ವೇತನ ಹೊರತಾದ ಆದಾಯದಿಂದ ಕಡಿತಗೊಳ್ಳುತ್ತಿದ್ದ ಟಿಡಿಎಸ್ ಹಾಗೂ ಟಿಸಿಎಸ್ (ಮೂಲದಿಂದ ತೆರಿಗೆ ಸಂಗ್ರಹ) ಮೊತ್ತವನ್ನು ಶೇ.25ರಷ್ಟು ಕಡಿತಗೊಳಿಸುತ್ತಿರುವುದಾಗಿ ನಿರ್ಮಲಾ ಘೋಷಿಸಿದ್ದಾರೆ. ಈ ನಿರ್ಧಾರದಿಂದಾಗಿ 50 ಸಾವಿರ ಕೋಟಿ ರೂ. ಮೊತ್ತವು ತೆರಿಗೆಯಾಗಿ ಪಾವತಿಯಾಗುವ ಬದಲು, ಗುತ್ತಿಗೆ, ವೃತ್ತಿಪರ ಶುಲ್ಕ, ಬಡ್ಡಿ, ಬಾಡಿಗೆ, ಲಾಭಾಂಶ ವಿತರಣೆ, ಕಮಿಷನ್ ಮತ್ತು ಬ್ರೋಕರೇಜ್ ಆದಾಯವಾಗಿ ಬಳಕೆಗೆ ಸಿಗಲಿದೆ.
ಇದು ಗುರುವಾರದಿಂದಲೇ ಅನ್ವಯವಾಗಲಿದ್ದು, ಈ ವಿತ್ತೀಯ ವರ್ಷದ ಉಳಿದ ಅವಧಿ ಯವರೆಗೆ ಚಾಲ್ತಿಯಲ್ಲಿರಲಿದೆ. ಈ ಶೇ.25ರ ಕಡಿತವು ಮಾಸಿಕ 50 ಸಾವಿರ ರೂ.ಗಿಂತ ಹೆಚ್ಚಿನ ಬಾಡಿಗೆಯ ಮೇಲೆ ವಿಧಿಸಲಾಗುವ ಟಿಡಿಎಸ್, ಮ್ಯೂಚುವಲ್ ಫಂಡ್ ಮತ್ತು ಕಂಪನಿಗಳ ಲಾಭಾಂಶ ವಿತರಣೆ, ನಿಗದಿತ ಠೇವಣಿ ಮೇಲಿನ ಟಿಡಿಎಸ್ ಇತ್ಯಾದಿಗಳ ಪಾವತಿಗೆ ಅನ್ವಯವಾಗುತ್ತದೆ.
ರಿಟರ್ನ್ಸ್ಗೆ ನವೆಂಬರ್‌ವರೆಗೂ ಟೈಮ್: ತೆೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಆಗಿಲ್ಲವಲ್ಲ ಎಂದು ಆತಂಕಗೊಂಡವರಿಗೆ ಸಮಾಧಾನಕರ ಸುದ್ದಿ. ಪ್ರಸಕ್ತ ವರ್ಷ ಎಲ್ಲ ರೀತಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ನವೆಂಬರ್‌ವರೆಗೆ ವಿಸ್ತರಿಸಲಾಗಿದೆ. 2019-20ರ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಜುಲೈ 31 ಆಗಿತ್ತು. ಆದರೆ, ಈಗ ಅದನ್ನು ನ. 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸರ್ಕಾರವು ಫಾರ್ಮ್-16 ಸ್ವೀಕಾರಕ್ಕೆ ಇದ್ದ ಜೂ. 10ರ ಗಡುವನ್ನು ಜೂ.30ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು.
ಆದರೆ, ರಿಟರ್ನ್ಸ್ ಸಲ್ಲಿಕೆಯ ಗಡುವು ಜು.31 ಆಗಿದ್ದ ಕಾರಣದಿಂದ, ತೆರಿಗೆದಾರರಿಗೆ ಕೇವಲ ಒಂದು ತಿಂಗಳ ಕಾಲಾವಕಾಶ ಮಾತ್ರ ಸಿಕ್ಕಿತ್ತು. ಈಗ ಈ ಗಡುವನ್ನೂ ವಿಸ್ತರಣೆ ಮಾಡಿರುವುದರಿಂದ, ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸಲು 5 ತಿಂಗಳ ಅವಕಾಶ ಸಿಗಲಿದೆ. ತೆರಿಗೆ ಆಡಿಟಿಂಗ್ ಅವಧಿಯನ್ನು ಕೂಡ ಒಂದು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಸೆ. 30ರ ಬದಲಾಗಿ ಅ. 30ಕ್ಕೆ ನಿಗದಿ ಮಾಡಲಾಗಿದೆ.