Advertisement

ಅರಣ್ಯ ವೃದ್ದಿಗೆ 25 ಲಕ್ಷ ಸಸಿ ಉತ್ಪಾದನೆ

09:52 AM Apr 01, 2022 | Team Udayavani |

ಆಳಂದ: ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಪ್ರಸಕ್ತ ಹಂಗಾಮಿಗೆ ಜಿಲ್ಲೆಯ ಆಯ್ಕೆಯಾದ ಸ್ವ-ಸಹಾಯ ಸಂಘಗಳ ಗುಂಪಿನ ಮಹಿಳೆಯರಿಗೆ ನಿರಂತರ ಉದ್ಯೋಗದ ಜೊತೆಗೆ, ಅರಣ್ಯೀಕರಣ ವೃದ್ಧಿಗಾಗಿ ಈ ಸಲ 25 ಲಕ್ಷ ಸಸಿಗಳನ್ನು ಉತ್ಪಾದಿಸಿ ಪೊರೈಸಲು ಮುಂದಾಗಲಾಗಿದೆ.

Advertisement

2022-23ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಅರಣ್ಯೀಕರಣ, ತೋಟಗಾರಿಕೆ, ರೇಷ್ಮೆ ಅಭಿವೃದ್ಧಿಗೆ ಅವಶ್ಯಕ ಸಸಿಗಳ ಪೂರೈಕೆಗೆ ತಾಲೂಕಿಗೊಂದು ಗ್ರಾಮ ಪಂಚಾಯಿತಿ ಮಟ್ಟದ ಸ್ವ-ಸಹಾಯ ಸಂಘಗಳ ಒಕ್ಕೂಟ ಆಯ್ಕೆಮಾಡಿಕೊಂಡು, ಈ ಮೂಲಕ ನರ್ಸರಿ ಅಭಿವೃದ್ಧಿಪಡಿಸಿ ಸಸಿಗಳನ್ನು ಪೂರೈಸಿ, ನಿರಂತರವಾಗಿ ಉದ್ಯೋಗ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ಪ್ರಕ್ರಿಯೆ ಅಚ್ಚುಕಟ್ಟಾಗಿ ಜಾರಿಗೆ ಬಂದರೆ ಗ್ರಾಮೀಣ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಆರ್ಥಿಕ ಲಾಭದ ಜೊತೆಗೆ ಬೇಡಿಕೆಗೆ ತಕ್ಕಂತೆ ರೈತರಿಗೆ, ಸಂಘ, ಸಂಸ್ಥೆಗಳಿಗೆ ಅರಣ್ಯೀಕರಣ ಮತ್ತು ತೋಟಗಾರಿಕೆ ವಿಸ್ತರಣೆಗೆ ಸಸಿಗಳು ಲಭ್ಯವಾಗಲಿವೆ.

ಸರ್ಕಾರದ ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿರುವ ಜಿಪಂ ಸಿಇಒ ಡಾ| ದಿಲೀಷ ಸಸಿ ಅವರು, 25 ಲಕ್ಷ ಸಸಿಗಳ ಉತ್ಪಾದನೆಗೆ ಆಯ್ಕೆಯಾದ ಗ್ರಾಪಂ ಸ್ವ-ಸಹಾಯ ಸಂಘಗಳ ಒಕ್ಕೂಟಗಳಿಗೆ ಉದ್ಯೋಗ ಖಾತ್ರಿಯಡಿ ನಿರಂತರವಾಗಿ ಉದ್ಯೋಗ ನಿಡುವ ನಿಟ್ಟಿನಲ್ಲಿ ತರಬೇತಿ ನೀಡಿ, ಕಾರ್ಯಪ್ರವರ್ತರಾಗುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ ಮೇಲೆ ಸಸ್ಯ ಉತ್ಪಾದನೆಗೆ ಸಂಘಗಳು ಮುಂದಾಗಿವೆ.

ಈಗಾಗಲೇ ಆಯ್ಕೆ ಮಾಡಿದ ಒಕ್ಕೂಟಗಳ ಪೈಕಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಪಂನ ಚೌಡಾಪುರ ಸಂಜೀವಿನಿ, ಆಳಂದ ತಾಲೂಕಿನ ಕೊಡಲಂಗರಗಾ ಗ್ರಾಪಂನ ಸಂಜೀವಿನಿ ಜಿಪಿಎಲ್‌ಎಫ್‌, ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಪಂ ಕಮಲ ಸಂಜೀವಿನಿ, ಚಿತ್ತಾಪುರದ ಮಾಡಬೂಳ ಗ್ರಾಪಂನ ಮಾಡಬೂಳ ಸಂಜೀವಿನಿ, ಜೇವರ್ಗಿ ಹರವಾಳ ಗ್ರಾಪಂನ ಮಹಾಸತಿ ಅನುಸುಯಾ, ಕಲಬುರಗಿ ತಾಲೂಕಿನ ಪಟ್ಟಣ ಗ್ರಾಪಂನ ಚೇತನ, ಕಾಳಗಿ ತಾಲೂಕು ಗೋಟೂರ ಗ್ರಾಪಂ ಗೋಟೂರ ಸಂಜೀವಿನಿ, ಕಮಲಾಪುರದ ಮಹಾಗಾಂವ ಗ್ರಾಪಂನ ಅಕ್ಕಮಹಾದೇವಿ, ಸೇಡಂನ ಚಂದಾಪುರ ಗ್ರಾಪಂನ ಚಂದಾಪುರ ಸಂಜೀವಿನಿ, ಶಹಾಬಾದನ ರಾವೂರ ಗ್ರಾಪಂನ ಗೌರಿ ಸಂಜೀವಿನಿ, ಯಡ್ರಾಮಿಯ ವಡಗೇರಾ ಗ್ರಾಪಂನ ಅಮರೇಶ್ವರ ಸಂಜೀವನಿ ಒಕ್ಕೂಟಗಳನ್ನು ಆಯ್ಕೆ ಮಾಡಲಾಗಿದೆ.

ಗ್ರಾಪಂ ರೂಪಿತ ಕ್ರಿಯಾಯೋಜನೆ

Advertisement

ವಿವಿಧ ಶಾಲೆ, ಕಾಲೇಜು, ಸ್ಮಶಾನ, ವಸತಿ ನಿಲಯ ಹೀಗೆ ಎಲ್ಲ ಹಂತದ ರಸ್ತೆ ಬದಿಯ ಅವಶ್ಯಕ ನೆಡುತೋಪುಗಳ ಬಗ್ಗೆ ಸಮೀಕ್ಷೆ ಕೈಗೊಂಡು ಸ್ಥಳೀಯ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಸಸಿಗಳನ್ನು ತಳಿವಾರು ಕ್ರೋಢೀಕರಿಸಿ ಗ್ರಾಪಂ ಕ್ರಿಯಾ ಯೋಜನೆ ರೂಪಿಸಲು ಅರಣ್ಯ ಇಲಾಖೆಯಿಂದ ಬೇಡಿಕೆಯ ಅಂದಾಜಿನಂತೆ ಸಸ್ಯಗಳು ಪೂರೈಕೆ ಆಗುತ್ತವೆ. ಹೀಗೆ ಗ್ರಾಪಂ ರೂಪಿತ ಕ್ರಿಯಾ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿ ಪ್ರತಿ ತಾಲೂಕಿನಿಂದ ಎರಡು ನರ್ಸರಿಯಂತೆ ಒಂದನ್ನು ಸ್ವಸಹಾಯ ಸಂಘಗಳ ಒಕ್ಕೂಟದ ಗುಂಪುಗಳಿಂದ ಹಾಗೂ ಇನ್ನೊಂದನ್ನು ಇಲಾಖೆ ಅನುಷ್ಠಾನಗೊಳಿಸಿ ಸಸ್ಯೋತ್ಪಾದನೆಗೊಳಿಸುವ ಸರ್ಕಾರದ ಈ ಉದ್ದೇಶವನ್ನು ಈಡೇಸಲು ಅಧಿಕಾರಿಗಳು ಮತ್ತು ಆಯ್ಕೆಯಾದ ಗುಂಪುಗಳ ಮುಂದಾಗಬೇಕಿದೆ.

ಅಧಿಕಾರಿಗಳ ಮಾರ್ಗದರ್ಶನ

ಆಯ್ಕೆಯಾದ ಸಂಘಗಳ ಗುಂಪಿಗೆ ಉದ್ಯೋಗ ಖಾತ್ರಿಯಡಿ ಸಸ್ಯಗಳ ಉಪತ್ಪಾದನೆಗೆ ಸೂಕ್ತ ತರಬೇತಿ, ನೀರು, ಜಾಗ, ಮೇಲಿಂದ ಮೇಲೆ ತಾಂತ್ರಿಕ ಸಲಹೆ, ಸಸ್ಯಗಳ ಉತ್ಪಾದನೆಗೆ ಪಾಲಿಥಿನ್‌, ಗೊಬ್ಬರ, ಮಣ್ಣು ಸೇರಿದಂತೆ ಸಾಮಗ್ರಿಗಳ ನೆರವು ನೀಡಲಾಗುತ್ತದೆ. ನರ್ಸರಿ ನಿರ್ವಹಣೆಗೆ, ಗುಂಪಿನ ಮಹಿಳೆಯರಿಗೆ ಪ್ರತಿದಿನ ಹಾಜರಾತಿಗೊಳಿಸಿ ಕೂಲಿ ಪಾವತಿಸಲಾಗುತ್ತದೆ. ನರ್ಸರಿ ಉಸ್ತುವಾರಿಗೆ ಅಧಿಕಾರಿಗಳು ಭೇಟಿ ನೀಡಿ ಸಲಹೆ ಸೂಚನೆ ನೀಡುತ್ತಾರೆ.

ಈಗಾಗಲೇ ಆಯ್ಕೆ ಮಾಡಿಕೊಂಡ ಸ್ವ-ಸಹಾಯ ಸಂಘಗಳ ಒಕ್ಕೂಟದ ಗುಂಪಿಗೆ ಸಸ್ಯ ಉತ್ಪಾದನೆ ಕುರಿತ ತರಬೇತಿ ಪೂರ್ಣವಾಗಿದೆ. ಇದಕ್ಕೆ ಆರ್ಥಿಕ ಸಹಾಯಧನ ಒದಗಿಸಲು ಬ್ಯಾಂಕ್‌ನೊಂದಿಗೆ ಹೊಂದಾಣಿಕೆ ಮಾಡಿಸಲಾಗುವುದು. ಸಸ್ಯಗಳನ್ನು ಖರೀದಿಸಲು ಅರಣ್ಯ, ತೋಟಗಾರಿಕೆ, ರೇಷ್ಮೆ ಹಾಗೂ ಇನ್ನಿತರ ಇಲಾಖೆಯಿಂದ ಒಪ್ಪಂದ ಮಾಡಿಕೊಳ್ಳಲಾಗುವುದು. -ದಿಲೀಷ ಸಸಿ, ಸಿಇಒ, ಜಿಪಂ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next