Advertisement

ಜಿಲ್ಲೆಯ 25 ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿ

07:00 AM May 12, 2019 | Team Udayavani |

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿನ ವಿವಿಧ ಕೈಗಾರಿಕೆಗಳು ಹಾಗೂ ಜನರಿಂದ ಕೆರೆಗಳ ಅಭಿವೃದ್ಧಿಗೆ ಉತ್ತಮ ಸಹಕಾರ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಹೇಳಿದರು.

Advertisement

ತಾಲೂಕಿಗೆ ಸಮೀಪದ ಅರ್ಜಿನಬೆಟ್ಟನಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿಗಾಗಿ ಎಚ್‌.ಎಂ.ಕ್ಲಾಸಿಕಲ್‌ ಸಂಸ್ಥೆ ನೀಡಿದ 25ಲಕ್ಷ ರೂ. ದೇಣಿಗೆಯಲ್ಲಿ ಕೈಗೊಂಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ನೀರಿಗೆ ತೀವ್ರ ತೊಂದರೆ: ಅರ್ಜುನಬೆಟ್ಟನಹಳ್ಳಿ ಗ್ರಾಮದಲ್ಲಿ 120 ಕುಟುಂಬಗಳಿವೆ. ಕುಡಿಯುವ ನೀರಿಗೆ ತೀವ್ರ ತೊಂದರೆ ಇದೆ. ಹೀಗಾಗಿ, ಮಳೆ ನೀರನ್ನೇ ಬಳಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದು, ಒಂದು ಕುಟುಂಬಕ್ಕೆ 25,000 ರೂ. ಖರ್ಚಾಗಲಿದೆ. ಈ ಹಣವನ್ನು ಎಚ್‌.ಎಂ.ಕ್ಲಾಸಿಕಲ್‌ ಕಂಪನಿಯವರೇ ಭರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಳೆ ನೀರು ಸಂಗ್ರಹಿಸಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ಒಂದು ಕುಟುಂದ ಅಗತ್ಯಕ್ಕೆ ತಕ್ಕಂತೆ ಮಳೆ ನೀರು ಸಂಗ್ರಹಿಸಿಕೊಂಡು ಇಡೀ ವರ್ಷ ಬಳಸುತ್ತಿರುವ ನಿದರ್ಶನ ನಮ್ಮ ಕಣ್ಣ ಮುಂದಿದೆ. ಇದರಿಂದ ಆರೋಗ್ಯ ಸುಧಾರಣೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಲಿದೆ ಎಂದರು.

ಹಣ ನೀಡಿದರೂ ನೀರು ಸಿಗಲ್ಲ: ಕೆರೆಯಲ್ಲಿ ನೀರು ನಿಂತು ಅಂತರ್ಜಲ ಸೇರುತ್ತಿದ್ದ ಮಳೆ ನೀರನ್ನು ಇಷ್ಟು ದಿನ ಕೃಷಿ ಮತ್ತು ಕುಡಿಯುವ ನೀರಿಗಾಗಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು, ಕೈಗಾರಿಕೆಗಳು ಸಹ ಎಲ್ಲಾ ರೀತಿಯ ಬಳಕೆಗೂ ಅಂತರ್ಜಲವನ್ನೇ ಅವಲಂಬಿಸಿವೆ.

Advertisement

ಹೀಗಾಗಿ, ಕೆರೆಗಳ ಅಭಿವೃದ್ಧಿಗೆ ಕೈಗಾರಿಕೆಗಳು ಉದಾರವಾಗಿ ಆರ್ಥಿಕ ನೆರವು ನೀಡುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲವಾದರೆ ಹಣ ನೀಡಿದರೂ ನೀರು ದೊರೆಯದಂತಹ ಭೀಕರ ದಿನಗಳು ಸಮೀಪದಲ್ಲೇ ಇವೆ ಎಂದು ಎಚ್ಚರಿಕೆ ನೀಡಿದರು.

ಮಳೆ ನೀರು ಸಂಗ್ರಹಕ್ಕಾಗಿ ನೋಟಿಸ್‌: ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜಿಲ್ಲೆಯಲ್ಲಿನ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಉದ್ದೇಶದ ಕಟ್ಟಡಗಳು ಸೇರಿದಂತೆ ಮನೆಗಳು ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಕೈಗಾರಿಕೆಗಳ ವ್ಯವಸ್ಥಾಪಕರ ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೆಲಮಂಗಲ ತಾಲೂಕು ತಹಶೀಲ್ದಾರ್‌ ರಾಜಶೇಖರ್‌, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಸುನಿತಾ, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್‌, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌, ಎಚ್‌.ಎಂ.ಕ್ಲಾಸಿಕಲ್‌ ಪ್ರೈವೇಟ್‌ ಲಿಮಿಟೆಡ್‌ನ‌ ಹೆಚ್ಚುವರಿ ವ್ಯವಸ್ಥಾಪಕಿ ರಮಾ ರಾವ್‌, ಸಂತೋಷ್‌ ಕುಮಾರ್‌ ಹೆಗಡೆ, ವ್ಯವಸ್ಥಾಪಕ ರಾಜಶೇಖರ್‌, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next