Advertisement

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

05:59 PM Mar 31, 2023 | Team Udayavani |

ಹುಬ್ಬಳ್ಳಿ: ನೀವು ರುಚಿ ರುಚಿಯಾದ ಸ್ವಾದಿಷ್ಟ ತಿಂಡಿ-ತಿನಿಸು, ಚಾಟ್‌ ಐಟೆಮ್ಸ್‌, ಐಸ್‌ ಕ್ರೀಮ್ಸ್‌, ಜ್ಯೂಸ್‌, ಮಿಲ್ಕ್ ಶೇಕ್‌ ಹಾಗೂ ಉತ್ತರ-ದಕ್ಷಿಣ ಭಾರತದ ಸ್ವಾದಭರಿತ ಶುದ್ಧ ಸಸ್ಯಾಹಾರ-ಮಾಂಸಾಹಾರ ಆಹಾರ ಸವಿಯಲು ಇಷ್ಟಪಡುತ್ತಿದ್ದರೆ ರೈಲಿನ ಐಷಾರಾಮಿ ಬೋಗಿಯಲ್ಲೇ ಪಡೆಯಬಹುದು. ಅದುವೇ “ಬೋಗಿ ಬೋಗಿ ಕ್ಯಾಂಟೀನ್‌’ದಲ್ಲಿ.

Advertisement

ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರ್ಮ್ ಹೊಂದಿರುವ ಹಾಗೂ ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯ ಪ್ರಮುಖ ನಿಲ್ದಾಣ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಎದುರಿನ ಬಿಆರ್‌ ಟಿಎಸ್‌ ರೈಲ್ವೆ ನಿಲ್ದಾಣ ಹತ್ತಿರ ಈ “ಬೋಗಿ ಬೋಗಿ ಕ್ಯಾಂಟೀನ್‌’ ತಲೆ ಎತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ.

ಈ ರೀತಿ ಖಾಸಗಿ ಕಂಪನಿಯವರು ಸಾರ್ವಜನಿಕವಾಗಿ ರೈಲು ಬೋಗಿ ಬಳಸಿಕೊಂಡು “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’ ಆರಂಭಿಸಿರುವುದು ಕರ್ನಾಟಕದಲ್ಲೇ ಮೊಟ್ಟ ಮೊದಲನೇಯದ್ದಾಗಿದೆ. ರೈಲಿನ ಹಾಳಾದ(ಸ್ಕ್ರ್ಯಾಪ್) ಬೋಗಿಯನ್ನೇ ಬಳಸಿಕೊಂಡು ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ಆಧುನಿಕ ರೆಸ್ಟೋರೆಂಟ್‌ಗಳಂತೆ ಸುಖಾಸಿನ ಐಷಾರಾಮಿ ಸೀಟ್‌ಗಳನ್ನು ಅಳವಡಿಸಿ ಶೃಂಗಾರಗೊಳಿಸಲಾಗಿದೆ. ಇಲ್ಲಿ ರೆಸ್ಟೋರೆಂಟ್‌ಗಳಂತೆ ನಿಮಗೆ ಇಷ್ಟವಾದ ತಿಂಡಿ-ತಿನಿಸು, ಪಾನೀಯ ಹಾಗೂ ಸಸ್ಯಾಹಾರ-ಮಾಂಸಾಹಾರವನ್ನು ಮಾಣಿ(ಸರ್ವರ್‌)ಗೆ ಆರ್ಡರ್‌ ಮಾಡಬಹುದು.

ಅದನ್ನು ಬೋಗಿಯಲ್ಲಿ ಕುಳಿತು ಇಲ್ಲವೆ ಪಕ್ಕದಲ್ಲೇ ಇರುವ ಓಪನ್‌ ಗಾರ್ಡನ್‌ದಲ್ಲಾದರೂ ಸವಿಯಬಹುದು. ಅಥವಾ ಮನೆಗೆ ಪಾರ್ಸಲ್‌ ತೆಗೆದುಕೊಂಡು ಹೋಗಬಹುದು. ಈ ಐಷಾರಾಮಿ ಕ್ಯಾಂಟೀನ್‌ ಬೋಗಿಯಲ್ಲಿ ಪ್ರತ್ಯೇಕವಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಆಹಾರ ಸಿದ್ಧಪಡಿಸಲಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾದ ಬಾಣಸಿಗರಿದ್ದಾರೆ. ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ಸೇವೆ ದಿನದ 24 ತಾಸು ಇರುತ್ತದೆ.

Advertisement

ಬುಕ್‌ ಮೈ ಬೋಗಿ ಸೌಲಭ್ಯ: ಬುಕ್‌ ಮೈ ಬೋಗಿ ಮೂಲಕ ಮುಂಗಡವಾಗಿ ಆಸನ ಕಾಯ್ದಿರಿಸಬಹುದು. ಐಆರ್‌ಟಿಸಿಯ ಇ-ಕ್ಯಾಟರಿಂಗ್‌ ಮುಖಾಂತರ ಪ್ರಯಾಣಿಕರು ತಮಗೆ ಬೇಕಾದ ಆಹಾರ, ತಿಂಡಿ- ತಿನಿಸು ಆರ್ಡರ್‌ ಮಾಡಬಹುದು. ಆಗ ವೆಂಡರ್‌ಗಳು ಪ್ರಯಾಣಿಕರು ಇರುವ ರೈಲಿನ ಬೋಗಿಗೆ ತೆರಳಿ ಸರಬರಾಜು ಮಾಡುತ್ತಾರೆ. ಬೋಗಿ ಬೋಗಿ ಕ್ಯಾಂಟೀನ್‌ದಲ್ಲಿ ಟೇಕ್‌ ಅವೇ ಕೌಂಟರ್‌ ಸಹ ಇದ್ದು ಇಲ್ಲಿಂದ ಯಾವುದೇ ಸಮಯದಲ್ಲೂ ಆಹಾರ ಪಿಕ್‌ಅಪ್‌
ಮಾಡಬಹುದು. ಇದಲ್ಲದೆ ಹುಬ್ಬಳ್ಳಿಯ ಯಾವುದೇ ಭಾಗದ ಜನರು ಆಹಾರ ಬುಕ್‌ ಮಾಡಿದರೆ ಅವರ ಮನೆಗೆ ಉಚಿತವಾಗಿ ಡೆಲಿವರಿ ಮಾಡಲಾಗುತ್ತದೆ. ಈ ಕ್ಯಾಂಟೀನ್‌ದಲ್ಲಿ ಅರೇಬಿಯನ್‌ ಜ್ಯೂಸ್‌ ಮತ್ತು ಕನ್ಸೆಂಟ್‌ ಫೂಡ್ಸ್‌ ವಿಶೇಷವಾಗಿದೆ. ಬೋಗಿ ಬೋಗಿ ಕ್ಯಾಂಟೀನ್‌ದಲ್ಲಿನ ದರಗಳು ಮಾರುಕಟ್ಟೆಗೆ ತಕ್ಕಂತೆ ಕೈಗೆಟುಕುವಂತಹದ್ದಾಗಿವೆ.

ಮುಂಬಯಿಯ ಸಿಎಸ್‌ಟಿಯಲ್ಲಿ ಮೊದಲ ಬಾರಿಗೆ ಇಂತಹ ಬೋಗಿ ಬೋಗಿ ಕ್ಯಾಂಟೀನ್‌ ಆರಂಭಿಸಲಾಗಿತ್ತು. ಅಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಇಂತಹ ಕ್ಯಾಂಟೀನ್‌ ಆರಂಭಿಸಲಾಗಿದೆ. ಬೋಗಿಯಲ್ಲಿ 50 ಜನ, ಗಾರ್ಡನ್‌ನಲ್ಲಿ 50 ಜನ ಕುಳಿತುಕೊಳ್ಳುವಷ್ಟು ಆಸನ ವ್ಯವಸ್ಥೆಯಿದೆ.

ಏಪ್ರಿಲ್‌ ಎರಡನೇ ವಾರದಲ್ಲಿ ಹೊಸಪೇಟೆಯಲ್ಲಿ ಹಾಗೂ ಮಿರಜ್‌ನಲ್ಲಿ, ಮೇ ಮೊದಲ ವಾರ ಪುಣೆಯಲ್ಲಿ ಇಂತಹ ಕ್ಯಾಂಟೀನ್‌ ತೆರೆಯಲಾಗುವುದು. ಅದಕ್ಕೆ ಅವಶ್ಯವಾದ ಎಲ್ಲ ಸೆಟ್‌ಅಪ್‌ ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ದೇಶದ ಇನ್ನಿತರೆಡೆ ಇಂತಹ 100 ಬೋಗಿ ಬೋಗಿ ಕ್ಯಾಂಟೀನ್‌ ಆರಂಭಿಸಲು ಯೋಜಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ನಿಲ್ದಾಣಗಳತ್ತಲೇ ಗಮನ ಹರಿಸಲಾಗುವುದು. ಕ್ಯಾಟರಿಂಗ್‌ ನಲ್ಲಿ ಯುವ ಉದ್ಯಮಿ ಪ್ರಶಸ್ತಿ, 2016ರಲ್ಲಿ ಉಪ ರಾಷ್ಟ್ರಪತಿ ಪದಕ ಪಡೆದಿರುವೆ.
ಇಸ್ರಾರ್‌ ಮಂಗಳೂರು, ಮರಿಹಾ ಕಮ್ಯುನಿಕೇಶನ್‌ ಎಂಡಿ, ಹುಬ್ಬಳ್ಳಿ

ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ದಿನದ 24 ತಾಸು ತಿಂಡಿ-ತಿನಿಸು, ಆಹಾರ ದೊರಕಬೇಕೆಂಬ ಉದ್ದೇಶ ಹಾಗೂ ಜನರಿಗೆ ಅನುಕೂಲವಾಗಲೆಂದು ನಿಲ್ದಾಣದ ಆವರಣದಲ್ಲಿ ಕ್ಯಾಂಟೀನ್‌ ಆರಂಭಿಸಲು ಖಾಸಗಿ ಕಂಪನಿಯವರಿಂದ ಇ-ಟೆಂಡರ್‌ ಆಹ್ವಾನಿಸಲಾಗಿತ್ತು. ಹುಬ್ಬಳ್ಳಿಯಲ್ಲಿ ಮರಿಹಾ ಕಮ್ಯುನಿಕೇಶನ್‌ದವರಿಗೆ ರೈಲಿನ ಹಳೆಯ ಐಸಿಎಫ್‌ (ಇಂಟಿಗ್ರೆಲ್‌ ಕೋಚ್‌ ಫ್ಯಾಕ್ಟರಿ) ಬೋಗಿ ಮತ್ತು ನಿಲ್ದಾಣದ ಮುಂಭಾಗದಲ್ಲಿ 300 ಚದುರ ಮೀಟರ್‌ ಸ್ಥಳವನ್ನು ವಾರ್ಷಿಕ ಲೆಸನ್ಸ್‌ ಫೀ 20ಲಕ್ಷ ರೂ.ದಂತೆ ಐದು ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದೆ. ಬೋಗಿ ಸ್ಥಳಾಂತರ ಮತ್ತು ಅದರ ಅಭಿವೃದ್ಧಿ ಅವರೇ ಮಾಡಿಕೊಂಡಿದ್ದಾರೆ. ಗುತ್ತಿಗೆಯ ಅವಧಿ ಪೂರ್ಣಗೊಂಡ ನಂತರ ಯಥಾವತ್ತಾಗಿ ಇಲಾಖೆಗೆ ಬಿಟ್ಟು ಕೊಡಬೇಕಾಗುತ್ತದೆ. ಇದೇ ರೀತಿ ಹೊಸಪೇಟೆ ಮತ್ತು ಬೆಳಗಾವಿ ನಿಲ್ದಾಣದಲ್ಲೂ ಕ್ಯಾಂಟೀನ್‌ ಆರಂಭಿಸಲು ಇ-ಟೆಂಡರ್‌ ಕರೆಯಲಾಗಿದೆ. ಹೊಸಪೇಟೆಯ ಟೆಂಡರ್‌ ಹಂಚಿಕೆ ಆಗಿದೆ.
ಎಸ್‌. ಹರೀತಾ, ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ

ಗದಗ ರಸ್ತೆಯ ರೈಲ್ವೆ ಕೇಂದ್ರ ಆಸ್ಪತ್ರೆ ಎದುರು ರೈಲ್ವೆ ಇಲಾಖೆ ನಿರ್ಮಿಸಿರುವ ರೈಲ್ವೆ
ಮ್ಯೂಸಿಯಂ(ವಸ್ತು ಸಂಗ್ರಹಾಲಯ)ದಲ್ಲೂ ರೈಲಿನ ಬೋಗಿಯಲ್ಲೂ ಐಷಾರಾಮಿ ಕ್ಯಾಂಟೀನ್‌ ತೆರೆಯಲಾಗಿತ್ತು. ಆದರೆ ಅಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದ್ದರಿಂದ ಅದರ ನಿರ್ವಹಣೆ ಅಷ್ಟಕಷ್ಟೆ ಆಗಿದೆ.

*ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next