ಮಾದನಹಿಪ್ಪರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಟ್ರಸ್ಟ್ ರಾಜ್ಯದಲ್ಲಿ 420 ಕೆರೆಗಳನ್ನು ನಿರ್ಮಿಸಿದ್ದು, ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಮಾಡಿದ್ದು, 45 ಶುದ್ಧ ನೀರು ಘಟಕ ಯೋಜನೆ ಕಾರ್ಯಗತಗೊಳಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಉಪ ನಿರ್ದೇಶಕ ಸತೀಶ ಸುವರ್ಣ ಹೇಳಿದರು.
ಗ್ರಾಮದಲ್ಲಿ ಎಸ್‌ಕೆಡಿಆರ್‌ಡಿಪಿ ಯೋಜನೆ ವತಿಯಿಂದ ಶ್ರೀ ಖಂಡೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 2 ಲಕ್ಷ ರೂ. ಅನುದಾನ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಗಳಿಗೆ ಬೆಂಚ್, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನಿಯೋಜನೆ, 12 ಸಾವಿರ ನಿರ್ಗತಿಕರಿಗೆ ಮಾಸಾಶನ, ಸುಜ್ಞಾನ ಕಾರ್ಯಕ್ರಮದಡಿ ಶಿಷ್ಯವೇತನ, ಸರ್ಕಾರದ ಅನೇಕ ಯೋಜನೆಗಳ ಕುರಿತು ಸಾಮಾನ್ಯ ಸೇವಾ ಸಿಂಧು ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ಈ ಕೇಂದ್ರಗಳಿಂದ 60 ಸಾವಿರಕ್ಕೂ ಹೆಚ್ಚು “ಇ ಶ್ರಮ್’ ಕಾರ್ಡ್‌ಗಳನ್ನು ಜನಸಾಮಾನ್ಯರು ಪಡೆದಿದ್ದಾರೆ ಎಂದರು.
ಜಿಲ್ಲೆಯಲ್ಲಿಯೇ ಮೊದಲ ಕೆರೆ ಅಭಿವೃದ್ಧಿ ಮಾಡಿದ್ದು ಆಳಂದ ತಾಲೂಕಿನಲ್ಲಿ. ನಾವು ಸಾಲ ಕೊಡುವ ಕೆಲಸ ಮಾಡಲ್ಲ. ಬ್ಯಾಂಕುಗಳಿಂದ ಮಧ್ಯವರ್ತಿಯಾಗಿ ಸಾಲ ಕೊಡಿಸುವುದು, ಮರುಪಾವತಿ ಮಾಡಿಸುವುದು ಅಷ್ಟೇ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಶಿವಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಮಹಿಳೆಯರನ್ನು ಮುಖವಾಹಿನಿಗೆ ತಂದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನೆರವಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ, ಮೇಲ್ವಿಚಾರಕ ಪ್ರಮೋದ ಹೂಗಾರ, ಖಂಡೇಶ್ವರ ದೇವಾಲಯದ ಪ್ರಮುಖರಾದ ಶಿವಲಿಂಗಪ್ಪ ಮೈಂದರಗಿ, ಶ್ರೀಶೈಲ ಕೋಳಶೆಟ್ಟಿ, ಮುಖಂಡರಾದ ಸಿದ್ಧು ತೋಳನೂರ, ಶಿವಪ್ಪ ಕೋಳಶೆಟ್ಟಿ, ಬಸವರಾಜ ಪ್ಯಾಟಿ, ಸಾತಲಿಂಗಪ್ಪ ಸಲಗರ ಮುಂತಾದವರಿದ್ದರು.