲ್ಲರೂ ಆತಂಕಕ್ಕೊಳಗಾಗಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ಪುಷ್ಪಾ ತಿಳಿಸಿದ್ದಾರೆ.
ಮಕ್ಕಳು ಅಸ್ವಸ್ಥರಾದ ವಿಷಯ ತಿಳಿದು ಶಾಲೆಗೆ ಆಗಮಿಸಿದ ಪೋಷಕರು, 108 ಆರೋಗ್ಯ ಕವಚಕ್ಕೆ ಕರೆ ಮಾಡಿದ್ದಾರೆ. ಸಕಾಲದಲ್ಲಿ ವಾಹನ ಬಾರದ್ದಕ್ಕೆ ತಕ್ಷಣ ಖಾಸಗಿ ವಾಹನದಲ್ಲಿ ಸಮೀಪದ ಯರಗೋಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆಗಮಿಸಿದ
108 ವಾಹದ ಮೂಲಕ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಮಕ್ಕಳ ಆರೋಗ್ಯ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ವಾಡಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ ಜೆ. ಆಗಮಿಸಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.