Advertisement

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ; ದೇಶದಲ್ಲಿಯೇ ಅತ್ಯಧಿಕ ಸೋಂಕಿತರ ರಾಜ್ಯ

01:43 PM Apr 14, 2020 | Hari Prasad |

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಸೋಮವಾರ 82 ಹೊಸ ಪ್ರಕರಣ ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 2,334 ಆಗಿದೆ. ಹೀಗಾಗಿ, 2 ಸಾವಿರಕ್ಕೂ ಹೆಚ್ಚು ಸೋಂಕಿತರಿರುವ ಮೊದಲ ರಾಜ್ಯ ಎಂಬ ಅಪಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಿದೆ.

Advertisement

ರಾಜಧಾನಿ ಮುಂಬೈನಲ್ಲಿ ಇದುವರೆಗೆ 1,400 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 47 ಕೇಸುಗಳು ಧಾರಾವಿಯಲ್ಲಿಯೇ ಇವೆ. ಜತೆಗೆ ಮುಂಬೈನಲ್ಲಿಯೇ 100 ಸಾವಿನ ಪ್ರಕರಣ ಪತ್ತೆಯಾಗಿದೆ.ಹೀಗಾಗಿ ದೇಶದ ವಾಣಿಜ್ಯ ರಾಜಧಾನಿಯ ಇತರ ಕೊಳೆಗೇರಿ ಪ್ರದೇಶಗಳಾಗಿರುವ ವರ್ಲಿ ಕೋಳಿವಾಡ, ಗೊವಂಡಿ, ಬೈಗನ್‌ವಾಡಿ, ಶಿವಾಜಿನಗರ, ಲೋಟಸ್‌ ಕಾಲೊನಿಗಳಲ್ಲಿ ಸೋಂಕಿನ ಪ್ರಮಾಣ ವೃದ್ಧಿಸಿದೆ.

ಮುಂಬೈನ ಧಾರಾವಿಯಲ್ಲಿ ಸೋಮವಾರ ಮತ್ತೆ 4 ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ. ಈ ಮೂಲಕ ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶದಲ್ಲಿ ಮೃತರ ಸಂಖ್ಯೆ 5ಕ್ಕೆ ಹಾಗೂ ಸೋಂಕಿತರ ಸಂಖ್ಯೆ 47ಕ್ಕೇರಿದೆ.

ಮಲೇರಿಯಾ ಮಾತ್ರೆ ವಿತರಣೆ?
ಮಹಾರಾಷ್ಟ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಮುಂಬೈನ ಕೊಳಗೇರಿ ನಿವಾಸಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವೀನ್‌ (ಎಚ್‌ಸಿಕ್ಯೂ)ಮಾತ್ರೆಗಳನ್ನು ಹಂಚಲು ಯೋಚಿಸುತ್ತಿದೆ. ಒಂದು ವೇಳೆ, ರಾಜ್ಯ ಸರ್ಕಾರದ ಈ ಚಿಂತನೆ ಕಾರ್ಯಗತವಾದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಮುದಾಯದ ಮಟ್ಟದಲ್ಲಿ ಎಚ್‌ಸಿಕ್ಯೂ ಮಾತ್ರೆಗಳನ್ನು ಕೋವಿಡ್ ವೈರಸ್ ಗೆ ರೋಗ ನಿರೋಧಕವಾಗಿ ಬಳಸಿದಂತಾಗುತ್ತದೆ.

ವಿಶೇಷವಾಗಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಈ ಮಾತ್ರೆ ನೀಡುವ ಉದ್ದೇಶವಿದೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಥೋಪೆ ಈ ಬಗ್ಗೆ ಪ್ರತಿಕ್ರಿಯಿಸಿ, ಅಮೆರಿಕದಲ್ಲಿ ಈಗಾಗಲೇ ಎಚ್‌ಸಿಕ್ಯೂ ಮಾತ್ರೆಗಳನ್ನು ಕೋವಿಡ್ ವೈರಸ್ ಚಿಕಿತ್ಸೆಗೆ ಬಳಸಲಾಗುತ್ತಿದೆ.

Advertisement

ಹೀಗಾಗಿ, ಧಾರವಿ ಕೊಳಗೇರಿ ನಿವಾಸಿಗಳ ಪೈಕಿ ಸೋಂಕಿನ ಅಪಾಯ ಹೆಚ್ಚಿರುವವರನ್ನು ಗುರುತಿಸಿ ಅಂತವರಿಗೆ ಈ ಮಾತ್ರೆ ನೀಡುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ‘ರಾಷ್ಟ್ರೀಯ ಕೋವಿಡ್‌-19 ವಿಶೇಷ ಕಾರ್ಯಪಡೆ’ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದು, ಧಾರವಿಯಲ್ಲಿ ಯೋಜನೆ ಫ‌ಲಕಾರಿಯಾದರೆ, ದೇಶದ ಇತರೆಡೆಯೂ ಈ ಮಾತ್ರೆಗಳನ್ನು ಬಳಸಲು ಚಿಂತಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next