Advertisement

24 ಗಂಟೆ ತೆರೆಯಲಿವೆ ವಾಣಿಜ್ಯ ಮಳಿಗೆ : ಜವಾಬ್ದಾರಿ ಹೆಚ್ಚಲಿ

01:41 AM Jan 04, 2021 | Team Udayavani |

ಹತ್ತಕ್ಕಿಂತ ಅಧಿಕ ಉದ್ಯೋಗಿಗಳಿರುವ ವ್ಯಾಪಾರ ಮಳಿಗೆಗಳನ್ನು ದಿನದ 24 ಗಂಟೆಯೂ ತೆರೆಯಬಹುದೆಂಬ ಮಹತ್ವದ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಬಹುವರ್ಷಗಳಿಂದಲೇ ಇದ್ದ ಇಂಥದ್ದೊಂದು ಬೇಡಿಕೆಗೆ ಈಗ ಅಧಿಕೃತ ಮೊಹರು ಬಿದ್ದಿರುವುದಕ್ಕೆ, ವ್ಯಾಪಾರ ಕ್ಷೇತ್ರವು ಕೋವಿಡ್‌ನಿಂದಾಗಿ ತತ್ತರಿಸಿರುವುದೇ ಕಾರಣ.

Advertisement

ಕೊರೊನಾ ಆರಂಭವಾದಾಗ ತಿಂಗಳಾನುಗಟ್ಟಲೇ ಇದ್ದ ಲಾಕ್‌ಡೌನ್‌ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌, ಹೊಟೇಲ್‌ಗಳಿಗೆ ನೀಡಿರುವ ಆರ್ಥಿಕ ಆಘಾತ ಅಷ್ಟಿಷ್ಟಲ್ಲ. ಈ ಹಿನ್ನೆಲೆಯಲ್ಲಿಯೇ ಇಂಥದ್ದೊಂದು ತ್ವರಿತ ಹಾಗೂ ಬಹೂಪಯೋಗಿ ನಿರ್ಧಾರ ಹೊರಬಿದ್ದಿರುವುದು ಸ್ವಾಗತಾರ್ಹ. ಏಕೆಂದರೆ ಹೊಟೇಲ್‌, ಶಾಪ್ ಗಳನ್ನು ದಿನದ 24 ಗಂಟೆಯೂ ತೆರೆಯುವುದರಿಂದಾಗಿ ಒಂದೆಡೆ ವ್ಯಾಪಾರ ವರ್ಗವೂ ಚೇತರಿಸಿಕೊಳ್ಳುತ್ತದೆ, ಗ್ರಾಹಕರಿಗೂ ಅನುಕೂಲವಾಗುತ್ತದೆ ಮತ್ತು ಉದ್ಯೋಗಾವಕಾಶವೂ ಹೆಚ್ಚಲಿದೆ.

ಸಹಜವಾಗಿಯೇ, ಯಾವುದೇ ಹೊಸ ಬದಲಾವಣೆಯಿರಲಿ, ಅದು ತನ್ನೊಡಲಲ್ಲಿ ಹಲವು ಸವಾಲುಗಳನ್ನೂ ಹೊತ್ತು ತರುತ್ತದೆ. 24/7 ಕೆಲಸಕ್ಕೆ ತಕ್ಕಷ್ಟು ಉದ್ಯೋಗಿಗಳ ನೇಮಕವಾಗಬೇಕು, ಯಾವುದೇ ಕಾರಣಕ್ಕೂ ಕೆಲಸಗಾರರು ಅತಿಯಾದ ಕೆಲಸದಿಂದಾಗಿ ಬಸವಳಿಯಬಾರದು, ಇನ್ನು ಅವರ ಶೋಷಣೆಯಾಗದಂತೆ ತಡೆಯುವ ಅಗತ್ಯ, ಮಹಿಳಾ ಸಿಬಂದಿಯ ಸುರಕ್ಷತೆಯ ಪ್ರಶ್ನೆಯೂ ಇರುತ್ತದೆ. ಈ ಕಾರಣಕ್ಕಾಗಿಯೇ ಸರಕಾರವು ಈ ಸಂಗತಿಗಳನ್ನು ಪರಿಗಣಿಸಿ ಹಲವು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ರೂಪಿಸಿರುವುದು, ಅದರ ಪಾಲನೆಯನ್ನು ಕಡ್ಡಾಯಗೊಳಿಸಿರುವುದು ಉತ್ತಮ ಸಂಗತಿ.

ಒಂದೆಡೆ, ಮಾಲ್‌ಗಳು, ಹೊಟೇಲ್‌ಗ‌ಳು, ಸೂಪರ್‌ ಮಾರುಕಟ್ಟೆಗಳು ಸರಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತಿವೆಯಾದರೂ, ಇನ್ನೊಂದೆಡೆ ತಮ್ಮ ವ್ಯಾಪಾರಕ್ಕೆ ಹೊಡೆತ ಬೀಳಬಹುದು ಎಂದು ಚಿಕ್ಕ ವ್ಯಾಪಾರಿಗಳಿಂದ ಆತಂಕವೂ ವ್ಯಕ್ತವಾಗುತ್ತಿದೆ. ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲೇಬೇಕಿದೆ. ಇನ್ನು, ದಿನರಾತ್ರಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದರಿಂದಾಗಿ ವಾಣಿಜ್ಯ ಚಟುವಟಿಕೆಗಳು ಎಷ್ಟು ಬೇಗ ಚೇತರಿಸಿಕೊಳ್ಳಲಿವೆ ಎನ್ನುವುದು ಸಮಯದ ಜತೆಗೆ ತಿಳಿಯಲಿದೆ . ಆದರೆ ಇದು ಕೋವಿಡ್‌ ಸಮಯವಾಗಿರುವುದರಿಂದಾಗಿ ಸಾಂಕ್ರಾಮಿಕದ ಸವಾಲನ್ನೂ ಬಹಳ ಎಚ್ಚರಿಕೆಯಿಂದ ಎದುರಿಸಬೇಕಾದ ಜವಾಬ್ದಾರಿ ಹೊಟೇಲ್‌, ಸೂಪರ್‌ ಮಾರುಕಟ್ಟೆಗಳು ಹಾಗೂ ಮಾಲ್‌ಗಳ ಮೇಲೆ ಇದೆ. ಜನರೂ ಸಹ, ಮುಂಜಾಗ್ರತ ಕ್ರಮಗಳನ್ನು ಅವಗಣಿಸಿದರೆ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಅಡ್ಡಿ ಎದುರಾಗಬಹುದು.

ದೇಶದಲ್ಲಿ ಕೋವಿಡ್‌ನ‌ ಹಾವಳಿ ಈ ಪರಿ ಹೆಚ್ಚಳವಾದರೂ ನಾಗರಿಕರಲ್ಲಿ ಇನ್ನೂ ಬೇಜವಾಬ್ದಾರಿ ಢಾಳಾಗಿಯೇ ಕಾಣುತ್ತಿದೆ. ಮಾರುಕಟ್ಟೆಗಳಲ್ಲಿ, ಮಾಲ್‌ಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಜನನಿಬಿಡತೆಯು ಕಳವಳ ಹೆಚ್ಚಿಸುವಂತಿರುತ್ತದೆ. ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲೂ ಮೇಲ್ನೋಟಕ್ಕೆ ಸರಕಾರ ಎಷ್ಟೇ ಕಟ್ಟುನಿಟ್ಟಾದ ಕ್ರಮಗಳನ್ನು ಹೇರಿದ್ದರೂ ಸಹ ಮೆಟ್ರೋ ನಗರಿಗಳಲ್ಲಿ ಯುವ ಜನಾಂಗ ಸಾಮಾಜಿಕ ಅಂತರ ಪರಿಪಾಲನೆ ಮರೆತದ್ದನ್ನು, ಮಾಸ್ಕ್ ಧರಿಸುವಿಕೆಯನ್ನು ನೆಪ ಮಾತ್ರಕ್ಕೆಬಂತೆ ಪರಿಗಣಿಸಿದ್ದನ್ನು ಗಮನಿಸಿದ್ದೇವೆ. ಈ ಕಾರಣಕ್ಕಾಗಿಯೇ, ಇನ್ನುಮುಂದೆ 24/7 ವಾಣಿಜ್ಯ ಚಟುವಟಿಕೆಗಳನ್ನು ನಡೆ ಸಲಿರುವ ವ್ಯಾಪಾರ ಮಳಿಗೆಗಳು ಈ ಸಾಂಕ್ರಾಮಿಕದ ವಿರುದ್ಧದ ಸುರಕ್ಷತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿರುವುದು ಅಗತ್ಯ. ಇನ್ನು ಮಹಿಳಾ ಸುರಕ್ಷತೆ, ಉದ್ಯೋಗಿಗಳಿಗೆ ಕ್ಯಾಬ್‌ ವ್ಯವಸ್ಥೆ, ಅವರಿಗೆ ಯಾವುದೇ ರೀತಿಯಲ್ಲಿ ಶೋಷಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಅವು ಸಕ್ಷಮವಾಗಿ ನಿಭಾಯಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next