Advertisement

221ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ

11:59 AM Jun 30, 2020 | mahesh |

ಬಳ್ಳಾರಿ: ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, 221 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆ ನಮ್ಮ ಮುಂದಿದ್ದು, ಜಿಲ್ಲಾ ಖನಿಜ ನಿಧಿ ಅನುದಾನ ಬಳಸಿಕೊಂಡು ಯೋಜನೆ ಪ್ರಾರಂಭಿಸಲು ಅನುಮೋದನೆ ಕೊಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

Advertisement

ನಗರ ಹೊರವಲಯದ ಗೋನಾಳ ಗ್ರಾಮದ ಬಳಿ ರೈತರ ಸಹಯೋಗದಲ್ಲಿ 102 ಎಕರೆ ವಸತಿ ಯೋಜನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಅವರು ಕ್ರಿಯಾಶೀಲ ಯುವಕರಾಗಿದ್ದು, ಒಳ್ಳೆಯ ಕೆಲಸಗಳು ಮಾಡುವಂತೆ ಅವರು ಸಲಹೆ ನೀಡಿದರು.

ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಮಾತನಾಡಿ, ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತಹ ಸಚಿವರು ನಮಗೆ ಬೇಕು. ಇಚ್ಛಾಶಕ್ತಿ ಇದ್ದರೇ ಮಾತ್ರ ಕೆಲಸಗಳಾಗಲು ಸಾಧ್ಯ ಎನ್ನುವುದಕ್ಕೆ ಸಚಿವ ಬಸವರಾಜ ಅವರೇ ಉದಾಹರಣೆಯಾಗಿದ್ದಾರೆ ಎಂದರು.

ಈ ಲೇಔಟ್‌ಗೆ ಕ್ಯಾಬಿನೆಟ್‌ನಲ್ಲಿ 50:50 ಅನುಪಾತದಡಿ ಅನುಮೋದನೆ ದೊರಕಿಸಿಕೊಡುವಲ್ಲಿ ನಗರಾಭಿವೃದ್ಧಿ ಸಚಿವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರೈತರಿಗೆ ಲಾಭವಾಗುವ ದೃಷ್ಟಿಯಿಂದ ಈ ಅನುಪಾತದಡಿ ಅನುಮೋದನೆ ದೊರಕುವಂತೆ ನೋಡಿಕೊಳ್ಳಲಾಗಿದೆ. ಇದು ಒಂದು ಒಳ್ಳೆಯ ಲೇಔಟ್‌ ಆಗಬೇಕು ಎಂದರು.

ಶಾಸಕ ಸೋಮಶೇಖರ್‌ ರೆಡ್ಡಿ ಮಾತನಾಡಿ, ಇನ್ನರ್‌ ಮತ್ತು ಔಟರ್‌ ರಿಂಗ್‌ ರೋಡ್‌ನ‌ ಮಧ್ಯದಲ್ಲಿ ಈ ಲೇಔಟ್‌ ಬರಲಿದ್ದು, ಬಳ್ಳಾರಿಯ ಪ್ರಮುಖ ಲೇಔಟ್‌ ಇದಾಗಿರಲಿದೆ. ಈ ಪ್ರಸ್ತಾವನೆಗೆ ಕ್ಯಾಬಿನೆಟ್‌ ನಲ್ಲಿ ಅನುಮೋದನೆ ದೊರಕಿಸಿಕೊಟ್ಟಿರುವುದಕ್ಕೆ ಧನ್ಯವಾದ ಎಂದರು.

Advertisement

ಶಾಸಕ ಕೆ.ಸಿ. ಕೊಂಡಯ್ಯ ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆಗೆ ಬೇರೆ ಪಾಲಿಕೆಗಳಿಗೆ ಬಂದ ರೀತಿಯಲ್ಲಿ ಅನುದಾನ ಬಂದಿಲ್ಲ. ಇತ್ತ ಕಡೆ ನಗರಾಭಿವೃದ್ಧಿ ಸಚಿವರು ಗಮನಹರಿಸಬೇಕು ಮತ್ತು ನಗರದ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು ಎಂದರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಅವರು ನಗರಾಭಿವೃದ್ಧಿ ಸಚಿವರಿಗೆ ಸನ್ಮಾನಿಸಿ ಬೆಳ್ಳಿಗದೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ರೈತರು ಸಹ ಸಚಿವದ್ವಯರನ್ನು ಸನ್ಮಾನಿಸಿದರು. ಬುಡಾ ಆಯುಕ್ತ ಈರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next