Advertisement

23 ಕೋ.ರೂ. ಪ್ರಸ್ತಾವ: ಅನುದಾನ ಬಿಡುಗಡೆಗೆ ಕೋವಿಡ್‌ ತೊಡಕು

12:04 AM Jan 21, 2021 | Team Udayavani |

ಕಡಬ: ಕುಮಾರಧಾರಾ ಹೊಳೆಗೆ ಕಡಬ ಗ್ರಾಮದ ಪಿಜಕಳದ ಪಾಲೋಳಿಯಲ್ಲಿ  ಸರ್ವಋತು ಸೇತುವೆ ನಿರ್ಮಿಸುವ ಹೊಣೆಯನ್ನು ಸರಕಾರವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್‌)ಕ್ಕೆ ವಹಿಸಿದೆ. ನೂತನ ಸೇತುವೆ ನಿರ್ಮಾಣಕ್ಕೆ  23 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೋವಿಡ್‌ ಕಾರಣದಿಂದಾಗಿ ಸರಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ತಡೆಯಾಗಿದ್ದು, ಶೀಘ್ರ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ನೂತನ ಸಚಿವ, ಕ್ಷೇತ್ರದ ಶಾಸಕ ಎಸ್‌.ಅಂಗಾರ ತಿಳಿಸಿದ್ದಾರೆ.

Advertisement

ಸ್ಥಳೀಯರ ನಿರಂತರ ಒತ್ತಡದ ಪರಿಣಾಮವಾಗಿ 2 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ  ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಿದ್ದರು. ಆದರೆ ಅನುದಾನದ ಕೊರತೆಯ ಕಾರಣದಿಂದಾಗಿ ಆ ಪ್ರಸ್ತಾವನೆ ತಿರಸ್ಕೃತವಾಗಿತ್ತು. ಆ ಬಳಿಕ ಕೆಆರ್‌ಡಿಸಿಎಲ್‌ ಮೂಲಕ ಸೇತುವೆ ನಿರ್ಮಾಣಕ್ಕೆ ಅಗತ್ಯವಾಗಿರುವ ಪ್ರಾಥಮಿಕ ಪ್ರಕ್ರಿಯೆಗಳನ್ನು ನಡೆಸಲಾಗಿದೆ.

ಹೆಚ್ಚಿದ ಭರವಸೆ :

ಶಾಸಕರಾಗಿದ್ದ ಎಸ್‌.ಅಂಗಾರ ಅವರ ನೇತೃತ್ವದಲ್ಲಿ  ಬೆಂಗಳೂರಿನಲ್ಲಿ  ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿದ್ದ ಕಡಬದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಮುಂದಾಳುತ್ವದ ನಿಯೋಗವು ಪಾಲೋಳಿ ಸೇತುವೆ ನಿರ್ಮಾಣಕ್ಕೆ  ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿ ಒತ್ತಡ ಹೇರಿತ್ತು. ಬಳಿಕ  ಸಚಿವರು ಪಾಲೋಳಿ ಸೇತುವೆಯೂ ಸೇರಿದಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಒಟ್ಟು 5 ಸೇತುವೆಗಳ ನಿರ್ಮಾಣಕ್ಕೆ ಅನುದಾನ ಪ್ರಕಟಿಸಿದ್ದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿನ ವ್ಯಾಪ್ತಿಗೆ ಎಡಮಂಗಲ, ಎಣ್ಮೂರು, ದೋಳ್ಪಾಡಿ, ಚಾರ್ವಾಕ ಹಾಗೂ ಕಾಣಿಯೂರು ಗ್ರಾಮಗಳು ಸೇರ್ಪಡೆಯಾಗಿದ್ದು, ತಾಲೂಕು ಕೇಂದ್ರ ಕಡಬವನ್ನು ತಲುಪಲು ಪಾಲೋಳಿ ಮಾರ್ಗ ಅತ್ಯಂತ ಹತ್ತಿರದ ದಾರಿಯಾಗಿದೆ. ಆದ್ದರಿಂದ ಇಲ್ಲಿ ಕುಮಾರಧಾರಾ ನದಿಗೆ ಶಾಶ್ವತ ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ  ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಅಂಗಾರ ಪ್ರಸ್ತುತ ಸಚಿವರಾಗಿರುವುದರಿಂದ ನಮ್ಮ ಬೇಡಿಕೆ ಈಡೇರುವ ಭರವಸೆ ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯ ಮುಂದಾಳು ಶ್ಯಾಮ್‌ ಥಾಮಸ್‌.

ತಾತ್ಕಾಲಿಕ ಸೇತುವೆ ನಿರ್ಮಾಣ :

Advertisement

ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. 6 ವರ್ಷಗಳ ಹಿಂದೆ ದಾನಿಗಳ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಸುಮಾರು 120 ಮೀ. ಉದ್ದದ 10 ಮೀ. ಆಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುವ  ಸೇತುವೆಯನ್ನು  ಪ್ರತೀ ಬೇಸಗೆಯಲ್ಲಿ  ಊರವರು ಪುನರ್‌ ನಿರ್ಮಾಣ ಮಾಡಿ ಉಪಯೋಗಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಸೇತುವೆಯ ಪುನರ್‌ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿಲ್ಲ.

ಪಿಜಕಳದ ಪಾಲೋಳಿಯಲ್ಲಿ  ಕುಮಾರಧಾರಾ ನದಿಗೆ ಸರ್ವಋತು ಸೇತುವೆ ನಿರ್ಮಿಸಲು 23 ಕೋಟಿ. ರೂ.ಗಳ ಪ್ರಸ್ತಾವನೆ ಸರಕಾರದ ಮುಂದಿದೆ. ಸೇತುವೆ ನಿರ್ಮಾಣದ ಹೊಣೆಯನ್ನು ಕೆಆರ್‌ಡಿಸಿಎಲ್‌ ವಹಿಸಿಕೊಂಡಿದೆ. ಆರ್ಥಿಕ ಇಲಾಖೆಯ ಹಸುರು ನಿಶಾನೆ ಸಿಕ್ಕಿದ ಕೂಡಲೇ ಸರಕಾರದ ಮಟ್ಟದಲ್ಲಿ ವಿವಿಧ ಪ್ರಕ್ರಿಯೆಗಳು ನಡೆದು ಕಾಮಗಾರಿ ಆರಂಭಿಸುವುದಕ್ಕಾಗಿ ಟೆಂಡರ್‌ ಕರೆಯಲಾಗುವುದು.-ಮಂಜೇಶ್‌ ಎಚ್‌.ಎಲ್‌., ಉಪ ವಿಭಾಗೀಯ ಎಂಜಿನಿಯರ್‌, ಕೆಆರ್‌ಡಿಸಿಎಲ್‌, ಹಾಸನ

 

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next