ಬೆಂಗಳೂರು: ಸಾರ್ವಜನಿಕರ ಅಗತ್ಯ ಪರಿಗಣಿಸಿ ಕೆಂಪೇಗೌಡ ಬಸ್‌ನಿಲ್ದಾಣ, ರೈಲು ನಿಲ್ದಾಣ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣದ ಸುತ್ತಲ ಪ್ರದೇಶದಲ್ಲಿ ದಿನದ 24 ಗಂಟೆ ಹೋಟೆಲ್ ಹಾಗೂ ರೆಸ್ಟೊರೆಂಟ್‌ಗಳು ವಹಿವಾಟು ನಡೆಸಬಹುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೆಜೆಸ್ಟಿಕ್ ಹಾಗೂ ರೈಲು ನಿಲ್ದಾಣದ ಸುತ್ತಮುತ್ತಲ ಭಾಗದಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ರಾತ್ರಿ 12ರ ನಂತರ ಹೋಟೆಲ್, ರೆಸ್ಟೊರೆಂಟ್ ಮುಚ್ಚುವುದರಿಂದ ಊಟ ಸಿಗದೇ ತೊಂದರೆ ಅನುಭವಿಸುತ್ತಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಿರುವಂತೆ 24 ಗಂಟೆಗಳ ಕಾಲ ವಹಿವಾಟು ನಡೆಸಬಹುದು. ಆದರೆ, ರಾತ್ರಿ ಹೆಚ್ಚುವರಿ ಅವಧಿಯಲ್ಲಿ ಮದ್ಯಮಾರಾಟ ಮಾಡಬಾರದು. ಒಂದು ವೇಳೆ ಇಂತಹ ಘಟನೆಗಳು ಕಂಡು ಬಂದರೆ ಅಂತಹ ಹೋಟೆಲ್‌ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬಸ್‌ನಿಲ್ದಾಣಗಳಿಗೆ ಬರುವ ಸಾವಿರಾರು ಮಂದಿ ಜನ ರಾತ್ರಿ 1 ಗಂಟೆ ಬಳಿಕ ಹಸಿವಾದಾಗ ಊಟ ಸಿಗದೇ ತೊಂದರೆ ಅನುಭವಿಸುತ್ತಿದ್ದ ವಿಚಾರ ಗಮನಕ್ಕೆ ಬಂದಿತ್ತು. ಜೊತೆಗೆ ಹೋಟೆಲ್ ಮಾಲೀಕರು ಸಹ ಚರ್ಚೆ ನಡೆಸಿದ್ದರು. ಹೀಗಾಗಿ ಮದ್ಯ ಮಾರಾಟ ಹೊರತುಪಡಿಸಿ ದಿನದ 24 ಗಂಟೆಯೂ ಊಟ, ತಿಂಡಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ರಾತ್ರಿ 1 ಗಂಟೆಯವರೆಗೂ ಹೋಟೆಲ್ ನಡೆಸಲು ಅನುಮತಿ ಇದ್ದ ಹಿನ್ನೆಲೆಯಲ್ಲಿ ಆರ್‌ಟಿನಗರದ ರಾಜು ಲಂಚ್ ಹೋಂ ತೆರೆದಿತ್ತು. ಆದರೆ, 12 ಗಂಟೆ ಬಳಿಕ ಬಂದ ಎಸಿಪಿ ಮಂಜುನಾಥ್ ಬಾಬು, ಅನುಮತಿಯಿಲ್ಲದೆ ಯಾಕೆ ಬಾಗಿಲು ತೆಗೆದಿದ್ದೀರಾ ಎಂದು ಪ್ರಶ್ನಿಸಿ ಹೋಟೆಲ್ ಮಾಲೀಕರನ್ನು ಥಳಿಸಿದ ಘಟನೆಗೆ ವ್ಯಾಪಕ ಆಕ್ರೋಶವ್ಯಕ್ತವಾಗಿತ್ತು.
ಅಲ್ಲದೆ ಹೋಟೆಲ್ ಮಾಲೀಕರು ಪೊಲೀಸರ ಅನಗತ್ಯ ಕಿರುಕುಳದ ಬಗ್ಗೆ ಗೃಹ ಸಚಿವರು ಹಾಗೂ ಹಿರಿಯ ಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಹಿಂದೆ ಜಾರಿಯಿದ್ದ ಆದೇಶವನ್ನೇ ಅನ್ವಯವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮದ್ಯ ಮಾರಾಟ ಮಾಡುವಂತಿಲ್ಲ: ಮೆಜೆಸ್ಟಿಕ್ ಬಸ್‌ನಿಲ್ದಾಣ, ರೈಲು ನಿಲ್ದಾಣ, ಸ್ಯಾಟ್‌ಲೆçಟ್ ಬಸ್ ನಿಲ್ದಾಣದ ಸುತ್ತಮುತ್ತಲ ಭಾಗದ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ದಿನದ 24 ಗಂಟೆಗಳೂ ಊಟ ತಿಂಡಿ ಮಾರಾಟ ವಹಿವಾಟಿಗೆ ನಿರ್ಭಂಧವಿಲ್ಲ. ಆದರೆ, ರಾತ್ರಿ ವೇಳೆ ನಿಗದಿತ ಅವಧಿ ಮುಗಿದ ಬಳಿಕ ಮದ್ಯ ಮಾರಾಟ ಮಾಡುವಂತಿಲ್ಲ.