ಕಾಸ್‌ಗಂಜ್ (ಉತ್ತರ ಪ್ರದೇಶ): ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೊಳಕ್ಕೆ ಬಿದ್ದ ಪರಿಣಾಮ ಎಂಟು ಮಕ್ಕಳು ಸೇರಿದಂತೆ 24 ಜನರು ಸಾವನ್ನಪ್ಪಿರುವ ಘೋರ ದುರಂತ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಘ ಪೂರ್ಣಿಮೆಯ ಶುಭ ದಿನದಂದು ಪುಣ್ಯಸ್ನಾನಕ್ಕಾಗಿ ಗಂಗಾನದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಮಸ್ಥರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೇಳೆ ಭೀಕರ ಅವಘಡ ಸಂಭವಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
“ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ಟ್ರಾಕ್ಟರ್-ಟ್ರಾಲಿ ಪಲ್ಟಿಯಾಗಿ ಏಳರಿಂದ ಎಂಟು ಅಡಿ ಆಳದ ಹೊಂಡಕ್ಕೆ ಬಿದ್ದು 24 ಜನರು ಸಾವನ್ನಪ್ಪಿದ್ದಾರೆ. ಸುಮಾರು 15-20 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲಿಘರ್ ರೇಂಜ್‌ನ ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್ ಹೇಳಿದ್ದಾರೆ.
ಅಪಘಾತದಲ್ಲಿ ಮೃತ ದುರ್ದೈವಿಗಳ ಪೈಕಿ 22 ಮಂದಿಯ ಗುರುತು ಪತ್ತೆಯಾಗಿದ್ದು ಗುದ್ದಿ (75), ಶಕುಂತಲಾ (70), ದಿಗ್ವಿಜಯ್ ಅವರ ಪತ್ನಿ ಮೀರಾ (65), ರಾಜ್‌ಪಾಲ್ ಅವರ ಪತ್ನಿ ಮೀರಾ (55), ಗಾಯತ್ರಿ (52), ಪುಷ್ಪಾ ಎಂದು ಗುರುತಿಸಲಾಗಿದೆ. 45), ಶ್ಯಾಮಲತಾ (40), ಶಿವಂ (30), ಶಿವಾನಿ (25), ಅಂಜಲಿ (24), ಜ್ಯೋತಿ (24), ಉಷ್ಮಾ (24), ಸಪ್ನಾ (22), ದೀಕ್ಷಾ (19), ಸುನೈನಾ (10), ಕುಲದೀಪ್ ( 7), ದೇವಾಂಶಿ (6), ಸಂಧ್ಯಾ (5), ಕಾರ್ತಿಕ್ (4), ಲಡ್ಡು (3), ಸಿದ್ದು (ಒಂದೂವರೆ ವರ್ಷ) ಮತ್ತು ಪಾಯಲ್ (ಎರಡು ತಿಂಗಳು).