ಬೆಂಗಳೂರು: 500 ರೂ. ಮುಖಬೆಲೆಯ ನಕಲಿ ನೋಟುಗಳ ಬಂಡಲ್‌ಗಳ ಮೇಲೆ ಅಸಲಿ ನೋಟು ಇರಿಸಿ ನಗರದ ಸಗಟು ಸಿದ್ಧ ಉಡುಪು ವ್ಯಾಪಾರಿಯೊಬ್ಬರಿಗೆ 25 ಲಕ್ಷ ರೂ. ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಕೇಂದ್ರ ಅಪರಾಧ ವಿಭಾಗದಲ್ಲಿ (ಸಿಸಿಬಿ) ದೂರು ದಾಖಲಾಗಿದೆ.
ವಂಚನೆಗೊಳ ಗಾದ ವಿಶ್ವೇಶ್ವರಪುರದ ಸಗಟು ಸಿದ್ಧ ಉಡುಪು ವ್ಯಾಪಾರಿ ಪ್ರೇಮ್ ಕುಮಾರ್ ಜೈನ್ ನೀಡಿದ ದೂರಿನ ಮೇರೆಗೆ ಜಯೇಶ್, ಅಪರಿಚಿತ ವ್ಯಕ್ತಿಯ ವಿರುದ್ಧ ವಂಚನೆ, ನಂಬಿಕೆ ದ್ರೋಹದಡಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ವಿವರ: ಚಿಕ್ಕಪೇಟೆಯಲ್ಲಿ ಸಗಟು ಸಿದ್ಧ ಉಡುಪುಗಳ ವ್ಯಾಪಾರಿಯಾಗಿರುವ ಪ್ರೇಮ್ ಕುಮಾರ್, ಇತ್ತೀಚೆಗೆ ಹೊಸ ಬಟ್ಟೆ ಖರೀದಿಸಲು 25 ಲಕ್ಷ ರೂ. ಅಗತ್ಯವಿದ್ದ ಹಿನ್ನೆಲೆಯಲ್ಲಿ ಸ್ನೇಹಿತ ಬಿಪಿನ್ ಬಳಿ ಕೇಳಿದ್ದಾರೆ. ಆಗ ಬಿಪಿನ್ ದೆಹಲಿಯಲ್ಲಿ ನನ್ನ ಸ್ನೇಹಿತ ಮಹಿ ಎಂಬುವವರ ಬಳಿ ಹಣವಿದೆ. ದೆಹಲಿಯಲ್ಲಿ ಯಾರಾದರೂ ನಿನಗೆ ಪರಿಚಯವಿದ್ದಲ್ಲಿ ಅವರಿಂದ ಹಣ ತರಿಸಿಕೋ ಎಂದು ಸಲಹೆ ನೀಡಿದ್ದಾರೆ.
5 ತಿಂಗಳ ಹಿಂದೆ ಜಯೇಶ್ ಹೆಸರಿನ ವ್ಯಕ್ತಿ ಪ್ರೇಮ್ ಕುಮಾರ್ ಜೈನ್ ಅವರ ಮೊಬೈಲ್‌ಗೆ ವಾಟ್ಸ್‌ಆ್ಯಪ್ ಮೂಲಕ ದೇಶದ ಯಾವುದೇ ನಗರಗಳಿಂದ ನಗದು ರೂಪದಲ್ಲಿ ಹಣ ತರಿಸುವುದಿದ್ದಲ್ಲಿ ತನಗೆ ತಿಳಿಸುವಂತೆ ಹೇಳಿದ್ದಾನೆ. ಹೀಗಾಗಿ ವ್ಯವಹಾರಕ್ಕೆ ತುರ್ತಾಗಿ ಹಣ ಬೇಕಿದ್ದ ಹಿನ್ನೆಲೆಯಲ್ಲಿ ಪ್ರೇಮ್ ಕುಮಾರ್ ಜೈನ್, ಜಯೇಶ್‌ಗೆ ಕರೆ ಮಾಡಿ, ದೆಹಲಿಯಲ್ಲಿ ಮಹಿ ಎಂಬುವವರು 25 ಲಕ್ಷ ರೂ. ನೀಡುತ್ತಾರೆ. ಅದನ್ನು ಬೆಂಗಳೂರಿಗೆ ತಲುಪಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ದೆಹಲಿಯ ಮಹಿ ಎಂಬುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಜಯೇಶ್ ಪಡೆದುಕೊಂಡಿದ್ದಾನೆ. ಜೂ.14ರಂದು ದೂರುದಾರಿಗೆ ಕರೆ ಮಾಡಿರುವ ಜಯೇಶ್, ನಗರ್ತ ಪೇಟೆ ಜೈನ್ ಟೆಂಪಲ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಪ್ರೇಮ್ ಕುಮಾರ್ ಅಲ್ಲಿಗೆ ಬಂದಾಗ, ವ್ಯಕ್ತಿಯೊಬ್ಬ ತನ್ನ ಹೆಸರು ಜಯೇಶ್ ಎಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ ತನ್ನಲ್ಲಿದ್ದ ಬ್ಯಾಗ್ ತೆರೆದು, 500 ರೂ. ಮುಖಬೆಲೆಯ ನೋಟು ಗಳ 10 ಬಂಡಲ್ ತೋರಿಸಿ ಇದರಲ್ಲಿ 25 ಲಕ್ಷ ರೂ. ಇದೆ ಎಂದಿದ್ದಾನೆ. ಮನೆಯಲ್ಲಿ ಹಣದ ಬ್ಯಾಗ್ ತೆರೆದು ಪರಿಶೀಲಿಸಿದಾಗ, ಬಂಡಲ್‌ನ ಮೊದಲ ನೋಟು ಮಾತ್ರ 500 ಮುಖ ಬೆಲೆಯ ಅಸಲಿ ನೋಟಾಗಿದ್ದು, ಅದರ ಕೆಳಗೆ ನಕಲಿ ನೋಟುಗಳನ್ನು ಜೋಡಿಸಿರುವುದು ಕಂಡು ಬಂದಿದೆ.
ತಕ್ಷಣ ಜಯೇಶ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಬಂದಿದೆ. ದೆಹಲಿಯಲ್ಲಿ ಮಹಿ ಅವರಿಂದ 25 ಲಕ್ಷ ರೂ. ಪಡೆದ ಅಪರಿಚಿತ ವ್ಯಕ್ತಿಯ ಮೊಬೈಲ್ ಗೆ ಕರೆ ಮಾಡಿದಾಗ ಆತ ಕೂಡ ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಪ್ರೇಮ್ ಕುಮಾರ್ ಜೈನ್ ಸಿಸಿಬಿಗೆ ದೂರು ನೀಡಿದ್ದಾರೆ.