ಶಿರಸಿ: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ತೋಟಗಾರಿಕಾ ಇಲಾಖೆ ನೆರವಿನಿಂದ ಅನಾನಸ್ ಬೆಳೆಗಾರರಿಗೆ ಎದುರಾಗಿದ್ದ ಒಂದು ಸಂಕಷ್ಟಕ್ಕೆ ಪರಿಹಾರ ಸಿಕ್ಕಿದೆ. ಪ್ರಥಮ ಹಂತದಲ್ಲಿ 240 ಟನ್‌ನಷ್ಟು ಹಣ್ಣು ಇದೀಗ ಕನ್ನಡದ ಪ್ರಥಮ ರಾಜಧಾನಿಯಿಂದ ರಾಜ್ಯ ರಾಜಧಾನಿಯನ್ನು ತಲುಪಿದೆ.
ಅನಾನಸ್ 1 ಕೆಜಿಗೆ 10 ರೂ.ನಂತೆ ಪ್ರಥಮ ಹಂತದಲ್ಲಿ 240 ಟನ್ ಅನಾನಸ್ ಬನವಾಸಿ ಭಾಗದಿಂದ ಬೆಂಗಳೂರಿಗೆ ರವಾನೆಯಾಗಿದೆ. ಅಲ್ಲಿ 200ಕ್ಕೂ ಅಧಿಕ ಆಟೋ ಟಿಪ್ಪರ್ ಮೂಲಕ ವಿವಿಧ ಅಪಾರ್ಟ್‌ಮೆಂಟ್‌ಗೆ ತಲುಪಿಸಲು ಯೋಜಿಸಲಾಗಿದೆ. ಇನ್ನೂ ಬನವಾಸಿ ಭಾಗದಲ್ಲಿ 1200 ಟನ್ ಅನಾನಸ್ ಹಣ್ಣಿದೆ. ಇವುಗಳಿಗೂ ಬದಲೀ ಮಾರುಕಟ್ಟೆಗೆ ಯೋಜಿಸಲಾಗಿದೆ.
ಕಂಗಾಲಾಗಿದ್ದ ರೈತರು: ಬನವಾಸಿ ಕೇಂದ್ರವಾಗಿ 1500ಕ್ಕೂಹೆಚ್ಚು ಟನ್ ಅನಾನಸ್ ಉತ್ಪಾದನೆ ಇದೆ. ಬನವಾಸಿ, ಸೊರಬ, ಸಾಗರ ಪ್ರಾಂತದ ಅನಾನಸ್ ಬೆಳೆಗಾರರೂ ಬನವಾಸಿಯನ್ನೇ ನೆಚ್ಚಿಕೊಂಡಿದ್ದಾರೆ. 50ಕ್ಕೂ ಅಧಿಕ ಅನಾನಸ್ ಬೆಳೆಗಾರರು ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದರು. ಕೊಯ್ಲಿನ ಖರ್ಚೂ ಬಾರದು ಎಂದು ಕಂಗಾಲಾಗಿದ್ದರು. ವರ್ತಕರ ಬಳಿ ಮನವಿ ಮಾಡಿಕೊಂಡರೂ ಖರೀದಿ ಮಾಡುವವರೂ ಇಲ್ಲವಾಗಿತ್ತು.
ಹೊಸ ಆಶಾಕಿರಣ: ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಹಕಾರದಲ್ಲಿ ಬನವಾಸಿ ಭಾಗದಲ್ಲಿ ಮೂರು ಅನಾನಸ್ ಫ್ಯಾಕ್ಟರಿ ಕೆಲಸ ಆರಂಭಿಸಿತ್ತು. ಮುಂದಿನ ಹಂತವಾಗಿ ತೋಟಗಾರಿಕಾ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರರ ಗಮನಕ್ಕೂ ತಂದರು. ಬೆಂಗಳೂರಿನ ಅಪಾರ್ಟ್ ಮೆಂಟ್‌ನಲ್ಲಿರುವವರಿಗೆ ನಮ್ಮ ಅನಾನಸ್ ಹಣ್ಣನ್ನು ತಲುಪಿಸಿದರೆ ಹೇಗೆ ಎಂದು ಯೋಚಿಸಿದರು. ಇದರ ಪರಿಣಾಮವೇ ಬೆಂಗಳೂರಿನ ವಂದೇ ಮಾತರಂ ಟ್ರಸ್ಟ್‌ನ ಮೂಲಕ 200ಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗೆ ಇಲ್ಲಿನ ಹಣ್ಣನ್ನು ತಲುಪಿಸುವ ಯೋಜನೆ ಅನುಷ್ಠಾನಗೊಂಡಿದೆ.