Advertisement

ಸೊಸೈಟಿಯು ಗ್ರಾಹಕ ಸ್ನೇಹಿ ಹಣಕಾಸು ಸಂಸ್ಥೆಯಾಗಿ ಬೆಳೆದಿದೆ: ಭಾಸ್ಕರ ಕೆ. ಶೆಟ್ಟಿ

06:50 PM Feb 16, 2021 | Team Udayavani |

ಮುಂಬಯಿ: ಕಾರ್ಯಕ್ಷಮತೆ ಮತ್ತು ದೃಢತೆಯ ಶಕ್ತಿಯಿಂದ ಬೆಳೆದ ಕರ್ನಾಟಕ ಕೋ-ಆಪರೇಟಿವ್‌ ಹಣಕಾಸು ಸಂಸ್ಥೆ ಪ್ರಸ್ತುತ ಸಾಲಿನ ದೇಶದ ಗಂಭೀರ ಪರಿಸ್ಥಿತಿಯ ನಡುವೆಯೂ ಗ್ರಾಹಕ ಸ್ನೇಹಿ ಹಣಕಾಸು ಸಂಸ್ಥೆಯಾಗಿ ಕೆಲಸ ನಿರ್ವಹಿಸಿದ ಹೆಮ್ಮೆ ನಮಗಿದೆ. ಜತೆಗೆ ಕೋವಿಡ್  ಸಂಕಷ್ಟ ನಡುವೆಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ವಸಾಯಿ ಪರಿಸರದಲ್ಲಿ ಒಂದು ಆದರ್ಶ ಹಣಕಾಸು ಸಂಸ್ಥೆಯಾಗಿ ಬೆಳೆದು ನಿಂತಿದೆ. ಬ್ಯಾಂಕಿಂಗ್‌ ಕ್ಷೇತ್ರದ ಎಲ್ಲ ಕಾನೂನುಗಳನ್ನು ಹಣಕಾಸು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವ  ಮೂಲಕ ನಿಯಮ ಮತ್ತು ಕಾರ್ಯದಕ್ಷತೆಗೆ ಪಾತ್ರವಾಗಿದೆ ಎಂದು ಕರ್ನಾಟಕ ಕೋ- ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಅಧ್ಯಕ್ಷ ಭಾಸ್ಕರ ಕೆ. ಶೆಟ್ಟಿ ತಿಳಿಸಿದರು.

Advertisement

ಫೆ. 14ರಂದು ವಸಾಯಿ ಪಶ್ಚಿಮದ ಡಿ. ಸಿ. ಕ್ಲಬ್‌ ಆರಾನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕರ್ನಾಟಕ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 23ನೇ ವಾರ್ಷಿಕ ಮಹಾಸಭೆಯಲ್ಲಿ  ಮಾತನಾಡಿದ ಅವರು, ಪಾರದರ್ಶಕತೆಯ ಮೂಲಕ ಗ್ರಾಹಕರಿಗೆ ಸಾಲ ನೀಡಿ ನಿಬಂಧನೆಯಂತೆ ವಸೂಲಾತಿ ಮಾಡುವ ಈ ಹಣಕಾಸು ಸಂಸ್ಥೆಯು ಪ್ರಸ್ತುತ ವರ್ಷದಲ್ಲಿ ಶೇರುದಾರರಿಗೆ ಶೇ. 14ರಷ್ಟು ಡಿವಿಡೆಂಟ್‌ ನೀಡಿ ತನ್ನ ಕಾರ್ಯಕ್ಷಮತೆಯಿಂದ ಅನುಭವಿ ಹಣಕಾಸು ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸಕ್ತ ಕೊರೊನಾ ಕಾಲದಲ್ಲಿ ಲಾಭಾಂಶದಲ್ಲಿ ಕಡಿತ ಕಂಡರೂ ಗುರಿ ಮುಟ್ಟುವ ಯೋಜನೆಯಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಹೆಮ್ಮೆಯ ವಿಷಯ. ಎನ್‌ಪಿಯಲ್ಲಿ ಯಾವುದೇ ಹೆಚ್ಚುವರಿಯಾಗದೆ ಬಂಡವಾಳ ಸಾಮ್ಯತೆ ಶೇ. 14.28ರಷ್ಟಿದೆ. ಒಳ್ಳೆಯ ಮಾರ್ಗದರ್ಶನ ವಿವಿಧ

ಕೋ- ಆಪರೇಟಿವ್‌ ಇಲಾಖೆಯ ಅಧಿಕಾ ರಿಗಳ ಸಹಕಾರದಿಂದ ಈ ಸಂಸ್ಥೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯತಂತ್ರ ನಮ್ಮ ಮುಂದಿನ ಯೋಜನೆ ಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ  ಮಾತನಾಡಿ, ಒಂದು ಹಣಕಾಸು ಸಂಸ್ಥೆಯಿಂದ ಎಲ್ಲವನ್ನು ಸಕಾರಾತ್ಮಕವಾಗಿ ನಿರೀಕ್ಷಿಸುವಾಗ ಅದರ ನಿರ್ದೇಶಕ ಮಂಡಳಿಯ ಕಾರ್ಯಕ್ಷಮತೆಯ ಮೇಲೆ ಹೊಂದಿಕೊಂಡಿರುತ್ತದೆ. ಸಂಸ್ಥೆಯೊಂದು ಉನ್ನತ ಮಟ್ಟದತ್ತ ಬೆಳೆಯುತ್ತಿದೆ ಎಂದಾದರೆ ಸಾಧನೆಯ ಜತೆಗೆ ದೂರದೃಷ್ಟಿ ಚಿಂತನೆ ಬೆಳೆಸಿಕೊಂಡಿದೆ ಎಂದರ್ಥ. ಸಾಲ ನೀಡಿ ಅದನ್ನು ಪಡೆಯುವ ತಂತ್ರ ಈ ಸೊಸೈಟಿಯ ಬೆಳವಣಿಗೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ಇದೇ ಮುಂದುವರಿದಾಗ ಈ ಹಣಕಾಸು ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾದರಿ ಕೋ-ಆಪರೇಟಿವ್‌ ಸೊಸೈಟಿಯಾಗಿ ಗಮನ ಸೆಳೆಯಲಿದೆ. ಅದನ್ನು ಈ ಸಂಸ್ಥೆಯಿಂದ ಖಂಡಿತವಾಗಿಯೂ ನಿರೀಕ್ಷಿಸಬಹುದು ಎಂದು ತಿಳಿಸಿದರು.

ವಿಶೇಷ ಆಹ್ವಾನಿತ ಅತಿಥಿಯಾಗಿದ್ದ ಥಾಣೆ ಜಿಲ್ಲಾ ಸಹಕಾರಿ ಅಭಿವೃದ್ಧಿ ನಿಗಮದ ಅಧಿಕಾರಿ ಪಿ. ಕೆ. ಫನಾಸ್ಕರ್‌ ಮಾತನಾಡಿ, ನಿಸ್ವಾರ್ಥ, ಉತ್ಕೃಷ್ಟ ಸೇವಾ ಸಂಸ್ಥೆ ಎಂದರೆ ಅದು ಕರ್ನಾಟಕ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯಾಗಿದೆ. ಆರ್ಥಿಕತೆಯನ್ನು ಗುಣಮಟ್ಟದತ್ತ ಕೊಂಡೊಯ್ಯುವಲ್ಲಿ ಬಹುಪಾಲು ಈ ಸಂಸ್ಥೆಯದ್ದಾಗಿದೆ. ರಜತ ಮಹೋತ್ಸವದತ್ತ ಸಾಗುತ್ತಿರುವ ಈ ಸಂಸ್ಥೆ ಉತ್ತಮ ನಿಧಿ ಸಂಗ್ರಹದ ಮೂಲಕ ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

Advertisement

ಪ್ರಾರಂಭದಲ್ಲಿ ಸಂಸ್ಥೆಯ ಗೌರವ ಕೋಶಾಧಿಕಾರಿ ಮಂಜುಳಾ ಆನಂದ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್‌ ಕೆ. ಶೆಟ್ಟಿ ಹಾಗೂ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಭೆಯನ್ನು  ಉದ್ಘಾಟಿಸಿದರು. ನಿರ್ದೇಶಕ ಮುಕುಂದ್‌ ಎಸ್‌. ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಒ. ಪಿ. ಪೂಜಾರಿ 2019-2020ನೇ ವಾರ್ಷಿಕ ವರದಿ ಮಂಡಿಸಿದರು. ವಾರ್ಷಿಕ ಆದಾಯ ಲೆಕ್ಕಪತ್ರಗಳನ್ನು ನಿರ್ದೇಶಕ ಕರ್ನೂರು ಶಂಕರ್‌ ಆಳ್ವ ಸಭೆಯಲ್ಲಿ ವಾಚಿಸಿದರು. ಆಂತರಿಕ ಆಯವ್ಯಯ ಪಟ್ಟಿಯನ್ನು ಗೌರವ ಕೋಶಾಧಿಕಾರಿ ಮಂಜುಳಾ ಆನಂದ

ಶೆಟ್ಟಿ ಪ್ರಸ್ತುತಪಡಿಸಿದರು. 2020-2021ನೇ ಯೋಜನಾತ್ಮಕ ಆದಾಯ ಆಯವ್ಯಯ ವನ್ನು ಕಾರ್ಯಾಧ್ಯಕ್ಷ ಭಾಸ್ಕರ್‌ ಕೆ. ಶೆಟ್ಟಿ ವಿವರಿಸಿದರು. ಸಂಜಯ್‌ ಸಿ. ಹಲೆª ಅವರನ್ನು ಮುಂದಿನ ವರ್ಷಕ್ಕೆ ಲೆಕ್ಕಪರಿಶೋಧಕರನ್ನಾಗಿ ನೇಮಿಸಲಾಯಿತು.

ಕೋವಿಡ್‌ ನಿಯಮಗಳ ಪಾಲನೆಯ ಜತೆಗೆ ಸಂಸ್ಥೆಯ ಹಣಕಾಸು ಬೆಳವಣಿಗೆಗೆ ಸಹಕಾರ ನೀಡಿದ ಹಲವಾರು ಗಣ್ಯರನ್ನು, ಸದಸ್ಯರನ್ನು ಗೌರವಿಸಲಾಯಿತು. ನಿರ್ದೇಶಕ ದೇವೇಂದ್ರ ಬಿ. ಬುನ್ನನ್‌ ವಂದಿಸಿದರು. ವಿಜಯ ಪಿ. ಶೆಟ್ಟಿ ಕುತ್ತೆತ್ತೂರು ಕಾರ್ಯ ಕ್ರಮ ನಿರ್ವಹಿಸಿದರು. ನಿರ್ದೇಶಕರಾದ ರಮಾನಂದ ಯು. ಆಚಾರ್ಯ, ಶಶಿಕಾಂತ್‌ ಎನ್‌. ಶೆಟ್ಟಿ, ಉದ್ಧವ್‌ ಕಾಂಬ್ಳೆ, ಜಯಂತಿ ಎಸ್‌. ಕೋಟ್ಯಾನ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌ ಆರ್‌. ಸಿರೋಳೆ, ಪ್ರಬಂಧಕ ರವಿಕಾಂತ್‌ ನಾಯಕ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡೈಲಿ ಡಿಪಾಸಿಟ್‌ ಏಜೆಂಟ್‌ಗಳನ್ನು ಗೌರವಿಸಲಾಯಿತು.

ಸಂಸ್ಥೆಯ ಯೋಜನೆಗಳ ಬಗ್ಗೆ ಚರ್ಚೆ :

ಸಂಸ್ಥೆಯ ಕಳೆದ ಬಾರಿಯ ಹಣಕಾಸು ವೈಶಿಷ್ಟಗಳಲ್ಲಿ ಒಂದಾದ ಎನ್‌ಪಿಎ 24.35 ಲಕ್ಷ ರೂ. ಗಳಾಗಿದ್ದು, ಅದನ್ನು 17.30 ಲಕ್ಷ ರೂ. ಗಳಿಗೆ ಕಡಿತಗೊಳಿಸಿ ಒಟ್ಟು ಎನ್‌ಪಿಎಯನ್ನು ಶೇ. 2.87ರಿಂದ ಶೇ. 0.83ರಷ್ಟಕ್ಕೆ ತರಲಾಗಿದೆ. ಷೇರು ಬಂಡವಾಳವನ್ನು 100 ಲಕ್ಷ ರೂ. ಗಳಿಗಿಂತ ಅಧಿಕಗೊಳಿಸುವುದು, ನಿವ್ವಳ ಸ್ವಾಮ್ಯದ ನಿಧಿಯನ್ನು 200 ಲಕ್ಷ ರೂ.ಗಳಿಗೂ ಹೆಚ್ಚುಗೊಳಿಸುವುದು, ಥಾಣೆ ಮತ್ತು ಪಾಲ್ಘರ್‌ಗಳಲ್ಲಿ ಶಾಖೆಗಳನ್ನು ವಿಸ್ತರಿಸುವುದು, ಎನ್‌ಪಿಎ ಇನ್ನಷ್ಟು ಕಡಿತಗೊಳಿಸಿ ಗ್ರಾಹಕರಿಗೆ ಶೇ. 15ರಷ್ಟು ಡಿವಿಡೆಂಟ್‌ ನೀಡುವ ಜತೆಗೆ ಬಂಡವಾಳ ಸಂಗ್ರಹಿಸುವ ಬಗ್ಗೆ ಹೊಸ ಯೋಜನೆಗಳನ್ನು ತರುವ ಉದ್ದೇಶವನ್ನು ಸೊಸೈಟಿ ಹೊಂದಿದ್ದು, ಇದರ ಬಗ್ಗೆ ಚಿಂತನೆ ನಡೆಸುವುದಾಗಿ ಸಭೆಯಲ್ಲಿ ತಿಳಿಸಲಾಯಿತು.

ನಿರ್ದೇಶಕ ಮತ್ತು ಸಲಹೆಗಾರರಾದ ರಮೇಶ್‌ ಪ್ರಭು ಅವರ ಸಹಕಾರದಿಂದ ಪ್ರಾರಂಭಗೊಂಡ ಈ ಸಂಸ್ಥೆ ಹಲವಾರು ಹಣಕಾಸು ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಗ್ರಾಹಕರು ವಿವಿಧ ಯೋಜನೆಗಳ ಲಾಭ ಪಡೆಯುವಂತಾಗಿದೆ. ಕಾರ್ಯನಿರ್ವಹಿಸದ ಸೊತ್ತುಗಳ ಸಂಖ್ಯೆ ಕಡಿಮೆಯಾಗುವ ಮೂಲಕ ಕೋವಿಡ್  ಸಂಕಷ್ಟ ಪರಿಸ್ಥಿತಿ ನಡುವೆಯೂ ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಟ್‌ ನೀಡಿದ ಸಂಸ್ಥೆ ನಮ್ಮದಾಗಿದೆ. ಅಲ್ಲದೆ ವಿವಿಧ ಕೊ-ಆಪರೇಟಿವ್‌ ಇಲಾಖೆಗಳು ಸಂಸ್ಥೆಯ ಕಾರ್ಯದಕ್ಷತೆಯನ್ನು ಮೆಚ್ಚಿ ಪ್ರಮಾಣ ಪತ್ರವನ್ನಿತ್ತು ಗೌರವಿಸಿವೆ. -ಪಾಂಡು ಎಲ್‌. ಶೆಟ್ಟಿ ಉಪ ಕಾರ್ಯಾಧ್ಯಕ್ಷರು, ಕರ್ನಾಟಕ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ

 

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next