Advertisement

ಮತ್ತೆ 21 ಸಂಸದರ ಅಮಾನತು

12:30 AM Jan 04, 2019 | Team Udayavani |

ಹೊಸದಿಲ್ಲಿ: ಕಳೆದ 2 ದಿನ‌ಗಳಲ್ಲಿ ಲೋಕಸಭೆಯಲ್ಲಿ ಒಟ್ಟು 45 ಸಂಸದರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅಮಾನತು ಮಾಡಿದ್ದಾರೆ. ಬುಧವಾರ ಎಐಎಡಿಎಂಕೆಗೆ ಸೇರಿದ 24 ಸಂಸದರನ್ನು ಅಮಾನತು ಮಾಡಿದ್ದ ಸ್ಪೀಕರ್‌, ಗುರುವಾರವೂ ಮತ್ತೆ ಇತರ ಸಂಸದರು ಗದ್ದಲವೆಬ್ಬಿಸಿದ್ದರಿಂದ ಟಿಡಿಪಿ ಹಾಗೂ ಎಐಎಡಿಎಂಕೆ ಪಕ್ಷದ 21 ಸಂಸದರನ್ನು ಅಮಾನತು ಮಾಡಿದ್ದಾರೆ. ಈ ಎಲ್ಲರೂ ಅಧಿವೇಶನ ಮುಕ್ತಾಯ ವಾಗುವವರೆಗೂ ಸದನಕ್ಕೆ ಕಾಲಿಡುವಂತಿಲ್ಲ. ಎಐಎಡಿಎಂಕೆ 37 ಸಂಸದರನ್ನು ಹೊಂದಿದ್ದರೆ, ಟಿಡಿಪಿ 15 ಸಂಸದರನ್ನು ಹೊಂದಿದೆ. ಎಐಎಡಿಎಂಕೆ ಸಂಸದರು ಮೇಕೆದಾಟು ವಿಚಾರಕ್ಕೆ ಗದ್ದಲ ಮಾಡಿದ್ದರೆ, ಟಿಡಿಪಿ ಸಂಸದರು ಆಂಧ್ರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರಕ್ಕೆ ಗದ್ದಲ ನಡೆಸಿದ್ದರು. ಅಮಾನತುಗೊಂಡವರ ಪೈಕಿ ಮಾಜಿ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿರಾಜು ಕೂಡ ಇದ್ದಾರೆ.

Advertisement

ಅಧಿವೇಶನ ಸರಾಗವಾಗಿ ನಡೆಯುವುದಕ್ಕೋಸ್ಕರ ಬುಧವಾರ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸಭೆ ನಡೆಸಿದ್ದರಾದರೂ, ಅದು ಫ‌ಲಪ್ರದವಾಗಿಲ್ಲ. ಮೊದಲು ಸಂಸದರು ಒಪ್ಪಿಕೊಂಡಿದ್ದರಾದರೂ, ನಂತರ ಶಿಸ್ತುಕ್ರಮಕ್ಕೆ ಒಳಗಾದರೂ ಸರಿ ಗದ್ದಲ ಮಾಡುವುದಾಗಿ ಹೇಳಿದ್ದರು.

ಕಾಂಗ್ರೆಸ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸುಪ್ರೀಂಕೋರ್ಟ್‌ ತೀರ್ಪಿನಲ್ಲೇ ಉತ್ತರವಿದೆ ಎಂದಿದ್ದಾರೆ. ರಫೇಲ್‌ ಡೀಲ್‌ನಲ್ಲಿ ಯಾವುದೇ ವಿವಾದವಿಲ್ಲ. ವಿವಾದವೇನಿದ್ದರೂ ಕಾಂಗ್ರೆಸ್‌ ನಾಯಕರ ಮನಸಿನಲ್ಲಿ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಫ್ರಾನ್ಸ್‌ ವಿದೇಶಾಂಗ ಸಚಿವ ಜೀನ ವೆಸ್‌ ಲೆ ಡ್ರಿಯಾನ್‌ ಜೊತೆಗೆ ರಫೇಲ್‌ ಕುರಿತಂತೆ ಚರ್ಚೆ ನಡೆದಿದೆಯೇ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಕೇಳಿದ ಪ್ರಶ್ನೆಗೆ, ಈ ಬಗ್ಗೆ  ಚರ್ಚೆ ನಡೆದಿಲ್ಲ. ಸುಪ್ರೀಂ ತೀರ್ಪು ಪ್ರಕಟವಾ ಗಿರುವುದರಿಂದ ಅವರು ಖುಷಿಯಾಗಿದ್ದಾರೆ ಎಂದು ಸುಷ್ಮಾ ಪ್ರತಿಕ್ರಿಯಿಸಿದ್ದಾರೆ.

ಗುರುವಾರವೂ ರಫೇಲ್‌ ಚರ್ಚೆ
ರಫೇಲ್‌ ಒಪ್ಪಂದ ಕುರಿತಂತೆ ಬುಧವಾರ ಆರಂಭವಾದ ಚರ್ಚೆ ಗುರುವಾರವೂ ಮುಂದುವರಿದಿದ್ದು, ತೆರೆದ ಪುಸ್ತಕ ಪರೀಕ್ಷೆಗೆ ನಾನು ನೀಡಿದ ಆಹ್ವಾನವನ್ನು ಸ್ವೀಕರಿಸದೇ ಪ್ರಧಾನಿ ಮೋದಿ ಓಡಿ ಹೋಗಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಅಷ್ಟೇ ಅಲ್ಲ, ರಫೇಲ್‌ ಕುರಿತಂತೆ 4 ಪ್ರಶ್ನೆಗಳನ್ನೂ ಅವರು ಕೇಳಿದ್ದಾರೆ. ಆದರೆ ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆಯಲ್ಲಿ ಪ್ರಶ್ನೆ ಅನುಕ್ರಮ ತಪ್ಪಾಗಿದ್ದಕ್ಕೆ ಕಾಂಗ್ರೆಸ್‌ ಅಪಹಾಸ್ಯಕ್ಕೀಡಾದ ಪ್ರಸಂಗವೂ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌, ರಫೇಲ್‌ ಪರೀಕ್ಷೆಯಲ್ಲಿ ನಾವು ಪಾಸಾಗಿದ್ದೇವೆ. ಈಗ ಅಗಸ್ಟಾ ಪರೀಕ್ಷೆ ಎದುರಿಸುವ ಸರದಿ ನಿಮ್ಮದು ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next