Advertisement

23.55 ಕೋ.ರೂ. ಪರಿಹಾರ ಜಮೆ

09:40 AM May 03, 2022 | Team Udayavani |

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2020-21ನೇ ಸಾಲಿನಲ್ಲಿ 23.55 ಕೋ.ರೂ.ಬೆಳೆ ನಷ್ಟ ವಿಮೆ ಪರಿಹಾರ ಮೊತ್ತ 5,675 ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ.

Advertisement

ತಾಂತ್ರಿಕ ಕಾರಣದಿಂದ ಕೆಲವು ಅರ್ಜಿಗಳಿಗೆ ಪರಿಹಾರ ಮೊತ್ತ ಪಾವತಿ ಆಗದಿರುವುದನ್ನು ಹೊರತುಪಡಿಸಿ ಉಳಿದಂತೆ ಹೆಚ್ಚಿನ ಅರ್ಜಿದಾರರಿಗೆ ವಿಮೆ ಪರಿಹಾರ ಮೊತ್ತವು ದೊರೆತಿದೆ.

ಅರ್ಜಿಗೆ ಆವಶ್ಯಕ ದಾಖಲೆ

ಹವಾಮಾನ ಆಧಾರಿತ ವಿಮೆ ಪರಿಹಾರ ಮೊತ್ತಕ್ಕೆ ಅರ್ಜಿ ಸಲ್ಲಿಸಲು ಬೆಳೆ ನಮೂದು ಇರುವ ಪ್ರಸಕ್ತ ಸಾಲಿನ ಆರ್‌ಟಿಸಿ, ಬ್ಯಾಂಕ್‌ ಖಾತೆಯ ಪಾಸ್‌ ಪುಸ್ತಕ, ಆಧಾರ್‌ಕಾರ್ಡ್‌, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ರೈತರು ಅರ್ಜಿ ಸಲ್ಲಿಸಬೇಕು. ಸೊಸೈಟಿ ಮೂಲಕ ನಿಗದಿತ ಸಮಯದೊಳಗೆ ದಾಖಲೆ ಸಲ್ಲಿಸಿ, ವಿಮೆ ಕಂತು ಕಟ್ಟಿ ನೋಂದಣಿ ಮಾಡಿಕೊಳ್ಳಬೇಕು.

ರಾಜ್ಯ ನೈಸರ್ಗಿಕ ಉಸ್ತುವಾರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಾಹಿತಿ, ಅಧಿಕ ಮಳೆ, ಕಡಿಮೆ ಮಳೆಯಿಂದ ಬೆಳೆ ಮೇಲಾಗುವ ಪ್ರತಿಕೂಲ ಅಂಶಗಳನ್ನು ಅಂದಾಜಿಸಿ ಬೆಳೆ ವಿಮೆ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆಲಿಕಲ್ಲು ಮಳೆ, ಭೂಕುಸಿತ, ಮುಳುಗಡೆ ಸಂದರ್ಭ ಬೆಳೆ ನಷ್ಟವಾದರೆ ಸಂಬಂಧಿತ ಹಣಕಾಸು ಸಂಸ್ಥೆ, ವಿಮೆ ಕಚೇರಿಗೆ ಹಾನಿ ಪ್ರದೇಶದ ವ್ಯಾಪ್ತಿ ಕುರಿತು ಮಾಹಿತಿ ಸಲ್ಲಿಸುವುದು ಕಡ್ಡಾಯ.

Advertisement

21,907 ಅರ್ಜಿ ಸಲ್ಲಿಕೆ

2021-22ನೇ ಸಾಲಿನಲ್ಲಿ ತಾಲೂಕಿನಲ್ಲಿ 21,907 ಅರ್ಜಿ ಸಲ್ಲಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಆದರೆ ದೊರೆಯುವ ಪರಿಹಾರ ಮೊತ್ತ ಇಳಿಮುಖವಾಗುತ್ತಿದೆ. ಎರಡು ವರ್ಷಗಳ ಹಿಂದೆ ಒಂದು ಲಕ್ಷ ರೂ. ದೊರೆತವರಿಗೆ ಕಳೆದ ವರ್ಷ ಅಷ್ಟೇ ಪ್ರಮಾಣದ ನಷ್ಟಕ್ಕೆ 50ರಿಂದ 60 ಸಾವಿರ ರೂ. ಮಾತ್ರ ಸಿಕ್ಕಿದೆ ಎನ್ನುವುದು ಬೆಳೆಗಾರರ ಅಭಿಪ್ರಾಯ. ಫಸಲು ಆಧಾರಿತವಾಗಿ ನಷ್ಟ ಮೊತ್ತ ನಿರ್ಧಾರ ಆಗುವ ಕಾರಣ ನೀಡುವ ಪರಿಹಾರ ಮೊತ್ತದಲ್ಲಿಯೂ ವ್ಯತ್ಯಾಸ ಆಗಿರಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

 789 ಮಂದಿಗೆ ಸಿಕ್ಕಿಲ್ಲ

ಪರಿಹಾರ ನಾನಾ ಕಾರಣಗಳಿಂದ ತಾಲೂಕಿನ 789 ಮಂದಿಗೆ 2020-21ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾಗಿಲ್ಲ. ಬೆಳೆ ವಿಮೆ ಮಾಡಿಸುವ ಸಂದರ್ಭದಲ್ಲಿ ಬೆಳೆ ಹೆಸರು ತಪ್ಪಾಗಿ ಉಲ್ಲೇಖೀಸಿರುವುದು, ಆಧಾರ್‌ ಲಿಂಕ್‌ ಆಗದಿರುವುದು ಹೀಗೆ ಕೆಲವು ತಾಂತ್ರಿಕ ಕಾರಣಗಳಿಂದ ವಿಮೆ ಮೊತ್ತ ಜಮೆಯಾಗಲು ತೊಂದರೆ ಉಂಟಾಗಿದೆ. ಹಾಗಂತ ಇವರ ಅರ್ಜಿ ತಿರಸ್ಕೃತವಾಗಿಲ್ಲ. ತಾಂತ್ರಿಕ ಸಮಸ್ಯೆ ಪರಿಹಾರಗೊಂಡ ಬಳಿಕ ವಿಮೆ ಮೊತ್ತ ಜಮೆ ಆಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ತೋಟಗಾರಿಕೆ ಇಲಾಖೆ ಸಂಪರ್ಕಿಸಿ

ತಾಂತ್ರಿಕ ಕಾರಣದಿಂದ ಕೆಲ ಅರ್ಜಿದಾರರಿಗೆ ಹವಾಮಾನ ಆಧರಿತ ವಿಮಾ ಪರಿಹಾರ ಮೊತ್ತ ಪಾವತಿ ಆಗದಿರಬಹುದು. ಆದರೆ ಅಂಥವರ ಅರ್ಜಿ ತಿರಸ್ಕಾರಗೊಂಡಿಲ್ಲ. ದಾಖಲೆಗಳು ಸಮರ್ಪಕವಾಗಿ ನೀಡಿದ ಬಳಿಕ ಪರಿಹಾರ ಮೊತ್ತ ಜಮೆ ಆಗಲಿದೆ. ವಿಮಾ ಪರಿಹಾರ ದೊರೆಯದೇ ಇರುವವರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. -ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next