ಬೆಂಗಳೂರು: ಮನಸೋ ಇಚ್ಛೆ ಹಾಡುತಿದ್ದ ನಾಡಗೀತೆಗೆ 2.20ನಿಮಿಷ ಸಮಯ ನಿಗದಿ ಮಾಡಿ ಶಿಪಾರಸು ಮಾಡಲು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ತಜ್ಞರ ಸಭೆ ನಿರ್ಧರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾದ ಬೆಳಗ್ಗೆ ನಡೆದ ಸಭೆಯಲ್ಲಿ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ’ ಯನ್ನು ಅಪಭ್ರಂಶವಿಲ್ಲದೆ, ಯಾವುದೇ ಪದಗಳಿಗೆ ಕತ್ತರಿ ಹಾಕದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು ಎಂಬುದನ್ನು ಸಾಹಿತಿ, ಗಾಯಕರ ಹಾಗೂ ಹೋರಾಟಗಾರರ ಸಮ್ಮುಖದಲ್ಲಿ ಗಾಯಕರಿಂದ ಹಾಡಿಸಿ ನಿರ್ಧರಿಸಲಾಯಿತು.
ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ನಾಡಗೀತೆಯನ್ನು ಪುನರಾವರ್ತನೆಯಾಗದಂತೆ, ಯಾವ ಪದವನ್ನೂ ಕತ್ತರಿಸದೆ ಹಾಡಿದರೆ ಎರಡೂವರೆ ನಿಮಿಷದೊಳಗೆ ಹಾಡಿ ಮುಗಿಸಬಹುದು. ಈ ಕುರಿತು ಎಲ್ಲಾ ಪರೀಕ್ಷೆ ಹಾಗೂ ತಜ್ಞರ ಜತೆಗೆ ಚರ್ಚೆಗಳನ್ನು ಮಾಡಿದ್ದು, ಈ ಸಭೆಯಲ್ಲಿ ಕೈಗೊಂಡ ಶಿಫಾರಸುಗಳನ್ನು ಎರಡು ದಿನಳಗೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಚಂದ್ರಶೇಖರ ಪಾಟೀಲ, ನಾಡೋಜ ಕಮಲಾ ಹಂಪನಾ, ಡಾ. ದೊಡ್ಡರಂಗೇಗೌಡ, ಬಿ.ಟಿ. ಲಲಿತಾ ನಾಯಕ್, ಚಿರಂಜೀವಿ ಸಿಂಗ್, ಗಾಯಕರಾದ ವೈ.ಕೆ. ಮುದ್ದುಕೃಷ್ಣ, ಮುದ್ದುಮೋಹನ್, ಆನಂದ ಮಾದಲಗೆರೆ, ಕಿಕ್ಕೇರಿ ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರರಾದ ರಾ.ನಂ. ಚಂದ್ರಶೇಖರ್, ಸತೀಶ್‌ಗೌಡ, ತಿಮ್ಮಯ್ಯ ಸೇರಿದಂತೆ ಒಟ್ಟಾರೆ 33 ಮಂದಿ ಗಣ್ಯರು ಸಮ್ಮುಖದಲ್ಲಿ ನಾಡಗೀತೆಯ ಅವಧಿಯ ಬಗ್ಗೆ ಚರ್ಚೆ ನಡೆಲಾಗಿದೆ. ಆನಂದ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ ಅವರು ನಾಡಗೀತೆಯನ್ನು ಹಾಡಿದರು. ಯಾವುದೇ ಅಪಭ್ರಂಶವಿಲ್ಲದೆ, ಅವಸರವೂ ಇಲ್ಲದೆ ಅತ್ಯಂತ ಸೊಗಸಾಗಿ 2.18 ನಿಮಿಷದಲ್ಲಿ ಹಾಡಿ ಮುಗಿಸಿದರು. ಹೀಗಾಗಿ ಎರಡರಿಂದ ಎರಡೂವರೆ ನಿಮಿಷದಲ್ಲಿ ನಾಡಗೀತೆಗೆ ಅವಧಿಯನ್ನು ನಿಗದಿಗೊಳಿಸಬಹುದು ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಯಿತು. ಇನ್ನು ಕವಿ ನಿಸಾರ್ ಅಹಮದ್, ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಕೂಡ ಪತ್ರ ಬರೆದು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ವರದಿ ಜಾರಿಗೆ ಆಗ್ರಹ:
ಈ ಹಿಂದೆ ಪಂಡಿತ್ ವಸಂತ ಕನಕಾಪುರ ನೇತೃತ್ವದ ಸಮಿತಿ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಸೂಚಿಸಿತ್ತು. ಆನಂತರ ಸಾಹಿತಿ ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ಸಿ.ಅಶ್ವತ್ಥ್ ಅವರ ರಾಗಸಂಯೋಜನೆಯಲ್ಲಿ ಹಾಡುವಂತೆ ವರದಿ ಸಲ್ಲಿಸಿತ್ತು. ಜತೆಗೆ ಜಿ.ಎಸ್. ಶಿವರುದ್ರಪ್ಪ ಅವರು ಸಹ ಒಂದು ವರದಿ ನೀಡಿದ್ದರು. ಈ ಯಾವ ವರದಿಗಳನ್ನು ಸರ್ಕಾರ ಜಾರಿ ಮಾಡಲಿಲ್ಲ. ಈ ಕಾರಣದಿಂದ ತಜ್ಞರ ಸಮ್ಮುಖದಲ್ಲಿ ಸಭೆ ನಡೆಸಿ, ಯಾವುದೇ ಸಾಲನ್ನು ಕೈಬಿಡದೆ ಅನಗತ್ಯ ಹಿನ್ನೆಲೆ ಸಂಗೀತವನ್ನು ಮಾತ್ರ ಕಡಿತ ಮಾಡಿ ಸಮಯ ನಿಗದಿ ಮಾಡಿದ್ದೇವೆ. ಈಗಲಾದರೂ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.