Advertisement

23 ದಿನಗಳ ಅತಂತ್ರ ಕಾಲ

09:15 AM Jul 25, 2019 | mahesh |

ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ, ಸರಕಾರಕ್ಕೇನೂ ಸದ್ಯಕ್ಕೆ ಅಪಾಯವಿಲ್ಲ ಎಂಬ ನಿರೀಕ್ಷೆ ಮೇರೆಗೆ ಅಮೆರಿಕಕ್ಕೆ ತೆರಳಿದ್ದರು ಸಿಎಂ ಕುಮಾರಸ್ವಾಮಿ. ಅಲ್ಲೊಂದು ದೇಗುಲಕ್ಕೆ ಶಂಕುಸ್ಥಾಪನೆಯನ್ನೂ ಮಾಡಿದ್ದ ಸಿಎಂ, ಇನ್ನೇನು ವಾಪಸ್‌ ಬರಲು ಕೆಲವೇ ದಿನಗಳು ಬಾಕಿ ಇವೆ ಎನ್ನುವಷ್ಟರಲ್ಲಿ ರಾಜ್ಯ
ಸರಕಾರಕ್ಕೆ ರಾಜೀನಾಮೆ ಸರಣಿ ಆರಂಭದ ಬರಸಿಡಿಲು ಹೊಡೆದಿತ್ತು. ಈ ರಾಜೀನಾಮೆ ಸರಣಿ ಆನಂದ್‌ ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ಅವರೊಂದಿಗೆ ಶುರುವಾಗಿ, ಎಂಟಿಬಿ ನಾಗರಾಜ್‌ ಮತ್ತು
ಡಾ| ಸುಧಾಕರ್‌ ಅವರೊಂದಿಗೆ ಅಂತ್ಯಕಂಡಿತು. ಒಂದೊಂದೇ ರಾಜೀನಾಮೆಗಳು ಸರಕಾರದ ಬುಡವನ್ನು ಅಲ್ಲಾಡಿಸುತ್ತಲೇ ಇದ್ದವು… ಈ 20 ದಿನ ಹೇಗೆ ಸರಕಾರದ ಒಂದೊಂದೇ ರೆಕ್ಕೆಗಳು ಕಟ್‌ ಆಗಿ, ಅಪಾಯಕ್ಕೆ ಸಿಲುಕಿತು ಎಂಬುದರ ಒಂದು ನೋಟ ಇದು.

Advertisement

ದೋಸ್ತಿ ಸರಕಾರಕ್ಕೆ ಸಂಕಟ
ರಾಜ್ಯದಲ್ಲಿ ಸಂಚಲನ ಶುರುವಾಗುವುದೇ ಇಲ್ಲಿಂದ. ಜು.1, ಸೋಮವಾರ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕರಾದ ಆನಂದ್‌ ಸಿಂಗ್‌ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್‌ ಕ್ಷೇತ್ರದ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡಿದರು. ಸ್ಪೀಕರ್‌ ಅವರಿಗೆ ರಾಜೀನಾಮೆ ನೀಡಿ, ಬಳಿಕ ರಾಜ್ಯಪಾಲರನ್ನೂ ಭೇಟಿ ಮಾಡಿ ಅವರಿಗೂ ಮಾಹಿತಿ ನೀಡಿದರು. ವಿಶೇಷವೆಂದರೆ, ಇವರಿಬ್ಬರ ರಾಜೀನಾಮೆ ಕಾಲದಲ್ಲಿ ಸಿಎಂ ಅಮೆರಿಕದಲ್ಲೇ ಇದ್ದರು.

ಜು.3ಬುಧವಾರ
ಇಂದು 4 ವಿಕೆಟ್‌ ಪತನ?
ಮಂಗಳವಾರ ಹೆಚ್ಚಿನ ಬೆಳವಣಿಗೆಗಳು ಆಗಲಿಲ್ಲ. ಆದರೂ, ಆನಂದ್‌ ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ರಾಜೀನಾಮೆ ಸುತ್ತಲೇ ಚರ್ಚೆಗಳು ನಡೆಯುತ್ತಿದ್ದವು. ಬುಧವಾರ ಮತ್ತೆ ನಾಲ್ವರು ಶಾಸಕರು ರಾಜೀನಾಮೆ ಕೊಡಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆಗ ಮಹೇಶ್‌ ಕುಮಟಳ್ಳಿ, ಭಿ.ನಾಗೇಂದ್ರ, ಬಿ.ಸಿ.ಪಾಟೀಲ್‌ ಮತ್ತು ಪ್ರತಾಪ್‌ ಗೌಡ ಪಾಟೀಲ್‌ ಹೆಸರುಗಳು ಕೇಳಿಬಂದಿದ್ದವು.

ಜು.4 ಗುರುವಾರ
ಅತೃಪ್ತಿ ಶಮನಕ್ಕೆ ಸಂಧಾನ ಸಭೆ
ಅಮೆರಿಕದಲ್ಲೇ ಇದ್ದ ಸಿಎಂ ಕುಮಾರಸ್ವಾಮಿ ಮತ್ತು ಬೆಂಗಳೂರಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮಾತುಕತೆ ನಡೆಸಿ ಅತೃಪ್ತರ ಮನವೊಲಿಕೆಗೆ ಮುಂದಾದರು. ಅತೃಪ್ತರು ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಯಾರೂ ಬರಲಿಲ್ಲ. ವಿಶೇಷವೆಂದರೆ, ಆಗ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ವಿಶ್ವನಾಥ್‌ ಅವರು, ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಜು.7 ರವಿವಾರ
ಸಮ್ಮಿಶ್ರ ಸರಕಾರಕ್ಕೆ ಸಾಮೂಹಿಕ ಆಘಾತ
ನಿಜವಾಗಿಯೂ ಸರ್ಕಾರಕ್ಕೆ ಬರಸಿಡಿಲು ಅಪ್ಪಳಿಸಿದ್ದು ಶನಿವಾರ, ದಿನಾಂಕ ಜು.6. ಕುಮಾರಸ್ವಾಮಿ ಇನ್ನೂ ಅಮೆರಿಕದಿಂದ ಬಂದಿರಲಿಲ್ಲ. ಆಗ, ಕಾಂಗ್ರೆಸ್‌ನ 9 ಮತ್ತು ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿದರು. ಮೊದಲಿಗೆ ಸ್ಪೀಕರ್‌ ಭೇಟಿಗೆ ಬಂದವರಿಗೆ ಅವರು ಸಿಗಲಿಲ್ಲ. ಸ್ಪೀಕರ್‌ ಕಚೇರಿಗೆ ತೆರ ಳಿ ರಾಜೀನಾಮೆ ಪತ್ರ ಕೊಟ್ಟ ಇವರೆಲ್ಲರೂ, ನೇರವಾಗಿ ರಾಜ್ಯಪಾಲರ ಭವನಕ್ಕೆ ತೆರಳಿ ಅವರಿಗೂ ರಾಜೀನಾಮೆಯ ಮಾಹಿತಿ ನೀಡಿದರು. ಅಂದು ರಾಜೀನಾಮೆ ನೀಡಿದವರು, ಎಚ್‌.ವಿಶ್ವನಾಥ್‌, ರಾಮಲಿಂಗಾರೆಡ್ಡಿ, ರಮೇಶ್‌ ಜಾರಕಿಹೊಳಿ, ಎಸ್‌.ಟಿ.ಸೋಮಶೇಖರ್‌, ಬಿ.ಸಿ.ಪಾಟೀಲ್‌, ಬೈರತಿ ಬಸವರಾಜ್‌, ಮಹೇಶ ಕುಮಟಳ್ಳಿ, ಪ್ರತಾಪ್‌ ಗೌಡ, ಶಿವರಾಮ್‌ ಹೆಬ್ಟಾರ್‌, ಗೋಪಾಲಯ್ಯ, ನಾರಾಯಣಗೌಡ ಮತ್ತು ಮುನಿರತ್ನ. ಅಂದು ತಡರಾತ್ರಿ ವೇಳೆಗೆ ಸಿಎಂ ಅಮೆರಿಕದಿಂದ ಓಡೋಡಿ ಬಂದರು.

Advertisement

ಜು.8 ಸೋಮವಾರ
ಎಲ್ಲೆಲ್ಲೂ ಒಡಕಿನ ಮಾತೇ…
ರಾಜೀನಾಮೆ ಕೊಟ್ಟವರ ಮನವೊಲಿಕೆಗೆ ಸರ್ಕಾರದ ಕಡೆಯಿಂದ ಪ್ರಯತ್ನಗಳಾದರೂ, ಬಗ್ಗಲಿಲ್ಲ. ರಾಜೀನಾಮೆ ಕೊಟ್ಟವರ ಪೈಕಿ ಬಹುತೇಕ ಮಂದಿ ಮುಂಬೈ ಸೇರಿದರು. ಸಿಎಂ ವಾಪಸ್‌ ಬಂದರಾದರೂ, ಸರಣಿ ಸಭೆಗಳನ್ನು ನಡೆಸಿದರು. ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು.

ಜು.9 ಮಂಗಳವಾರ
ಸರಕಾರ ಉಳಿವಿಗೆ ಕಾಮರಾಜ ಸೂತ್ರ
ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಲ್ಲಿ ತುರ್ತುಪರಿಸ್ಥಿತಿ ಅವಧಿ ಎಂದು ಘೋಷಣೆ ಮಾಡಿದ್ದರಿಂದ, ಇದನ್ನು ಮುಂದಿಟ್ಟುಕೊಂಡೇ ಹೆಡ್‌ ಲೈನ್‌ ನೀಡಲಾಯಿತು. ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಸೋಮವಾರವೇ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಮುಂಬೈನಲ್ಲಿದ್ದ ಅತೃಪ್ತರು ವಾಪಸ್‌ ಬರುವುದೇ ಇಲ್ಲ ಎಂದು ಪಟ್ಟು ಹಿಡಿದೇ ಇದ್ದರು. ಸೋಮವಾರದ ಪ್ರಮುಖ ವಿಚಾರ ಪಕ್ಷೇತರರಾದ ನಾಗೈಶ್‌ ಮತ್ತು ಶಂಕರ್‌ ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು, ರಾಜ್ಯಪಾಲರ ಭೇಟಿ ಮಾಡಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಜತೆಗೆ ವಾಪಸ್‌ ಬನ್ನಿ ಮಂತ್ರಿ ಮಾಡ್ತೇವೆ ಎಂದು ಅತೃಪ್ತರಿಗೆ ದೋಸ್ತಿಗಳು ಓಪನ್‌ ಆಗಿ ಆಫರ್‌ ಅನ್ನೂ ಕೊಟ್ಟರು. ಅಂದು ಜೆಡಿಎಸ್‌ ಶಾಸಕರು ರೆಸಾರ್ಟ್‌ ಗೆ ತೆರಳಿದರು.

ಜು.11 ಗುರುವಾರ
ಪವಾಡ ನಡೆದರೆ ಸರಕಾರ !
ಬುಧವಾರದ ದೊಡ್ಡ ಬೆಳವಣಿಗೆ ಡಾ.ಸುಧಾಕರ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಅವರ ರಾಜೀನಾಮೆ. ಆದರೆ, ಅಂದು ಸುಧಾಕರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಎಳೆದಾಡಿದ್ದರಿಂದ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಯಿತು. ವಿಧಾನಸೌಧಕ್ಕೊಂದು ಕಪ್ಪುಚುಕ್ಕೆ ಇಟ್ಟಂತಾಯಿತು. ಇತ್ತ ಈ ಬೆಳವಣಿಗೆಯಾಗುತ್ತಿದ್ದಂತೆ ಮುಂಬೈನಲ್ಲಿದ್ದ ಅತೃಪ್ತರು ಸುಪ್ರೀಂಕೋರ್ಟ್‌ ಮೊರೆ ಹೋದರು. ಅಂದೇ ಮುಂಬೈಗೆ ಅತೃಪ್ತರ ಮನವೊಲಿಕೆಗೆ ತೆರಳಿದ್ದ ಸಚಿವರಾದ ಡಿ.ಕೆ.ಶಿವಕುಮಾರ್‌, ಡಿ.ಟಿ.ದೇವೇಗೌಡ ಮತ್ತು ಶಾಸಕ ಶಿವಲಿಂಗೇಗೌಡರು ದೊಡ್ಡ ಸರ್ಕಸ್‌ ಅನ್ನೇ ಮಾಡಿದರು. ಅಲ್ಲಿ ಇವರಿಗೆ ಶಾಸಕರ ಭೇಟಿಗೂ ಅವಕಾಶ ಕೊಡದೇ ಬರಿಗೈನಲ್ಲಿ ವಾಪಸ್‌ ಕಳುಹಿಸಿದರು.

ಜು.12 ಶುಕ್ರವಾರ
ಅತೃಪ್ತರ ಮೇಲೆ ವಿಪ್‌ ಅಸ್ತ್ರ
ಮುಂಬೈನಿಂದ ಓಡಿ ಬಂದರು, ಮತ್ತೆ ರಾಜೀನಾಮೆ ಸಲ್ಲಿಸಿದರು, ಹಾಗೆ ಓಡಿ ಹೋದರು. ಸುಧಾಕರ್‌ ಅವರ ರಾಜೀನಾಮೆ ವಿಚಾರದಲ್ಲಿ ಎಳೆದಾಟದ ಹೈಡ್ರಾಮಾದಿಂದಾಗಿ ಅತೃಪ್ತರು ಸುಪ್ರೀಂಗೆ ಹೋಗಿ ರಕ್ಷಣೆಯನ್ನೂ ತಂದರು. ಜತೆಗೆ ಸಂಜೆ 6 ಗಂಟೆಯೊಳಗೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಲು ಅವಕಾಶ ಕೊಟ್ಟಿದ್ದರಿಂದ, ಮತ್ತೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಂದ ಅತೃಪ್ತ ಶಾಸಕರು, ರಾಜೀನಾಮೆ ಕೊಟ್ಟು ಓಡಿ ಹೋದರು. ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನವೂ ಆರಂಭವಾಗಿ, ಅತೃಪ್ತರೂ ಸೇರಿದಂತೆ ಎಲ್ಲರಿಗೂ ವಿಪ್‌ ಜಾರಿಗೊಳಿಸಲಾಯಿತು.

ಜು.13 ಶನಿವಾರ
ಕೊನೆಯ ಆಟ ಈಗ ಆರಂಭ!
ಶುಕ್ರವಾರದ ದೊಡ್ಡ ಬೆಳವಣಿಗೆ ಮುಖ್ಯಮಂತ್ರಿ ಕುಮಾರ ‌ಸ್ವಾಮಿ ಅವರೇ, ಸದನದಲ್ಲಿ ವಿಶ್ವಾಸಮತ ಮಂಡನೆ ಮಾಡುವುದಾಗಿ ಹೇಳಿದ್ದು. ಒಂದು ರೀತಿಯಲ್ಲಿ ಎಲ್ಲರಿಗೂ ಶಾಕ್‌ ಎಂದೆನಿಸಿದರೆ, ಹೇಗೆ ಮಾಡ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು. ಅತೃಪ್ತರ ವಿರುದ್ಧ ವಿಪ್‌ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್‌ ಇವರಿಗೆ ಸದನಕ್ಕೆ ಹಾಜರಾಗಿ ಎಂದು ಒತ್ತಡ ಹೇರಬೇಕಿಲ್ಲ ಎಂದು ಹೇಳಿತು. ಜತೆಗೆ ಅತೃಪ್ತ ಶಾಸಕರ ರಾಜೀನಾಮೆ, ಅನರ್ಹತೆ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದೂ ಕೋರ್ಟ್‌ ಸ್ಪೀಕರ್‌ಗೆ ಹೇಳಿತು. ಹೀಗಾಗಿ ಅತೃಪ್ತ ಶಾಸಕರು ಬರಲೇ ಇಲ್ಲ.

ಜು.14 ರವಿವಾರ
ಸಮ್ಮಿಶ್ರಕ್ಕೆ ಅಲ್ಪ ಯಶಸ್ಸು
ಎಂ.ಟಿ.ಬಿ.ನಾಗರಾಜ್‌ ಮನವೊಲಿಕೆಗಾಗಿ ಬೆಳಗ್ಗೆಯಿಂದಲೇ ಡಿ.ಕೆ.ಶಿವಕುಮಾರ್‌ ಪ್ರಯತ್ನಿಸಿದರು. ನಂತರ, ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ, ದಿನವೀಡಿ ಮನವೊಲಿಕೆಯ ಪ್ರಹಸನಗಳು ನಡೆದೆವು. ಜತೆಗೆ ಪತ್ರಿಕಾಗೋಷ್ಠಿಯನ್ನೂ ನಡೆಸಿ ಕಾಂಗ್ರೆಸ್‌ ನಲ್ಲೇ ಉಳಿಯುವುದಾಗಿ ಘೋಷಿಸಿದರು. ಆದರೆ, ರಾತ್ರಿ ವೇಳೆಗೆ ಉಲ್ಟಾ ಹೊಡೆದ ಎಂಟಿಬಿ ನಾಗರಾಜ್‌, ಸುಧಾಕರ್‌ ರಾಜೀನಾಮೆ ವಾಪಸ್‌ ಪಡೆದರೆ ನೋಡೋಣ ಎಂದರು.

ಜು.15 ಸೋಮವಾರ
ಎಲ್ಲರಲ್ಲೂ ಢವಢವ
ಕಾಂಗ್ರೆಸ್‌ನಲ್ಲೇ ಉಳಿಯುವುದಾಗಿ ಹೇಳಿದ್ದ ಎಂಟಿಬಿ ನಾಗರಾಜ್‌, ಮನ ಬದಲಿಸಿ ಮುಂಬೈಗೆ ಹಾರಿಬಿಟ್ಟರು. ಇವರ ಜತೆಗೆ ಆರ್‌.ಅಶೋಕ್‌ ಕಾಣಿಸಿಕೊಂಡರು. ಹೀಗಾಗಿ ಎಂಟಿಬಿ ಜತೆಗೆ ಸುಧಾಕರ್‌ ಕೂಡ ವಾಪಸ್‌ ಬರುತ್ತಾರೆ ಎಂಬ ಮೈತ್ರಿ ಸರ್ಕಾರದ ನಂಬಿಕೆ ಹುಸಿಯಾಯಿತು. ಸ್ವತಃ ಕುಮಾರಸ್ವಾಮಿ ಅವರೇ ಸಂಧಾನಕ್ಕಿ ಳಿ ದು ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಮನವೊಲಿಕೆ ಮಾಡಿದರು. ಇವರಿಗೆ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಸಾಥ್‌ ನೀಡಿದರು.

ಜು.16 ಮಂಗಳವಾರ
ಯಾರಿಗೆ ಗುರುಬಲ?
ಸೋಮವಾರದ ಪ್ರಮುಖ ಬೆಳವಣಿಗೆ ವಿಶ್ವಾಸಮತ ಪರೀಕ್ಷೆಗೆ ಸಮಯ ನಿಗದಿಯಾಗಿದ್ದುದು. ಜೆಡಿಎಸ್‌ ಜತೆಗೆ ಬಿಜೆಪಿ, ಕಾಂಗ್ರೆಸ್‌ ಸದಸ್ಯರೂ ರೆಸಾರ್ಟ್‌ ಸೇರಿಕೊಂಡರು. ಅಂದು ಮತ್ತೂಂದು ಬೆಳವಣಿಗೆಯೂ ಆಯಿತು. ಆಗಲೇ ರಾಜೀನಾಮೆ ನೀಡಿದ್ದ ರೋಷನ್‌ ಬೇಗ್‌ರನ್ನು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡರು. ಈ ಬಗ್ಗೆ ಸಿಎಂ ಕುಮಾರ ಸ್ವಾಮಿ ಯವರೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದರು.

ಜು.17 ಬುಧವಾರ
ಯಾರಿಗೆ ಗ್ರಹಣ ಗಂಡಾಂತರ?
ಪ್ರಮುಖವಾಗಿ ಯಾವುದೇ ಬೆಳವಣಿಗೆ ನಡೆಯ ಲಿಲ್ಲ. ಹೀಗಾಗಿ ರೆಸಾರ್ಟ್‌ ನಲ್ಲಿದ್ದ ಶಾಸಕರು ವಿಶ್ರಾಂತಿಗೆ ಹೋದರು. ಮಂಗಳವಾರ ಸುಪ್ರೀಂ ಕೋರ್ಟ್‌ ನಲ್ಲಿ ಬಿಸಿಬಿಸಿ ವಾದ-ಪ್ರತಿವಾದ ನಡೆಯಿತು. ಅನರ್ಹತೆ ವಿಚಾರವಾಗಿ ಅತೃಪ್ತರ ಪರವಾಗಿ ಮುಕುಲ್‌ ರೋಹಟಗಿ ಮತ್ತು ಕಾಂಗ್ರೆಸ್‌ ಪರವಾಗಿ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಸಿಎಂ ಕುಮಾರಸ್ವಾಮಿ ಪರವಾಗಿ ರಾಜೀವ್‌ ಧವನ್‌ ವಾದ ಮಂಡಿಸಿದರು.

ಜು.18 ಗುರುವಾರ
ಯಾರ ವಿಶ್ವಾಸಕ್ಕೆ ಆಯುಸ್ಸು?
ಬುಧವಾರ ಸುಪ್ರೀಂಕೋರ್ಟ್‌ ಅತೃಪ್ತರಿಗೆ ನಿರಾಳ ನೀಡಿತು. ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರಬಾರದು ಎಂದು ಸೂಚಿಸಿತು. ಇದು ಸರ್ಕಾರಕ್ಕೆ ಟೆನ್ಶನ್‌ ತಂದುಕೊಟ್ಟರೆ, ಅತೃಪ್ತರು ನಿರಾಳತೆ ಅನುಭವಿಸಿದರು.

ಜು.19 ಶುಕ್ರವಾರ
ವಿಶ್ವಾಸಮತಕ್ಕೆ ರಾಜ್ಯಪಾಲರ ಸೂಚನೆ
ಕುಮಾರಸ್ವಾಮಿ ಸರ್ಕಾರ ನಿಗದಿಯಾಗಿದ್ದಂತೆ ವಿಶ್ವಾಸಮತ ಯಾಚನೆ ಮಾಡಬೇಕಾಗಿತ್ತು. ಆದರೆ, ಸಿಎಂ ವಿಶ್ವಾಸಮತಯಾಚಿಸಿ ಭಾಷಣ ಆರಂಭಿಸಿದರು. ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಕ್ರಿಯಾಲೋಪದ ಬಗ್ಗೆ ಪ್ರಸ್ತಾಪಿಸಿ ನಮ್ಮ ಅಧಿಕಾರ ಮೊಟಕಾಗಿದೆ ಎಂದರು. ಅಂದು ವಿಶ್ವಾಸಮತ ವಾಗದ ಕಾರಣ, ಬಿಜೆಪಿ ರಾಜ್ಯಪಾಲರಿಗೆ ದೂರು ಕೊಟ್ಟಿತು. ರಾಜ್ಯಪಾಲರು ಶುಕ್ರವಾರ 1.30ರ ಒಳಗೆ ವಿಶ್ವಾಸಮತಕ್ಕೆ ಹಾಕುವಂತೆ ಸೂಚಿಸಿದರು. ಜತೆಗೆ ಅಂದೇ ಸ್ಪೀಕರ್‌ ಅವರಿಗೂ ದಿನದಂತ್ಯಕ್ಕೆ ಪ್ರಕ್ರಿಯೆ ಮುಗಿಸುವಂತೆ ಸಂದೇಶ ನೀಡಿದ್ದರು.

ಜು.20 ಶನಿವಾರ
ಸೋಮವಾರ ವಿಶ್ವಾಸದ ಆಟ
ರಾಜ್ಯಪಾಲರು ಮೊದಲು ನೀಡಿದ್ದ 1.30ರ ಗಡುವನ್ನೂ ಸಿಎಂ ಮೀರಿದರು. ದಿನದಂತ್ಯಕ್ಕೆ ಮುಗಿಸುವಂತೆ ಮತ್ತೆ ಸಿಎಂಗೆ ನಿರ್ದೇಶನ ನೀಡಿದರು. ಇದೂ ಪಾಲನೆಯಾಗಲಿಲ್ಲ. ಹೀಗಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿ, ರಾಷ್ಟ್ರಪತಿ ಆಳ್ವಿಕೆಯ ಸದ್ದೂ ಕೇಳಿತು.

ಜು.23 ಮಂಗಳವಾರ
ವಿಶ್ವಾಸಮತ ಮರೀಚಿಕೆ
ರಾತ್ರಿ 11.45ರ ವರೆಗೂ ಸದನ ನಡೆದರೂ ಏನೂ ಆಗಲಿಲ್ಲ. ಮಂಗಳವಾರ ಮುಗಿಸಿಯೇ ಮುಗಿಸುತ್ತೇವೆ ಎಂದು ಸರ್ಕಾರ ಹೇಳಿದ್ದರಿಂದ ಸ್ಪೀಕರ್‌ ಅನಿವಾರ್ಯವಾಗಿ ಮುಂದೂಡಿದರು. ಆಡಳಿತ ಪಕ್ಷದ ಶಾಸಕರೇ ಬಹಳಷ್ಟು ಬಾರಿ ಪ್ರತಿಭಟನೆ ನಡೆಸಿದರು. ಇದರ ನಡುವೆಯೇ ಸ್ಪೀಕರ್‌, ಕ್ರಿಯಾ ಲೋಪದ ಬಗ್ಗೆ ರೂಲಿಂಗ್‌ ಕೊಟ್ಟರು.

ಜು.22 ಸೋಮವಾರ
ವಿಶ್ವಾಸದ ಕಸರತ್ತು
ಶುಕ್ರವಾರ ವಿಶ್ವಾಸಮತವಾಗದ ಕಾರಣ, ಸಿಎಂ ಮತ್ತು ಸಿದ್ದರಾಮಯ್ಯ ಸೋಮವಾರ ಸಂಜೆಯೊಳಗೆ ಇಡೀ ಪ್ರಕ್ರಿಯೆ ಮುಗಿಸಿಕೊಡುವ ಬಗ್ಗೆ ಭರವಸೆ ನೀಡಿದರು. ಇದರ ನಡುವೆಯೇ ಅತೃಪ್ತರು ವಾಪಸ್‌ ಬರುತ್ತಾರೆ ಎಂದೇ ಸರ್ಕಾರ ನಿರೀಕ್ಷೆ ಇರಿಸಿಕೊಂಡಿತ್ತು. ಅತ್ತ, ಮುಂಬೈನಲ್ಲಿದ್ದ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ವಾಪಸ್‌ ಬರಲ್ಲ. ಸರ್ಕಾರ ಬಿದ್ದ ಮೇಲೆಯೇ ಬರೋದು ಎಂದು ಘೋಷಣೆ ಮಾಡಿದರು.

ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next