ನವದೆಹಲಿ/ಲಕ್ನೋ: ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ಮಧ್ಯಪ್ರವೇಶಿಸಿರುವ ಸುಪ್ರೀಂ ಕೋರ್ಟ್ ಗುರುವಾರ ಅನೇಕ ನಿರ್ದೇಶನಗಳನ್ನು ನೀಡಿದೆ.
2017ರಲ್ಲಿ ನಡೆದ ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 5 ಕೇಸುಗಳನ್ನೂ ಉತ್ತರಪ್ರದೇಶದಿಂದ ದೆಹಲಿ ಕೋರ್ಟ್‌ಗೆ ವರ್ಗಾಯಿಸುವಂತೆ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ಆದೇಶ ಹೊರಡಿಸಿದೆ. ಪ್ರಮುಖ ಪ್ರಕರಣದ ವಿಚಾರಣೆಯು 45 ದಿನಗಳೊಳಗೆ ಮುಗಿಯಬೇಕು ಎಂದೂ ಹೇಳಿದೆ.
ಜತೆಗೆ, ಸಂತ್ರಸ್ತೆಗೆ 25 ಲಕ್ಷ ರೂ.ಗಳನ್ನು ಮಧ್ಯಂತರ ಪರಿಹಾರವನ್ನಾಗಿ ನೀಡಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಅಷ್ಟೇ ಅಲ್ಲ, ಸಂತ್ರಸ್ತೆಯ ಕಾರು ಅಪಘಾತ ಪ್ರಕರಣ ಸಂಬಂಧ 7 ದಿನಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸಿಬಿಐಗೆ ನಿರ್ದೇಶನವನ್ನೂ ನೀಡಿದೆ. ಈ ಅಪಘಾತ ಪ್ರಕರಣದಲ್ಲೂ ಬಿಜೆಪಿ ಶಾಸಕ ಮತ್ತು ಇತರೆ 10 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ಸಿಆರ್‌ಪಿಎಫ್ನಿಂದ ಭದ್ರತೆ ಒದಗಿಸಬೇಕು ಎಂದೂ ನ್ಯಾಯಪೀಠ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಲೇ, ಸಂತ್ರಸ್ತೆಗೆ ಭದ್ರತೆ ನೀಡಲೆಂದು ನಿಯೋಜಿತರಾಗಿದ್ದ ಮೂವರು ಕಾನ್‌ಸ್ಟೇಬಲ್ಗಳನ್ನು ಉ.ಪ್ರದೇಶ ಪೊಲೀಸ್ ಇಲಾಖೆ ಅಮಾನತು ಮಾಡಿದೆ.
ಆರೋಪಿ ಉಚ್ಚಾಟನೆ: ಇದೇ ವೇಳೆ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ತಿಳಿಸಿದ್ದಾರೆ. ಆದರೆ, ಪಕ್ಷದಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಅಪಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಅತ್ಯಾಚಾರ ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.