ನವದೆಹಲಿ: ಕೋವಿಡ್-19 ಮಹಾಮಾರಿ ಸೋಂಕಿಗೆ ತೆಲಂಗಾಣದಲ್ಲಿ 23 ದಿನಗಳ ಮಗುವೊಂದು ತುತ್ತಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 348 ಕ್ಕೆ ತಲುಪಿದೆ.
ಮಂಗಳವಾರ ವರದಿಯಾದ 40 ಹೊಸ ಕೋವಿಡ್ -19 ಪ್ರಕರಣಗಳಲ್ಲಿ 23 ದಿನಗಳ ಮಗು ಸೇರಿದ್ದು ಒಟ್ಟಾರೆ ಬಲಿಯಾದವರ ಸಂಖ್ಯೆ 11 ಕ್ಕೆ ಏರಿದೆ. ಗಮನಾರ್ಹ ಸಂಗತಿಯೆಂದರೆ ಸೋಂಕಿತರಲ್ಲಿ 45 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯದಲ್ಲಿ ವೈರಸ್ ಸಮುದಾಯಿಕವಾಗಿ ಹರಡಿಲ್ಲ. ಇದಕ್ಕೆ ಯಾವುದೇ ಯಾವುದೇ ಪುರಾವೆಗಳಿಲ್ಲ. ದೆಹಲಿ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡವರನ್ನು ಅವರೊಂದಿಗೆ ಸಂಪರ್ಕಿತರಾದವರನ್ನು ಶೀಘ್ರವಾಗಿ ಪತ್ತೆಹಚ್ಚಲಾಗುತ್ತದೆ. ಪಾಸಿಟಿವ್ ಪ್ರಕರಣಗಳು ವರದಿಯಾದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸೂಚನೆಯ ಮೇರೆಗೆ ಕ್ರೀಡಾಂಗಣವೊಂದನ್ನು 1,500 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಲ್ಲಿ ಐಸಿಯು ಮತ್ತು ವೆಂಟಿಲೇಟರ್ ಗಳ ಸಮರ್ಪಕ ವ್ಯವಸ್ಥೆ ಮಾಡಲಾಗುತ್ತಿದೆ. ಮಾತ್ರವಲ್ಲದೆ ರಾಜ್ಯದ ಎಲ್ಲಾ 22 ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಕೋವಿಡ್ 19 ಚಿಕಿತ್ಸೆಗಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೋವಿಡ್ -19 ಪರಿಸ್ಥಿತಿಯನ್ನು ತಹಬದಿಗೆ ತರಲು ರಾಜ್ಯ ಸರ್ಕಾರ WHO ತಂಡದೊಂದಿಗೆ ಚರ್ಚಿಸಿದ್ದು, ಸಮರ್ಪಕ ವ್ಯವಸ್ಥೆ ಮಾಡಲಾಗುತ್ತಿದೆ. ಭಾರತದಂತಹ ದೇಶದಲ್ಲಿ ವೈರಸ್ ಅನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಏಪ್ರಿಲ್ 14 ರ ನಂತರವೂ ಲಾಕ್‌ಡೌನ್ ವಿಸ್ತರಿಸಲು ಮುಖ್ಯಮಂತ್ರಿ ಒಲವು ತೋರಿದ್ದಾರೆ ಎಂದು ಇದೇ ವೇಳೆ ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.