ಬೆಂಗಳೂರು: ಬೇಸಗೆಯ ಪ್ರಖರತೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಜಾಸ್ತಿಯಾಗುತ್ತಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮುಂದಿನ ಮೂರು ತಿಂಗಳ ಕಾಲ ಪ್ರತಿ 2ನೇ ಹಾಗೂ 4ನೇ ಸೋಮವಾರ ಸಭೆ ನಡೆಸಿ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಬೇಕೆಂದು ಜಿ.ಪಂ. ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಪ್ರತಿ ತಿಂಗಳ ಎರಡನೇ ದಿನಾಂಕದಂದು ನಡೆಯುವ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾಸಿಕ ವೀಡಿಯೋ ಕಾನ್ಫರೆನ್ಸ್ ವಿಮಶಾì ಸಭೆಯಲ್ಲಿ ಸಚಿವರು ಮಾತನಾಡಿದರು.
ನೀರಿನ ಅಭಾವ ಎದುರಿಸುವ ಗ್ರಾಮಗಳಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಬೇಕು. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಜಿಲ್ಲಾ ಪಂಚಾಯತ್‌ಗಳಲ್ಲಿ 24/7 ಕಂಟ್ರೋಲ್ ರೂಂ ಆರಂಭಿಸಿ, ಸಿಬಂದಿ ನಿಯೋಜಿಸಲೂ ಸಚಿವರು ಸೂಚಿಸಿದರು. ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಕ್ಷಿಪ್ರ ಕಾರ್ಯಪಡೆ ರಚಿಸಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರತಿ ಸೋಮವಾರ ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಾರ್ವ ಜನಿಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ತಮ್ಮ ಪ್ರವಾಸ ಸಮಯದಲ್ಲಿ ನರೇಗಾ ಕಾಮಗಾರಿಗಳ ವೀಕ್ಷಣೆ, ಕೂಸಿನ ಮನೆ ಹಾಗೂ ಅರಿವು ಕೇಂದ್ರಗಳ ತಪಾಸಣೆಯನ್ನು ಸೇರಿಸಿಕೊಳ್ಳಬೇಕು ಎಂದೂ ಸೂಚಿಸಿದ್ದಾರೆ.
ಕಳೆದ ವರ್ಷ ಎಪ್ರಿಲ್ 1ರಿಂದ 2024ರ ಫೆಬ್ರವರಿ 27ರ ವರೆಗೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 2.12 ಲಕ್ಷ ನೀರಿನ ಮಾದರಿ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಗ್ರಾಮೀಣ ನೀರು ಕಲುಷಿತವಾಗದಂತೆ ಜಾಗ್ರತೆ ವಹಿಸಲಾಗಿದೆ. ಬೇಸಗೆ ಅವಧಿಯಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ನಿಗಾ ವಹಿಸಲು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.