ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಇಂದಿಗೆ 23 ವರ್ಷ. ಸ್ವತಂತ್ರ ಜಿಲ್ಲೆಯಾಗಿ 22 ವರ್ಷವನ್ನು ತನ್ನೊಡಲಿಲ್ಲಿಟ್ಟುಕೊಂಡಿರುವ ದಾವಣಗೆರೆ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ನೋವಿನ ನಡುವೆಯೂ ನಗರಪಾಲಿಕೆಯಾಗಿದೆ, ಏದುಸಿರು ಬಿಡುತ್ತಲೇ ಸ್ಮಾರ್ಟ್ ಸಿಟಿಯಾಗುತ್ತಿದೆ.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಪ್ರಮುಖ ವ್ಯಾಪಾರಿ, ಶಿಕ್ಷಣ ಕೇಂದ್ರವಾಗಿದ್ದ ದಾವಣಗೆರೆ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರ ಕನಸಿನ ಕೂಸಾಗಿ 1997 ರ ಆ.15 ರಂದು ನೂತನ ಜಿಲ್ಲೆಯಾಯಿತು. ಹಿಂದೆ ರಾಜ್ಯದ ರಾಜಧಾನಿ ಆಗುವ ಎಲ್ಲಾ ಲಕ್ಷಣ ಹೊಂದಿದ್ದಂತಹ ದಾವಣಗೆರೆ ಜಿಲ್ಲಾ ಕೇಂದ್ರವಾದ ನಂತರ ಬಹಳ ಅಭಿವೃದ್ಧಿ ಆಗಲಿದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಕಳೆದ 22 ವರ್ಷದಲ್ಲಿನ ಜಿಲ್ಲಾ ಕೇಂದ್ರ ದಾವಣಗೆರೆ ಇತರೆ ಭಾಗದಲ್ಲಿ ಪರಿಸ್ಥಿತಿ ಅವಲೋಕಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ… ಎಂಬ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಖ್ಯಾತಿಯ ದಾವಣಗೆರೆ ಯಲ್ಲಿ ಕಾಟನ್, ಜಿನ್ನಿಂಗ್ ಮಿಲ್‌ಗಳು ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿದ್ದವು. ಜಾಗತೀಕರಣದ ಪ್ರಭಾವದಿಂದ ಜವಳಿ ಮಿಲ್ ಕಾಲಗರ್ಭ ಸೇರುತ್ತಿದ್ದಂತೆಯೇ ಜನರಿಂದ ಕೆಲಸವೂ ದೂರವಾಯಿತು. ಜನರ ಬದುಕಿನ ಅವಿಭಾಜ್ಯ ಅಂಗದಂತಿದ್ದ ಮಿಲ್‌ಗಳ ಸೈರನ್ ಮೊಳಗುತ್ತಿದ್ದ ದಾವಣಗೆರೆಯಲ್ಲಿ ಹುಡುಕಿದರೂ ಈಗ ಒಂದೇ ಒಂದು ಕೈಗಾರಿಕೆ ಇಲ್ಲ. ದುಡಿಯುವ ಶ್ರಮಿಕ ವರ್ಗದವರಿಗೆ ಉದ್ಯೋಗ ಒದಗಿಸಿ ಕೊಡುವಂತಹ ಕೈಗಾರಿಕೆ ಪ್ರಾರಂಭ ಎಂಬುದು ಮರೀಚಿಕೆಯಾಗಿದೆ. ಕಾಟನ್ ಮಿಲ್ ಗಳ ಇತಿಹಾಸ ಮರು ಸೃಷ್ಟಿಸುವ ಉಮೇದಿನೊಂದಿಗೆ ಪ್ರಾರಂಭವಾಗಿರುವ ಟೆಕ್ಸ್‌ಟೈಲ್ ಪಾರ್ಕ್ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ.
ದಾವಣಗೆರೆಯಲ್ಲಿನ ಹತ್ತಿ ಮಾರುಕಟ್ಟೆ ಸ್ಥಳಾಂತರದ ನಂತರ ಹತ್ತಿ ಬೆಳೆಯೇ ಕಾಣೆಯಾಗಿ ದಾವಣಗೆರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾರಂಭಿಸಿದ ನಂತರ ಈಗ ಮೆಕ್ಕೆಜೋಳ ಕಣಜ ಎಂದೇ ಗುರುತಿಸುವಂತಾಗಿದೆ. ಮೆಕ್ಕೆಜೋಳ ಬೆಳೆಯುವ ರೈತರಿಗೆ ಪೂರಕವಾಗಿ ಸಂಸ್ಕರಣಾ ಘಟಕ ಆರಂಭಿಸಬೇಕು ಎಂಬ ಕೂಗು ಈವರೆಗೆ ಕೂಗಾಗಿಯೇ ಉಳಿದಿದೆ ಹೊರತು ಸಂಸ್ಕರಣ ಘಟಕದ ಸುಳಿವೇ ಇಲ್ಲದಂತಾಗಿದೆ.
ಅತೀ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿರುವ ದಾವಣಗೆರೆ ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ನಾಲೆ ಅಭಿವೃದ್ಧಿ ಆಗಿಲ್ಲ. ಈವರೆಗೆ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ ಎಂಬುದು ವಾಸ್ತವ ಸತ್ಯ. ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಹರಿಸಲಾಗುವುದು ಎಂಬುದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಹು ದೊಡ್ಡ ವಾಗ್ಧಾನವಾಗುತ್ತದೆ. ಚುನಾವಣೆ ಮುಗಿಯುತ್ತಿದ್ದಂತೆ ಮಾತು ಮರೆ ಆಗುತ್ತದೆ. ನಗರಸಭೆಯಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಪಟ್ಟಿಯಲ್ಲಿ ದಾವಣಗೆರೆ ಆಯ್ಕೆಯಾಗಿ ಕೆಲಸ ನಡೆಯುತ್ತಿವೆಯಾದರೂ ಜನರ ಕಲ್ಪನೆ, ಕನಸಿನಂತೆ ಸ್ಮಾರ್ಟ್‌ಸಿಟಿ ಆಗಿಲ್ಲ. ಕಾಮಗಾರಿ ಇನ್ನೂ ನಡೆಯುತ್ತಲೇ ಇವೆ. ಸ್ಮಾರ್ಟ್‌ಸಿಟಿ ಆಗುವುದಾದರೂ ಯಾವಾಗ ಎಂಬ ಪ್ರಶ್ನೆ ಕಾಡುತ್ತಲೇ ಇದೆ.
ಕಾಟನ್ ಸಿಟಿಯಿಂದ ಆಕ್ಸ್‌ಫರ್ಡ್ ಸಿಟಿ ಆಗಿರುವ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗಬೇಕು ಎಂಬ ಅಪೇಕ್ಷೆ ಇದೆ. ಆದರೆ, ಈವರೆಗೆ ಕಾಲ ಕೂಡಿ ಬಂದಿಲ್ಲ. ಕೃಷಿ ಕಾಲೇಜು ಕಥೆಯೂ ಆದೇ ಆಗಿದೆ. ಹಿಂದೊಮ್ಮೆ ದಾವಣಗೆರೆ ಖ್ಯಾತಿಗೆ ತಕ್ಕಂತೆ ವಿಮಾನ ನಿಲ್ದಾಣ ಮಾಡಬೇಕು ಎಂದು ವಿಮಾನ ಮಟ್ಟಿ ಎಂದು ಜಾಗ ನಿಗದಿ ಮಾಡಲಾಗಿತ್ತು. ಕಾಲ ಬದಲಾದಂತೆ ವಿಮಾನ ನಿಲ್ದಾಣ ಗಗನಕುಸುಮವಾಗ ತೊಡಗಿದೆ.
ಜಿಲ್ಲೆಯ ಪೂರ್ವ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ 22 ಕೆರೆಗಳ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ಸಾಫಲ್ಯತೆ ಸಾಧಿಸಿಲ್ಲ. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಮಂಜೂರಾಗಿರುವ ಹಾಲು ಒಕ್ಕೂಟ(ದಾಮುಲ್) ಜಾಗದ ಕಾರಣಕ್ಕೆ ಪ್ರಾರಂಭವಾಗಿಲ್ಲ. ಒಟ್ಟಾರೆ ದಾವಣಗೆರೆ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಹಾಗಂತ ಏನೂ ಆಗಿಲ್ಲ ಎನ್ನುವಂತೆಯೂ ಇಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದಷ್ಟು ಅಭಿವೃದ್ಧಿ ಕಂಡು ಬರುತ್ತಿದೆ. ಜಲಸಿರಿ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ. ಹರಿಹರದ ಬಳಿ 6500 ಕೋಟಿ ರೂ. ವೆಚ್ಚದ ರಸಗೊಬ್ಬರ ಕಾರ್ಖಾನೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ.
ಹನಗವಾಡಿ ಬಳಿ 966 ಕೋಟಿ ವೆಚ್ಚದ 2ಜಿ ಎಥೆನಾಲ್ ಘಟಕ ಭೂಮಿ ಪೂಜೆ ಹಂತಕ್ಕೆ ಬಂದಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 21 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಭೂಮಿ ಪೂಜೆ ನಡೆದಿದೆ. ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ 10 ಕೋಟಿಯ ಎಸ್‌ಟಿಪಿಐ ಕಾರ್ಯಾರಂಭ ಕ್ಷಣ ಬಂದಿದೆ. ಜಗಳೂರು ತಾಲೂಕಿನ 45 ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ.
-ರಾ. ರವಿಬಾಬು