ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಿಜಿಎಸ್ ಸ್ಫೋರ್ಟ್ಸ್ ಕ್ಲಬ್‌ನ 24 ವಿದ್ಯಾರ್ಥಿಗಳು ಕಳೆದ ವಾರ ಪುದುಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಲ್ ಸ್ಫೋರ್ಟ್ಸ್ ಮತ್ತು ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ, ಮಠದ ಕಾರ್ಯದರ್ಶಿ, ಕ್ಲಬ್‌ನ ಪ್ರಧಾನ ಪೋಷಕ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನ ಪಡೆದು ಜೂ.3ರಿಂದ 6ರವರೆಗೆ ಪುದುಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟ ದಲ್ಲಿ ಭಾಗವಹಿಸಿ 19 ವರ್ಷದೊಳಗಿನ ಬಾಲಕರ ವಿಭಾಗದ ಕಬಡ್ಡಿ, ವಾಲಿಬಾಲ್‌ನಲ್ಲಿ ಪ್ರಥಮ, 17ವರ್ಷದೊಳಗಿನ ಬಾಲಕರ ವಿಭಾಗದ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ, 14 ವರ್ಷದೊಳಗಿನ ಗುಂಡು ಎಸೆತ
ಸ್ಪರ್ಧೆಯಲ್ಲಿ ಪ್ರಥಮ, 12 ವರ್ಷದೊಳಗಿನ 400 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ಆಗಸ್ಟ್ ತಿಂಗಳಲ್ಲಿ ನೇಪಾಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾ ಶಿಕ್ಷಕರಾದ ಟಿ.ಎಸ್. ವೆಂಕಟೇಶ್, ಪಿ.ಮಣಿ ಅವರಿಂದ ತರಬೇತಿ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿರುವ ಶ್ರೀಮಠದ ಶಾಲಾ ಕಾಲೇಜುಗಳ 24 ವಿದ್ಯಾರ್ಥಿಗಳನ್ನು ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಸೇರಿ ಸ್ಫೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಎಲ್ಲಾ ಸದಸ್ಯರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ಪರಮಶಿವಯ್ಯ, ಎಲ್ಲಾ ದೈಹಿಕ ಶಿಕ್ಷಕರು ಅಭಿನಂದಿಸಿದ್ದಾರೆ.