ಮುಂಬಯಿ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿಮಳೆಯ ಕಾರಣ, ಇಪ್ಪತ್ತು ಲಕ್ಷ ಕ್ಯೂಬಿಕ್ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುವ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪಳೂಣ್ ತಾಲೂಕಿನ ತಿವರೆ ಅಣೆಕಟ್ಟು ಬಿರುಕು ಬಿಟ್ಟು ಉಂಟಾಗಿರುವ ಭಾರೀ ಪ್ರವಾಹಕ್ಕೆ 23 ಮಂದಿ ಮೃತಪಟ್ಟಿರುವುದಾಗಿ ಭಯ ಪಡಲಾಗಿದೆ.
ಈ ತನಕ 11 ಶವಗಳು ಸಿಕ್ಕಿವೆ. ಅಣೆಕಟ್ಟಿನ ಕೆಳಭಾಗದಲ್ಲಿ ಭಾರೀ ಪ್ರವಾಹದ ಸಿxತಿ ತಲೆದೋರಿದೆ ಎಂದು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಅಣೆಕಟ್ಟಿನ ಕೆಳ ಭಾಗದಲ್ಲಿರುವ ಸುಮಾರು 7 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು 12 ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಕಳೆದ ವರ್ಷ ನವೆಂಬರ್ ನಲ್ಲೇ ಅಣೆಕಟ್ಟಿನಲ್ಲಿ ಬಿರುಕು ಕಂಡು ಬಂದಿದ್ದಾಗ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ದುರಸ್ತಿ ಕಾರ್ಯ ಈ ತನಕವೂ ನಡೆದಿಲ್ಲ; ಪರಿಣಾಮವಾಗಿ ಇಂದು ಅಣೆಕಟ್ಟಿನಿಂದ ಪ್ರವಾಹೋಪಾದಿಯಲ್ಲಿ ನೀರು ಹೊರ ಹರಿದು ಬರುತ್ತಿದೆ ಎಂದು ವರದಿಗಳು ತಿಳಿಸಿವೆ.
ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ 11 ಶವಗಳನ್ನು ಈ ತನಕ ಮೇಲೆತ್ತಲಾಗಿದೆ ಎಂದು ರತ್ನಾಗಿರಿಯ ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ವಿಶಾಲ್ ಗಾಯಕ್‌ವಾಡ್ ತಿಳಿಸಿದ್ದಾರೆ. ಅತ್ಯಧಿಕ ಸಂಖ್ಯೆಯ ಗ್ರಾಮಸ್ಥರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.