ಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 39.14 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಈವರೆಗೆ 24.51 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಹೇಳಿದರು.
ನಗರದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಾತ್ರಿ ಯೋಜನೆಯಡಿ 150 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ 74.53 ಕೋಟಿ ರೂ. ಖರ್ಚು ಮಾಡಲಾಗಿದೆ. ಎಂದು ಹೇಳಿದರು.
ಕೆರೆಗಳ ಹೂಳೆತ್ತುವ ಮತ್ತು ವಿವಿಧೋದ್ದೇಶ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯ ಹಾಗೂ ಗಿಡಗಳ ನೆಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ನಿಯಮಾವಳಿ ಪ್ರಕಾರ ಎಲ್ಲ ಫ್ಯಾಕ್ಟರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಬರುವ ಬೇಸಿಗೆ ಹಂಗಾಮಿನಲ್ಲಿ ಉಂಟಾಗಬಹುದಾದ ಕುಡಿಯುವ ನೀರು ಸಮಸ್ಯಾತ್ಮಕ ಹಳ್ಳಿಗಳನ್ನು ಹಾಗೂ ನಗರ ಪ್ರದೇಶಗಳನ್ನು ಕೂಡಲೇ ಗುರುತಿಸಿ ಕ್ರಿಯಾ ಯೋಜನೆ ರೂಪಸಿ ಆಯಾ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳಲ್ಲಿ ಅನುಮೋದನೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಮಾತನಾಡಿ, ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಒಟ್ಟು 13.86 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಸುಮಾರು 64 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಬಹುದು ಎಂದು ಹೇಳಿದರು.
ಎಸ್‌ಪಿ ಎನ್. ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.