“ನಮ್ಮ ಮೇಷ್ಟ್ರು ಮಾಡಿದ ಪಾಠ ಯಶಸ್ವಿ 25 ದಿನ ಪೂರೈಸಿದ್ದು, 50 ದಿನಗಳವರೆಗೂ ಜನರು ಅವರ ಪಾಠ ಕೇಳ್ತಾರೆ ಎಂಬ ನಂಬಿಕೆ ನನಗಿದೆ…’
– ನಿರ್ದೇಶಕ ಕವಿರಾಜ್ ತಮ್ಮ “ಕಾಳಿದಾಸ ಕನ್ನಡ ಮೇಷ್ಟ್ರು’ ಕುರಿತು ಹೀಗೆ ಹೇಳಿ ಖುಷಿಗೊಂಡರು. ಹಲವು ಸಿನಿಮಾಗಳ ನಡುವೆಯೂ ಯಶಸ್ವಿ 25 ದಿನ ಪೂರೈಸಿರುವ ಚಿತ್ರದ ಕುರಿತು ಹೇಳಲೆಂದೇ ಕವಿರಾಜ್, ತಮ್ಮ ಚಿತ್ರತಂಡದ ಜೊತೆ ಆಗಮಿಸಿದ್ದರು. ಅಂದು ಕವಿರಾಜ್ “ಮೇಷ್ಟ್ರು’ ಬಗ್ಗೆ ಹೇಳಿದ್ದಿಷ್ಟು. “ನಾನು ಬರಹಗಾರನಾಗಿ ಎರಡು ದಶಕ ಪೂರೈಸಿದ್ದೇನೆ. ರೈಟರ್ ಆಗಿ ಗುರುತಿಸಿಕೊಂಡೆ. ಆದರೆ, ನಿರ್ದೇಶಕನಾಗಿ ಗುರುತಿಕೊಂಡಿಲ್ಲವಲ್ಲ ಎಂಬ ಕೊರಗು ಇತ್ತು. “ಕಾಳಿದಾಸ ಕನ್ನಡ ಮೇಷ್ಟ್ರು’ ಅದನ್ನು ನೀಗಿಸಿದೆ. ನಾನು ಹತ್ತು ಸಿನಿಮಾ ಮಾಡಿದಷ್ಟು ಹೆಸರು ಈ ಸಿನಿಮಾದಲ್ಲಿ ಸಿಕ್ಕಿದೆ. ಇದಕ್ಕಿಂತಲೂ ಅದ್ಭುತ ತಾಂತ್ರಿಕತೆ ಇರುವ, ಕಂಟೆಂಟ್ ಇರುವ, ಮನರಂಜನೆ ಇರುವ ಸಾವಿರಾರು ಚಿತ್ರಗಳಿವೆ. ಆದರೆ, ಈ ಚಿತ್ರ ತನ್ನದೇ ದಾಟಿಯಲ್ಲಿ ನೋಡುಗರನ್ನು ಸೆಳೆದಿದೆ ಎಂಬ ದೊಡ್ಡ ಸಂತೃಪ್ತಿ ನನ್ನದು. ಗುಣಾತ್ಮಕ ವಿಷಯ ಇದ್ದರೆ ಖಂಡಿತ ಜನ ಕೈ ಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿ.
ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗ ಸಾಗರದಾಚೆಯೂ ಚಿತ್ರ ಪ್ರದರ್ಶನ ಕಾಣಲಿದೆ. ಯುಎಸ್‌ಎ, ದುಬೈ, ಕೆನಡಾ, ಸಿಂಗಾಪುರ್ ಇತರೆ ದೇಶಗಳಲ್ಲಿ ಮೇಷ್ಟ್ರು ಪಾಠ ಕೇಳಲು ಅಲ್ಲಿನ ಕನ್ನಡಿಗರು ಬಯಸಿದ್ದಾರೆ. ಇದಕ್ಕಿಂತ ದೊಡ್ಡ ಖುಷಿ ಮತ್ತೂಂದಿಲ್ಲ. ಇನ್ನು, ಹೊಸ ಸುದ್ದಿಯೆಂದರೆ, ತೆಲುಗು ಭಾಷೆಯ ನಿರ್ಮಾಪಕರೊಬ್ಬರು ಅಲ್ಲಿನ ಇಂಡಸ್ಟ್ರಿಗೆ ಸಿನಿಮಾ ತೋರಿಸುವ ತಯಾರಿ ನಡೆಸಿದ್ದಾರೆ. ಡಿ.22 ರಂದು ಹೈದರಾಬಾದ್‌ನಲ್ಲಿ ಪ್ರದರ್ಶನ ಕಾಣಲಿದೆ. ಬಾಲಿವುಡ್ ಮಂದಿ ಕೂಡ ಚಿತ್ರ ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ. ನಿಜ ಹೇಳುವುದಾದರೆ, ಹಾಕಿದ ಹಣ ಬಂದಿದೆ. ಇದು ಪ್ರಾಮಾಣಿಕ ಮಾತು. ಎಲ್ಲರ ಶ್ರಮಕ್ಕೆ ಫಲ ಸಿಕ್ಕಿದೆ.
ಚಿತ್ರ ಈ ರೀತಿಯ ಯಶಸ್ಸು ಪಡೆಯೋಕೆ ಮಾಧ್ಯಮ, ಪತ್ರಕರ್ತರು ಕಾರಣ’ ಎನ್ನುತ್ತಲೇ ಎಲ್ಲರಿಗೂ ಧನ್ಯವಾದ ಅರ್ಪಿಸಿದರು ಕವಿರಾಜ್. ಜಗ್ಗೇಶ್ ಅವರಿಗೂ ಚಿತ್ರ ಯಶಸ್ಸು ಪಡೆದಿದ್ದಕ್ಕೆ ಖುಷಿ ಇದೆಯಂತೆ. ಜನರು ಒಳ್ಳೆಯ ವಿಷಯವನ್ನು ಎಂದಿಗೂ ಕೈ ಬಿಡುವುದಿಲ್ಲ. ಪೋಷಕರು ತಮ್ಮ ಮಕ್ಕಳ ಜೊತೆ ಚಿತ್ರ ನೋಡಬೇಕು. ಸಿನಿಮಾ ನೋಡಿದ ಹಲವರು ಸಂದೇಶ ಕಳುಹಿಸಿದ್ದಾರೆ. ಒಂದಷ್ಟು ಜನರಿಗೆ ಸಿನಿಮಾ ನೋಡುವಂತೆ ಹೇಳುತ್ತಿದ್ದಾರೆಂದರೆ, ಅದು ಚಿತ್ರದಲ್ಲಿರುವ ತಾಕತ್ತು’ ಎಂದರು ಜಗ್ಗೇಶ್. ನಾಯಕಿ ಮೇಘನಾ ಗಾಂವ್ಕರ್ ಅವರಿಗೆ ಕಥೆ ಕೇಳುವಾಗಲೇ, ಈ ಚಿತ್ರ ಯಶಸ್ಸು ಪಡೆಯುತ್ತೆ ಎಂದು ಅನಿಸಿತಂತೆ. ಆದರೆ, ಅದು ಈ ರೀತಿಯ ದೊಡ್ಡ ಯಶಸ್ಸು ಸಿಗುತ್ತೆ ಅಂತ ಗೊತ್ತಿರಲಿಲ್ಲವಂತೆ. ಬಹಳ ದಿನಗಳ ಬಳಿಕ ಒಳ್ಳೆಯ ಸಿನಿಮಾ ಮಾಡಿದ ಖುಷಿ ನನ್ನದು.
ಕವಿರಾಜ್ ಅವರ ನಿರ್ದೇಶನದಲ್ಲಿಂದು ಹೊಸ ಶೈಲಿ ಇದೆ. ತುಂಬಾ ತಾಳ್ಮೆಯಿಂದ, ಏನು ಬೇಕೋ ಅಷ್ಟನ್ನೇ ಕೇಳಿ ಪಡೆಯುವ ನಿರ್ದೇಶಕರು ಅವರು, ಸೆಟ್‌ಗೆ ಮುನ್ನ ಮಾಡಿಕೊಂಡ ತಯಾರಿ ಈ ಯಶಸ್ಸಿಗೆ ಕಾರಣ’ ಎಂದರು ಮೇಘನಾ ಗಾಂವ್ಕರ್. ಛಾಯಾಗ್ರಾಹಕ ಎಲ್.ಎಂ.ಸೂರಿ (ಗುಂಡ್ಲುಪೇಟೆ ಸುರೇಶ್) ಅವರು ಅಷ್ಟೊಂದು ಚಿತ್ರ ಮಾಡಿದ್ದರೂ, ಅಷ್ಟಾಗಿ ಮೆಚ್ಚುಗೆ ಸಿಕ್ಕಿರಲಿಲ್ಲವಂತೆ. ಆದರೆ, ಈ ಚಿತ್ರ ನೋಡಿ ಹೊರಬಂದ ಅದೆಷ್ಟೋ ಜನ ಫೋನ್ ಮಾಡಿ ಶುಭಹಾರೈಸಿದ್ದಾರಂತೆ. ಶ್ರಮ ಮತ್ತು ಶ್ರದ್ಧೆಯ ಜೊತೆ ಒಳ್ಳೆಯ ವಿಷಯ ಇದ್ದರೆ ಸಿನಿಮಾ ಗೆಲುವು ಕೊಡುತ್ತೆ ಎಂಬುದಕ್ಕೆ ಈ ಚಿತ್ರ ಕಾರಣ’ ಎಂಬುದು ಎಲ್. ಎಂ.ಸೂರಿ ಮಾತು. ವಿತರಕ ದೀಪಕ್ ಅವರು ಸಿನಿಮಾ ಪ್ರಾಮಾಣಿಕವಾಗಿಯೇ 25 ದಿನ ಪೂರೈಸಿದೆ. ಈಗಿನ ದಿನದಲ್ಲಿ ಇಷ್ಟು ದಿನ ಪ್ರದರ್ಶನ ಕಾಣುವುದು ಕಷ್ಟ. ಕೆಲವು ಚಿತ್ರಮಂದಿರಗಳಲ್ಲಿ ಬೇಡಿಕೆ ಇಟ್ಟು ಸಿನಿಮಾ ಹಾಕಿಸಿಕೊಂಡಿದ್ದಾರೆ ಎಂದರು.