ನಾಂದೇಡ್(ಮಹಾರಾಷ್ಟ್ರ): ಕಳೆದ 24 ಗಂಟೆಗಳಲ್ಲಿ ನಾಂದೇಡ್‌ನ ಸರಕಾರಿ ಆಸ್ಪತ್ರೆಯಲ್ಲಿ 12 ನವಜಾತ ಶಿಶುಗಳು ಮತ್ತು ಹೆಚ್ಚಿನ ವಯಸ್ಕರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಡೀನ್ ಹೇಳಿ, ಔಷಧಿಗಳು ಮತ್ತು ಆಸ್ಪತ್ರೆಯ ಸಿಬಂದಿ ಕೊರತೆಯನ್ನು ದೂಷಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಸಂಭವಿಸಿದ 24 ಸಾವುಗಳಲ್ಲಿ 12 ವಯಸ್ಕರು ವಿವಿಧ ಕಾಯಿಲೆಗಳು, ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ನಾಂದೇಡ್‌ನ ಶಂಕರರಾವ್ ಚವ್ಹಾಣ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ.
“ಕಳೆದ 24 ಗಂಟೆಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸಾವನ್ನಪ್ಪಿವೆ. ಹನ್ನೆರಡು ವಯಸ್ಕರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ವಿವಿಧ ಸಿಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ನಾವು ಸ್ವಲ್ಪ ಕಷ್ಟವನ್ನು ಎದುರಿಸಿದ್ದೇವೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ,ಸಾವುಗಳು ದುರದೃಷ್ಟಕರ ಎಂದಿದ್ದು, ಆಸ್ಪತ್ರೆಯಲ್ಲಿ ಏನಾಯಿತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರತಿಪಕ್ಷಗಳು ರಾಜ್ಯದ ಏಕನಾಥ್ ಶಿಂಧೆ ಸರಕಾರದ ಮೇಲೆ ತೀವ್ರ ವಾಗ್ದಾಳಿ ಪ್ರಾರಂಭಿಸಿದ್ದು “ಟ್ರಿಪಲ್ ಇಂಜಿನ್ ಸರ್ಕಾರ್ (ಬಿಜೆಪಿ, ಏಕನಾಥ್ ಶಿಂಧೆ ಸೇನೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ) ಸಾವುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು” ಎಂದು ಹೇಳಿವೆ.