ಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಸಂಪೂರ್ಣ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದು ನಿರ್ವಿವಾದ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಅನಂತರ ಈ ಮಾತನ್ನು ಗಟ್ಟಿ ಧ್ವನಿಯಲ್ಲಿ ಪದೇಪದೆ ಹೇಳಲಾಗುತ್ತದೆ ಎನ್ನುವುದು ಮೆಚ್ಚಬೇಕಾದಂಥ ವಿಚಾರವೇ ಹೌದು. ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡ ಜಮ್ಮು -ಕಾಶ್ಮೀರ ಪುನರ್ ಸಂಘಟನೆ (ತಿದ್ದುಪಡಿ)ಮಸೂದೆ ಮತ್ತು ಜಮ್ಮು -ಕಾಶ್ಮೀರ ಮೀಸಲು (ತಿದ್ದುಪಡಿ) ಮಸೂದೆಗಳಲ್ಲಿ ಮಂಡಿಸಲಾಗಿರುವ ವಿಚಾರಗಳು ಸ್ಪಷ್ಟ ಮತ್ತು ನೇರವಾಗಿರುವ ವಿಚಾರಗಳೇ ಆಗಿವೆ.
ವಿಶೇಷವಾಗಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ದೇಶಿತ ಜಮ್ಮು – ಕಾಶ್ಮೀರ ವಿಧಾನಸಭೆಯಲ್ಲಿ 24 ಸ್ಥಾನಗಳನ್ನು ಮೀಸಲಾಗಿ ಇರಿಸುವುದು, ಇಬ್ಬರು ನಾಮ ನಿರ್ದೇಶಿತ ಸದಸ್ಯರ ಬದಲಾಗಿ ಐವರನ್ನು ಆ ಸ್ಥಾನಕ್ಕೆ ನೇಮಿಸುವುದನ್ನು ಈ ಮಸೂದೆಯಲ್ಲಿ ಸೇರ್ಪಡೆ ಮಾಡಲಾಗಿದೆ.
ಎಪ್ಪತ್ತು ವರ್ಷಗಳಿಂದ ರಕ್ತ ಮತ್ತು ಕಣ್ಣೀರ ಧಾರೆಗಳನ್ನು ಕಣಿವೆಯ ಜನರು ನೋಡಿದ್ದಾರೆ. ಅದನ್ನು ಒರೆಸಿ, ಸಂತೋಷ ಮತ್ತು ನಗುವಿನ ದಿನಗಳನ್ನು ತರುವ ನಿಟ್ಟಿನಲ್ಲಿ ಇದೊಂದು ಅಂಬೆಗಾಲಿನ ಪ್ರಯತ್ನವೇ ಸರಿ.
ಸದ್ಯಕ್ಕೆ ಜಮ್ಮು – ಕಾಶ್ಮೀರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಸಂಬಂಧಿಸಿದ ಸಮಿತಿ 2022ರ ಮೇಯಲ್ಲಿ ತನ್ನ ಅಂತಿಮ ವರದಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿಯೂ ಕೂಡ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಜತೆಗೆ ವಿಲೀನಗೊಳ್ಳಲಿರುವ ಸಂದರ್ಭದಲ್ಲಿ ಆ ಭಾಗದ ಜನರ ಆಶೋತ್ತರಗಳನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ 24 ಕ್ಷೇತ್ರಗಳನ್ನು ಮೀಸಲಾಗಿ ಇರಿಸುವ ಬಗ್ಗೆ ಪ್ರಸ್ತಾವ ಮಾಡಲಾಗಿತ್ತು. ಸದ್ಯದ ಎರಡು ಮಸೂದೆಗಳಿಂದ ಮತ್ತೂಮ್ಮೆ ಕೇಂದ್ರ ಸರಕಾರ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಅದರಲ್ಲಿ ಯಾವ ರಾಜಿಯೂ ಇಲ್ಲ ಎನ್ನುವ ಅಂಶವನ್ನು ಜಗತ್ತಿಗೇ ಮತ್ತೂಮ್ಮೆ ಸ್ಪಷ್ಟವಾಗಿ ಸಾರಿದಂತಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಿಂದಲೇ 2019ರ ವರೆಗೆ, ಜಾರಿಗೆ ಬಂದಿದ್ದ ಸಂವಿಧಾನದ 370ನೇ ವಿಧಿಯಿಂದಾಗಿ 45 ಸಾವಿರ ಮಂದಿ ಮುಗ್ಧ ನಾಗರಿಕರು ತಮ್ಮದಲ್ಲದ ಅಪರಾಧಕ್ಕಾಗಿ ಭಯೋತ್ಪಾದಕರ ಬಂದೂಕುಗಳಿಗೆ ಆಹುತಿಯಾದರು. ಕಾಶ್ಮೀರಿ ಪಂಡಿತ ಸಮುದಾಯ ಸೇರಿದಂತೆ ದೇಶದ ಮುಕುಟಮಣಿಯಾಗಿರುವ ಜಮ್ಮು-ಕಾಶ್ಮೀರದ 46,631 ಕುಟುಂಬಗಳ 1,57,967 ಮಂದಿ ನಮ್ಮ ದೇಶದಲ್ಲಿಯೇ ನಿರ್ವಸತಿಗರಂತೆ ಬಾಳುವೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಹೊರತಾಗಿರುವ ಇತರ ಪಕ್ಷಗಳ ಸರಕಾರಗಳು ಕಾಶ್ಮೀರದ ಹಿತಾಸಕ್ತಿಯನ್ನು ಅವಗಣಿಸಿದ್ದವು. ಹೀಗಾಗಿ ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿತ್ತು ಎನ್ನುವುದು ಹಲವರ ವಾದಗಳು ಹೌದಾದರೂ, ಅವುಗಳು ಹೊಂದಿದ್ದ ನಿಲುವುಗಳು ಕಣಿವೆ ರಾಜ್ಯದ ಪರಿಸ್ಥಿತಿಯನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದ್ದು ಸುಳ್ಳಲ್ಲ.
2019ರ ಆ.5ರಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಲಾಗಿದೆ. ಆ ದಿನದಿಂದ ಇದುವರೆಗೆ ಅಲ್ಲಿ ಪರಿಸ್ಥಿತಿ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 70 ವರ್ಷಗಳಿಂದ ರಕ್ತ ಮತ್ತು ಕಣ್ಣೀರು ಹೊಳೆಯಂತೆ ಹರಿದು ಹೋಗಿರುವ ಸ್ಥಳದಲ್ಲಿ ಐದು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಸಾಮಾನ್ಯ ಪರಿಸ್ಥಿತಿ ನಿರ್ಮಾಣ ಅಸಾಧ್ಯ. ಆದರೆ ಆ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಗಳನ್ನು ಇರಿಸಲಾಗಿದೆ ಎನ್ನುವುದು ಹಗಲಿನಷ್ಟೇ ಸತ್ಯ. ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ನಿರ್ಮಾಣ ಆಗಬೇಕು ಎಂಬ ಕಳಕಳಿ ಇರುವ ಮನಃಸ್ಥಿತಿಯವರು ಕೇಂದ್ರ ಸರಕಾರದ ಪ್ರಯತ್ನಗಳಿಗೆ ಬೆಂಬಲ ನೀಡಬೇಕು.