Advertisement

ಡೆವಲಪರ್ಸ್ ಗಳಿಂದ 245 ಕೋಟಿ ಬಾಕಿ

12:27 PM Nov 20, 2022 | Team Udayavani |

ಬೆಂಗಳೂರು: ದೇಶದಲ್ಲೇ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮ ಅತಿವೇಗವಾಗಿ ಬೆಳೆಯುತ್ತಿದೆ. ಅದರ ಜತೆಗೆ ಉದ್ಯಮಿಗಳು, ಡೆವೆಲಪರ್ಗಳು ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಅನು ಷ್ಠಾನಗೊಳಿಸದೆ ಗ್ರಾಹಕರಿಗೆ ಮೋಸ ಮಾಡುವ ಸಂಖ್ಯೆಯೂ ಹೆಚ್ಚುತ್ತಿದೆ.

Advertisement

ಹೀಗೆ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ನಿವೇಶನ ಮತ್ತು ಮನೆ ನೀಡದ ಕಾರಣಕ್ಕಾಗಿ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು 245 ಕೋಟಿ ರೂ. ಪರಿಹಾರ ನೀಡಬೇಕಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ದೇಶದ ಮೊದಲ 5 ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಒಂದು ವರದಿಯ ಪ್ರಕಾರ ಬೆಂಗಳೂರಿನಲ್ಲಿ ವಾರ್ಷಿಕ 45ರಿಂದ 60 ಸಾವಿರ ಯುನಿಟ್‌ ಮನೆ, ಕಚೇರಿಗಳು ಮಾರಾಟವಾಗುತ್ತಿವೆ. ಪ್ರತಿ ವರ್ಷ 20ಕ್ಕೂ ಹೆಚ್ಚಿನ ಬೃಹತ್‌ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಯೋಜನೆಗಳ ಕಾಮಗಾರಿ ಆರಂಭವಾಗುತ್ತಿದೆ.

ಹೀಗೆ ಆರಂಭವಾಗುವ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಅಥವಾ ಸರಿಯಾದ ದಾಖಲೆಗಳಿಲ್ಲದೆ ಫ್ಲ್ಯಾಟ್‌, ನಿವೇಶನ ಖರೀದಿ ಮಾಡುವ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಹೀಗೆ ಮೋಸ ಹೋದ ಗ್ರಾಹಕರು, ಸಾರ್ವಜನಿಕರು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ)ದಲ್ಲಿ ದೂರು ನೀಡುತ್ತಿದ್ದಾರೆ. ಹೀಗೆ ನೀಡಲಾದ ದೂರಿನ ವಿಚಾರಣೆ ನಡೆಸಿದ ಕೆ-ರೇರಾ ನ್ಯಾಯಾಧಿಕರಣ 683 ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ.

ವಸೂಲಿ ಪ್ರಕ್ರಿಯೆಗೆ ಆದೇಶ: ಭೂದಾಖಲೆ ಕಾಯ್ದೆ ಪ್ರಕಾರ ಕೆ-ರೇರಾದಿಂದ ಪರಿಹಾರ ನೀಡಲು ಆದೇಶವಾದ 60 ದಿನಗಳಲ್ಲಿ ಡೆವೆಲ ಪರ್ಗಳು ಗ್ರಾಹಕರಿಗೆ ಪರಿಹಾರ ವಿತರಿಸಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ಇನ್ನೂ ಪರಿಹಾರ ನೀಡಿಲ್ಲ. ಹೀಗಾಗಿ ಪರಿಹಾರ ನೀಡದ ಹಾಗೂ ಕೆ-ರೇರಾ ಆದೇಶಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿ ಸದವರ ಪಟ್ಟಿಯನ್ನು ಕೆ-ರೇರಾ ಸಿದ್ಧಪಡಿಸುತ್ತಿದೆ. ಆ ಪಟ್ಟಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ನೀಡಿ, ನಿಯಮದಂತೆ ಡೆವೆಲಪರ್ಗಳನ್ನು ಸಂಪರ್ಕಿಸಿ ಪರಿಹಾರ ವಸೂಲಿ ಮಾಡುವಂತೆ ಸೂಚಿಸಲಾಗುತ್ತಿದೆ. ಒಂದು ವೇಳೆ ಜಿಲ್ಲಾಡಳಿತದ ಕ್ರಮಕ್ಕೂ ಪರಿಹಾರ ನೀಡದ ಡೆವೆಲಪರ್ಗಳ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಆನಂತರ ನಿಗದಿತ ಅವಧಿಯವರೆಗೆ ಕಾದು ಸ್ಥಿರಾಸ್ತಿಯನ್ನು ಹರಾಜು ಮಾಡಿ, ಅದರಿಂದ ಬರುವ ಮೊತ್ತವನ್ನು ಗ್ರಾಹಕರಿಗೆ ಪರಿಹಾರ ರೂಪದಲ್ಲಿ ನೀಡಲು ಕೆ-ರೇರಾ ನಿರ್ಧರಿಸಿದೆ.

6 ಸಾವಿರದಲ್ಲಿ 3,500 ದೂರುಗಳ ವಿಚಾರಣೆ : ಬಿಲ್ಡರ್‌, ಡೆವೆಲಪರ್ಗಳಿಂದ ಮೋಸ ಹೋದವರು ಕೆ-ರೇರಾಗೆ ಈವರೆಗೆ 6 ಸಾವಿರಕ್ಕೂ ಹೆಚ್ಚಿನ ದೂರುಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಈಗಾಗಲೇ 3,500 ದೂರುಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗಿದೆ. ಅದರಲ್ಲಿ 683 ಪ್ರಕರಣಗಳಲ್ಲಿ ಡೆವೆಲಪರ್ಗಳು ನಿಯಮ ಪಾಲಿಸದೆ, ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ನಿವೇಶನ ಅಥವಾ ವಸತಿ ನೀಡದಿರುವುದು ದೃಢಪಟ್ಟಿದೆ. ಹೀಗಾಗಿ ಅಷ್ಟು ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ನೀಡುವುದಕ್ಕೆ ಕೆ-ರೇರಾ ನ್ಯಾಯಾಧಿಕರಣ ಸಂಬಂಧಪಟ್ಟ ಡೆವಲಪರ್ಗಳಿಗೆ ಆದೇಶಿಸಿದೆ.

Advertisement

271 ಕೋಟಿ ರೂ. ಪರಿಹಾರ : ಕೆ-ರೇರಾ ನೀಡಿರುವ ಆದೇಶದಂತೆ 683 ಪ್ರಕರಣಗಳಲ್ಲಿ ಒಟ್ಟು 271 ಕೋಟಿ ರೂ. ಪರಿಹಾರ ಮೊತ್ತವನ್ನು ಗ್ರಾಹಕರಿಗೆ ನೀಡಬೇಕಿದೆ. ಅದರಲ್ಲಿ ಈಗಾಗಲೇ 84 ಪ್ರಕರಣಗಳಲ್ಲಿ 26 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇನ್ನೂ 559 ಪ್ರಕರಣಗಳಲ್ಲಿ ಪರಿಹಾರ ನೀಡಬೇಕಿದ್ದು, ಒಟ್ಟು 245 ಕೋಟಿ ರೂ. ಪರಿಹಾರ ವಸೂಲಿ ಮಾಡುವುದು ಬಾಕಿಯಿದೆ.

ಕೆ-ರೇರಾದಲ್ಲಿ ದಾಖಲಾಗಿದ್ದ 6 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳ ಪೈಕಿ 683 ಪ್ರಕರಣಗಳಲ್ಲಿ ಪರಿಹಾರ ವಸೂಲಾತಿಗೆ ಆದೇಶಿಸಲಾಗಿದೆ. ಅದರಲ್ಲಿ ಈಗಾಗಲೇ 84 ಪ್ರಕರಣಗಳಿಂದ ವಸೂಲಿಯಾಗಿದ್ದು, ಇನ್ನೂ 599 ಪ್ರಕರಣಗಳಿಂದ 245 ಕೋಟಿ ರೂ. ಪರಿಹಾರ ವಸೂಲಿ ಮಾಡಬೇಕಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಕ್ರಮಕ್ಕೆ ಸೂಚಿಸಲಾಗುತ್ತಿದೆ. –ಇಬ್ರಾಹಿಂ ಮೈಗೂರು ಕೆ-ರೇರಾ ಕಾರ್ಯದರ್ಶಿ

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next