Advertisement
ಗಣಿಗಾರಿಕೆ ಚಟುವಟಿಕೆಗಳು ನಡೆಯುವ ಎಲ್ಲ ಜಿಲ್ಲೆಗಳಿಂದ ಖನಿಜ ಪ್ರತಿಷ್ಠಾನದಲ್ಲಿ (2020ರ ನವೆಂಬರ್ 30ರ ವರೆಗೆ) ಬರೋಬರಿ 2,217.43 ಕೋಟಿ ರೂ. ಸಂಗ್ರಹವಾಗಿದೆ. ವಿಶೇಷವೆಂದರೆ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಇಲ್ಲಿವರೆಗೆ ಖರ್ಚು ಮಾಡಿರುವುದು ಕೇವಲ 681.94 ಕೋ.ರೂ. ಮಾತ್ರ. ಉಳಿದಂತೆ 1,535 .61 ಕೋಟಿ ರೂ. ಹಣ ಇನ್ನೂ ಖಜಾನೆಯಲ್ಲೇ ವ್ಯರ್ಥ ಎನ್ನುವ ರೀತಿಯಲ್ಲಿ ಉಳಿದುಕೊಂಡಿದೆ.
Related Articles
Advertisement
ದ.ಕ. ಜಿಲ್ಲೆಯಲ್ಲಿ ಖನಿಜ ಪ್ರತಿಷ್ಠಾನಕ್ಕೆ 2020ರ ನವೆಂಬರ್ 30ರ ವರೆಗೆ 8.19 ಕೋಟಿ ರೂ. ಸಂಗ್ರಹವಾಗಿದ್ದು, ಇದರಲ್ಲಿ 1.18 ಕೋ.ರೂ. ವಿನಿಯೋಗವಾಗಿದ್ದು 7.01 ಕೋ.ರೂ. ಉಳಿದಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿಯೂ ಸಂಗ್ರಹವಾಗಿರುವ 6.86 ಕೋ.ರೂ.ನಲ್ಲಿ 97.27 ಲಕ್ಷ ರೂ. ವೆಚ್ಚವಾಗಿದ್ದು 5.88 ಕೋ.ರೂ. ಉಳಿದಿದೆ.
ಅನುದಾನ ಸಂಗ್ರಹ
ಗಣಿಗಾರಿಕೆ ಪರವಾನಿಗೆದಾರರಿಂದ ಜಿಲ್ಲಾಮಟ್ಟದಲ್ಲಿ ಸಂಗ್ರಹವಾಗುವ ರಾಜಸ್ವದಲ್ಲಿ ನಿರ್ದಿಷ್ಟ ಮೊತ್ತ ಆಯಾಯ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ಹೋಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ ಮತ್ತು ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರು ತ್ತಾರೆ. ಗಣಿಗಾರಿಕೆ ಬಾಧಿತ ಪ್ರದೇಶ ಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ಯೋಜನೆಗಳಿಗೆ ಆಯಾಯ ಇಲಾಖೆಗಳಿಂದ ಕ್ರಿಯಾ ಯೋಜನೆ ರೂಪಿಸಿ ಸಭೆಯಲ್ಲಿ ಜಿಲ್ಲಾ ಗಣಿ ಪ್ರತಿಷ್ಠಾನ ಸಭೆಯಲ್ಲಿ ಅಂಗೀಕರಿಸಿ ವಿನಿಯೋಗಿಸಬಹುದಾಗಿದೆ.
ಯಾವುದಕ್ಕೆಲ್ಲ ಬಳಕೆ
ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪರಿಸರ, ಆರೋಗ್ಯ ಉದ್ದೇಶಗಳಿಗೆ ಅನುದಾನ ವಿನಿಯೋಗಿಸಬೇಕಾಗಿದೆ. ಮುಖ್ಯ ವಾಗಿ ಆ ಪ್ರದೇಶದಲ್ಲಿ ಕುಡಿಯುವ ನೀರು, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಅಳತೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮಗಳು, ವಯಸ್ಸಾದ ಮತ್ತು ಅಂಗವಿಕಲ ಕಲ್ಯಾಣ, ಕೌಶಲ ಅಭಿವೃದ್ಧಿ, ನೈರ್ಮಲ್ಯ, ಭೌತಿಕ ಮೂಲಸೌಕರ್ಯ, ಇಂಧನ ಮತ್ತು ನೀರಿನ ಅಭಿವೃದ್ಧಿ, ಗಣಿಗಾರಿಕೆ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವ ಉದ್ದೇಶಗಳಿಗೆ ವಿನಿಯೋಗಿಸಲಾಗುತ್ತಿದೆ.
ಇಲಾಖೆಗಳಿಂದ ಪ್ರಸ್ತಾವನೆ ಬರಬೇಕು
ಗಣಿಗಾರಿಕೆ ಬಾಧಿತ ಪ್ರದೇಶಗಳಲ್ಲಿ ಖನಿಜ ಪ್ರತಿಷ್ಠಾನಕ್ಕೆ ಇಲಾಖೆಗಳಿಂದ ಅನುದಾನ ಕೋರಿ ಪ್ರಸ್ತಾವನೆ ಬಂದರೆ ಮಾತ್ರ ಸಂಗ್ರಹದಲ್ಲಿರುವ ಮೊತ್ತವನ್ನು ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಲು ಅವಕಾಶವಿದೆ. ಪ್ರಸ್ತುತ ಆರೋಗ್ಯ ಶೀರ್ಷಿಕೆಯಡಿ ಕೊರೊನಾ ನಿರ್ವಹಣೆ ಉದ್ದೇಶಕ್ಕೆ ಅನುದಾನ ಒದಗಿಸಲಾಗಿದೆ. ಪ್ರಸ್ತಾವನೆ ಬಾರದೇ ಸ್ವಯಂ ಆಗಿ ವಿನಿಯೋಗಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಅನುದಾನ ಉಳಿಕೆಯಾಗಿದೆ ಎಂಬುದಾಗಿ ಗಣಿ ಇಲಾಖೆ ಹೇಳುತ್ತಿದೆ.
ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ಆಯಾಯ ಜಿಲ್ಲೆಗಳ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಹಣ ವಿನಿಯೋಗದ ಬಗ್ಗೆ ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಪ್ರತಿಷ್ಠಾನದಲ್ಲಿರುವ ಅನುದಾನವನ್ನು ಹೇಗೆ ವಿನಿಯೋಗಿಸಬಹುದು ಎಂಬುದನ್ನು ಉಸ್ತುವಾರಿ ಸಚಿವರು ಮತ್ತು ಶಾಸಕರ ಉಪಸ್ಥಿತಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. – ಮುರುಗೇಶ್ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರು
ಕೇಶವ ಕುಂದರ್