Advertisement

25 ಪಾಲಿಟೆಕ್ನಿಕ್‌ ಕಾಲೇಜು ಮಂಜೂರು; ಸಚಿವ ಬಸವರಾಜ ರಾಯರೆಡ್ಡಿ

06:55 AM Aug 10, 2017 | Team Udayavani |

ಬೆಂಗಳೂರು: ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ರಾಜ್ಯ ಸರ್ಕಾರ ಹೊಸದಾಗಿ 25 ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಮಂಜೂರು ಮಾಡಿದೆ.

Advertisement

ಪ್ರತಿ ಪಾಲಿಟೆಕ್ನಿಕ್‌ಗೆ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು 8 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಬುಧವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲೆಲ್ಲಿ ಪಾಲಿಟೆಕ್ನಿಕ್‌?: ರಾಜ್ಯದ ಸದಲಗ, ರಾಮದುರ್ಗ, ಜಮಖಂಡಿ, ಕೊಲ್ಹಾರ, ಆಳಂದ, ಸಿಂಧನೂರು, ಮಸ್ಕಿ, ಕನಕಗಿರಿ, ಮುನಿರಾಬಾದ್‌, ರೋಣ, ಕುಂದಗೋಳ, ಹಳಿಯಾಳ, ಟಿ.ನರಸಿಪುರ, ಪಿರಿಯಾನಪಟ್ಟಣ, ಬ್ಯಾಡಗಿ, ಸಂಡೂರು, ಚಿತ್ತಹಳ್ಳಿ, ಬಸವಾಪಟ್ಟಣ, ಕಾಪು, ತರೀಕೆರೆ, ತಿಪಟೂರು, ಮಧುಗಿರಿ,ಗೌರಿಬಿದನೂರು, ಮಳವಳ್ಳಿ ಮತ್ತು ಕೊಳ್ಳೇಗಾಲದಲ್ಲಿ ಹೊಸ ಪಾಲಿಟೆಕ್ನಿಕ್‌ಗಳನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.

ವಾರದಲ್ಲಿ ಸ್ಥಳ ನಿಗದಿ:ಈಗಾಗಲೇ ಘೋಷಿಸಿರುವಂತೆ ರಾಜ್ಯದ 10 ಕಡೆ ತಲಾ 25 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಪದವಿ ಕಾಲೇಜು ಆರಂಭಿಸಲಾಗುವುದು. ಈ ಕಾಲೇಜುಗಳಲ್ಲಿ ಬಿಎ, ಬಿಎಸ್ಸಿ ಮತ್ತು ಬಿಕಾಂ ಪದವಿ ಶಿಕ್ಷಣ ನೀಡಲಾಗುವುದು ಎಂದರು.

ಮೊದಲ ಹಂತದಲ್ಲಿ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ವಿಜಯಪುರ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವಸತಿ ಪದವಿ ಕಾಲೇಜುಗಳು ಆರಂಭಗೊಳ್ಳಲಿವೆ.

Advertisement

ಈ ಜಿಲ್ಲೆಯ ಯಾವ ಸ್ಥಳದಲ್ಲಿ ಕಾಲೇಜು ಸ್ಥಾಪನೆಯಾಗಬೇಕು ಹಾಗೂ ಕನಿಷ್ಠ 10 ಎಕರೆ ಜಾಗವನ್ನು ಗುರುತಿಸಿ ವಾರದೊಳಗೆ
ವರದಿ ನೀಡುವಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವರ್ಷದಿಂದ ಎರಡನೇ ಹಂತದಲ್ಲಿ ಮುಂದಿನ ವರ್ಷದಿಂದ ಉಳಿದ 20 ಜಿಲ್ಲೆಗಳಲ್ಲೂ ಇದೇ ಮಾದರಿ ಕಾಲೇಜು ಸ್ಥಾಪಿಸಲಾಗುವುದು ಎಂದರು.

ವಸತಿ ಪದವಿ ಕಾಲೇಜುಗಳಲ್ಲಿ ಶೇ. 65ರಷ್ಟು ಸೀಟುಗಳನ್ನು ವಿದ್ಯಾರ್ಥಿಗಳು ಮತ್ತು ಶೇ. 35ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ. ಅದೇ ರೀತಿ ಒಟ್ಟು ಸೀಟುಗಳ ಪೈಕಿ ಶೇ. 60ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಶೇ. 40ರಷ್ಟನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಲಿಗೆ ಮೀಸಲಿಡಲಾಗುತ್ತದೆ ಎಂದು ಹೇಳಿದರು.

ಹೈದರಾಬಾದ್‌-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಕೂಡ ಆ ಭಾಗದ 6 ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ 6 ವಸತಿ ಸಹಿತ ಪದವಿ ಕಾಲೇಜು ಆರಂಭಿಸಲಾಗುವುದು.

ಇದಕ್ಕಾಗಿ ಮಂಡಳಿಯು ತಲಾ ಕಾಲೇಜಿಗೆ 25 ಕೋಟಿ ರೂ. ವೆಚ್ಚ ಮಾಡಲಿದೆ. ರಾಜ್ಯ ಸರ್ಕಾರ ಕೇವಲ ಸಿಬ್ಬಂದಿ ಮತ್ತು 
ವಿದ್ಯಾರ್ಥಿಗಳ ಆಹಾರದ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಪ್ರಕಟಿಸಿರುವಂತೆ ಮುಂದಿನ ನವೆಂಬರ್‌ಒಳಗಾಗಿ ಪದವಿಯ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುವುದು. ಇದಕ್ಕಾಗಿ 300 ಕೋಟಿ ರೂ, ತೆಗೆದಿರಿಸಲಾಗಿದ್ದು ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ. 2.50 ಲಕ್ಷ ಆದಾಯ ಮಿತಿ ಆಧಾರದ ಮೇಲೆ ಎಲ್ಲಾ ಜಾತಿ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗಲಿದೆ. ಈ ಯೋಜನೆ ಕೇವಲ ಇದೊಂದು ವರ್ಷಕ್ಕೆ ಸೀಮಿತವಲ್ಲ, ಪ್ರತಿವರ್ಷವೂ ಪದವಿ ಮೊದಲ ವರ್ಷದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುವುದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next