ಲಕ್ನೋ: ಉತ್ತರ ಪ್ರದೇಶದ ಆಲಿಘಂಜ್‌ನಲ್ಲಿ ಗುರುವಾರ ಬೆಳಗ್ಗೆ ಶಾಲಾ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು , 25 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘೋರ ದುರಂತ ನಡೆದಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಾಲಾ ಬೇಜವಾಬ್ದಾರಿತನ ಮಕ್ಕಳ ಪ್ರಾಣ ಬಲಿ ಪಡೆಯಿತೆ?
ದಟ್ಟ ಮಂಜು ಕವಿದಿದ್ದುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ರಸ್ತೆಯಲ್ಲಿ ದೃಕ್ ಗೋಚರತೆ ಇಲ್ಲದೆ ಇದ್ದುದರಿಂದ ಬಸ್‌ಗೆ ಟ್ರಕ್ ಮುಖಾಮುಖಿಯಾಗಿ ಢಿಕ್ಕಿಯಾಗಿದೆ. ಢಿಕ್ಕಿಯ ಪರಿಣಾಮವಾಗಿ ಬಸ್ ಸಂಪೂರ್ಣ ಜಖಂಗೊಂಡಿದೆ.
ಮೃತ ವಿದ್ಯಾರ್ಥಿಗಳೆಲ್ಲರೂ ಎಸ್.ಜೆ .ಪಬ್ಲಿಕ್ ಶಾಲೆಯವರು ಎಂದು ತಿಳಿದು ಬಂದಿದೆ. ದಟ್ಟ ಮಂಜು ಕವಿದಿದ್ದ ಕಾರಣ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಡಳಿತ ಹೇಳಿತ್ತಾದರೂ ,ಎಸ್.ಜೆ.ಶಾಲೆ ಮಾತ್ರ ತರಗತಿಗಳನ್ನು ನಡೆಸಲು ಮುಂದಾಗಿತ್ತು.
ಘಟನೆ ನಡೆದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.