ವಿಜಯಪುರ: ಕೇವಲ ಶೇ.2 ರಷ್ಟಿರುವ ಸಮುದಾಯದ ವ್ಯಕ್ತಿಗಳು ಮುಖ್ಯಮಂತ್ರಿ ಆಗಬಹುದಾದರೆ ಶೇ.23 ರಷ್ಟು ಜನಸಂಖ್ಯೆ ಇರುವ ದಲಿತರು ರಾಜ್ಯದ ಮುಖ್ಯಮಂತ್ರಿ ಆದಲ್ಲಿ ತಪ್ಪೇನು, ಆದರೆ ಈಗ ಮಾತನಾಡಿ ಪ್ರಯೋಜನವಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಸಮುದಾಯದವರು ಸಿಎಂ ಆಗಬೇಕು. ಅದು ಯಾವುದೇ ಪಕ್ಷದಿಂದಾದರೂ ಆಗಲಿ ಎಂದರು.
ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶಕುಮಾರ ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪಿಸಿರುವುದು ಉತ್ತಮವಾದುದೇ. ಆದರೆ ಅಧಿಕಾರಕ್ಕೆ ಬರುವ ಪಕ್ಷದ ನಾಯಕರು, ಶಾಸಕರು ತೆಗೆದುಕೊಳ್ಳುವ ತೀರ್ಮಾನವೂ ಇಲ್ಲಿ ಮುಖ್ಯ. ಹೀಗಾಗಿ ಈಗ ಸುಮ್ಮನೇ ಅಂಥ ವಿಷಯಗಳ ಬಗ್ಗೆ ಮಾತನಾಡುವುದರಿಂದ ಏನು ಪ್ರಯೋಜನ ಎಂದರು.
ಶೇ.23 ರಷ್ಟಿರುವ ಸಮುದಾಯದವರು ಮುಖ್ಯಮಂತ್ರಿ ಆಗಬಾರದಾ. ಮಾತನಾಡೋಕೆ ಇಂಥ ಲೆಕ್ಕಾಚಾರ ಚೆನ್ನಾಗಿಯೇ ಇರುತ್ತದೆ. ಆದರೆ ವಾಸ್ತವಾಂಶಗಳು ಬೇರೆಯೇ ಇರುತ್ತವೆ. ದಲಿತ ಮುಖ್ಯಮಂತ್ರಿ ವಿಷಯದಲ್ಲಿ ಬೆಂಬಲವಿದೆ. ಇಂಥ ಅವಕಾಶ ಸಿಕ್ಕಲ್ಲಿ ದಲಿತ ಸಮುದಾಯಕ್ಕಿಂತ ನಾನು ಖುಷಿ ಪಡುತ್ತೇನೆ ಹೇಳಿರುವುದು ನಮಗೂ ಖುಷಿ ತಂದಿದೆ ಎಂದರು.