ಬೊಕಾಖಾತ್: ಅಸ್ಸಾಂ ಸರ್ಕಾರದ ವಶದಲ್ಲಿದ್ದ 2,479 ಖಡ್ಗಮೃಗ ಕೊಂಬುಗಳನ್ನು ಬುಧವಾರ ಸಾರ್ವಜನಿಕರ ಮುಂದೆ ದಹನ ಮಾಡಲಾಗಿದೆ. ಅಂತಾರಾಷ್ಟ್ರೀಯ ಖಡ್ಗಮೃಗಗಳ ದಿನಾಚರಣೆಯಂದೇ ಈ ದಹನ ಕ್ರಿಯೆ ಕೈಗೊಳ್ಳಲಾಗಿತ್ತು.
ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಮಾಣದ ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದೆ.
ಖಡ್ಗಮೃಗಗಳ ಕೊಂಬುಗಳು ಔಷಧಿಗೆ ಬಳಕೆಯಾಗುತ್ತವೆ ಎಂಬ ಮೂಢನಂಬಿಕೆಯನ್ನು ನಿವಾರಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?
“ಖಡ್ಗಮೃಗಗಳ ಘನತೆಯೇ ಅದರ ಮುಖದ ಮೇಲಿರುವ ಕೊಂಬು. ಆ ಕೊಂಬಿಗೂ ಅಲ್ಲಿದ್ದರೇನೇ ಬೆಲೆ. ಆ ಮೃಗದಿಂದ ಬೇರ್ಪಟ್ಟ ಕೊಂಬಿಗೆ ಯಾವುದೇ ಬೆಲೆಯಿಲ್ಲ. ಕೊಂಬುಗಳನ್ನು ಸುಡುವ ಮೂಲಕ ಆ ಕೊಂಬುಗಳು ಯಾವುದಕ್ಕೂ ಉಪಯೋಗವಿಲ್ಲ ಎಂಬ ಸಂದೇಶವನ್ನು ಖಡ್ಗಮೃಗಗಳನ್ನು ಬೇಟೆಯಾಡುವರಿಗೆ ಹಾಗೂ ಅವುಗಳ ಕೊಂಬುಗಳನ್ನು ದಾಸ್ತಾನು ಮಾಡುವವರಿಗೆ ರವಾನಿಸಿದ್ದೇವೆ’ ಎಂದು ತಿಳಿಸಿದ್ದಾರೆ.