Advertisement

ಆದಿವಾಸಿಗಳಿಗೆ ಸವಲತ್ತು ನೀಡಲು ಸಿದ್ಧ

06:55 AM Aug 10, 2018 | |

ಬೆಂಗಳೂರು: ಆದಿವಾಸಿ ಸಮುದಾಯಗಳಿಗೆ ಸರ್ಕಾರ ಅಗತ್ಯ ಸೌಲತ್ತು ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ
ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

Advertisement

24ನೇ ವಿಶ್ವ ಆದಿವಾಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿ ಸಮುದಾಯಗಳಿಗೆ ಸರ್ಕಾರ ಅಗತ್ಯ ಸೌಲತ್ತು ನೀಡಲು ಸಿದ್ಧವಿದೆ. ಆದಿವಾಸಿ ಸಮಾಜ ಕಷ್ಟದಲ್ಲಿದೆ ಎನ್ನುವ ನೋವು ನನಗಿದೆ. ಸರ್ಕಾರ ನಿಮ್ಮೆಲ್ಲರನ್ನು ಗುರುತಿಸುವಲ್ಲಿ ಕಡೆಗಣಿಸಿದೆ. ಶೈಕ್ಷಣಿಕವಾಗಿ  ನಾವು ನಿಮ್ಮನ್ನು ಕಡೆಗಣಿಸಿದ್ದೇವೆ. ನಿಮ್ಮ ಹಕ್ಕುಗಳನ್ನು ಪಡೆಯುವುದರಲ್ಲಿ ನಿಮಗೆ ಅನ್ಯಾಯವಾಗಿರುವ ಬಗ್ಗೆ ನಾನು ಗಮನಿಸಿದ್ದೇನೆ ಎಂದರು.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕಡಿತಗೊಳಿಸುತ್ತಿರುವುದಾಗಿ ವರದಿಗಳು ಬರುತ್ತಿವೆ. ಶಾದಿ
ಭಾಗ್ಯ, ಮಾತೃಪೂರ್ಣ ಯೋಜನೆಗಳಲ್ಲಿ ಹಣ ಕಡಿತ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆ ವಿಷಯವೇ ನನಗೆ ಗೊತ್ತಿಲ್ಲ. ನನಗೆ ಯಾವುದೇ ಜಾತಿ,ಪ್ರದೇಶ ಇಲ್ಲ. ನಾನು ಬಡವರ ಜತೆ ಬೆರೆಯುವಂತವನು.
ಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುವುದರಿಂದಲೇ ಜನರು ಪ್ರತಿ ದಿನ ನನ್ನ ಮನೆ ಹಾಗೂ ವಿಧಾನಸೌಧದ ಮುಂದೆ ಬಂದು ನಿಲ್ಲುತ್ತಾರೆ. ವಿಧಾನಸೌಧ ಹಾಗೂ ಗೃಹ ಕಚೇರಿ ಪ್ರವೇಶಕ್ಕೆ ಯಾರಿಗೂ ನಿರ್ಬಂಧ ಹೇರಿಲ್ಲ. ಆ ರೀತಿಯ ಆದೇಶವನ್ನೂ ಮಾಡಿಲ್ಲ ಎಂದರು.

ಆದಿವಾಸಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ಯೆಗಳ ಮಾಹಿತಿ ಪಡೆಯುವಂತೆ ಸಚಿವರಿಗೆ ಸೂಚಿಸಿದ್ದೆ. ಆದರೆ, ಆದಿವಾಸಿಗಳನ್ನು ನಿರ್ಲಕ್ಷಿಸಿದರು ಎಂಬ ಆರೋಪ ಬರಬಾರದು ಎಂದು ಬಂದಿರುವುದಾಗಿ ತಿಳಿಸಿದರು.

ಕಲಬುರಗಿಯ ಕನಕಗುರು ಪೀಠಾಧ್ಯಕ್ಷ ಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿ,ಮುಖ್ಯಮಂತ್ರಿ ಕುಮಾರಸ್ವಾಮಿ ತಾಯಿ ಕರುಳ ಸಂಸ್ಕೃತಿಯವರು. ಬೇರೆ ಮುಖ್ಯಮಂತ್ರಿಗಳು ಆದಿವಾಸಿಗಳ ಬಗ್ಗೆ ಮಲತಾಯಿ ಪ್ರೀತಿ ತೋರಿದ್ದರು. ಪ್ರಾಣಿಗಳಿಗಿಂತ ನಿಕೃಷ್ಠವಾಗಿ ಬದುಕುತ್ತಿರುವ ಆದಿವಾಸಿ ಜನರನ್ನು ಕಾಪಾಡುವ ಆಡಳಿತ ನೀಡಬೇಕು. ಆದಿವಾಸಿ ಜನಾಂಗ ಅವರಿಂದ ತಾಯಿ ಪ್ರೀತಿ ಬಯಸುತ್ತಿದೆ. ಅತ್ತೆ ಪ್ರೀತಿ ನಮಗೆ ಬೇಡ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌, ಸಚಿವ ಬಂಡೆಪ್ಪ ಕಾಂಶಪೂರ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಹಾಜರಿದ್ದರು.

ಕ್ಷಮೆಯಾಚಿಸಿದ ಸಿಎಂ
ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ತಮ್ಮ ಮಗನ
ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಇದ್ದಿದ್ದರಿಂದ ಒಬ್ಬ ತಂದೆಯಾಗಿ ಮಗನ ಭವಿಷ್ಯ ರೂಪಿಸಬೇಕಾದ ಜವಾಬ್ದಾರಿಯೂ ನನ್ನ ಮೇಲಿದೆ. ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ. ನನ್ನ ಕಷ್ಟ ನನಗೆ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯಿದೆಯಿಂದ ಬುಡಕಟ್ಟು ಜನಾಂಗಕ್ಕೆ ಯಾವುದೇ ಪ್ರಯೋಜನವಿಲ್ಲ. ಅರಣ್ಯ ಕಾಯ್ದೆಯನ್ನು ಸಡಿಲ ಮಾಡುವ ಅಗತ್ಯವಿದೆ.
ಪುಟ್ಟರಂಗಶೆಟ್ಟಿ, ಸಚಿವ

ಅರಣ್ಯ ಹಕ್ಕು ಕಾಯಿದೆ ಹೆಸರಿನಲ್ಲಿ ನಮಗೆ ನಿಷೇಧ ಹೇರಲಾಗಿದೆ. ಅರಣ್ಯ ಇಲಾಖೆಯವರು ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಆದಿವಾಸಿಗಳಿಗೆ ಅರಣ್ಯ ಗಾರ್ಡ್‌ ಹುದ್ದೆ ನೀಡಿದರೆ,ನಾವೇ ಅರಣ್ಯ ರಕ್ಷಿಸುತ್ತೇವೆ. ನಮಗೆ ಮನೆ ಕೊಡಿ.
– ಕೃಷ್ಣಯ್ಯ, ಆದಿವಾಸಿ ಅಲೆಮಾರಿ ಸಮುದಾಯದ
ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next