Advertisement

Puttur: ಕಾಯಕಲ್ಪಕ್ಕೆ ಕಾಯುತ್ತಿದೆ “ಗುರುಭವನ’

03:07 PM Jun 29, 2023 | Team Udayavani |

ಪುತ್ತೂರು: ಪುತ್ತೂರು- ಕಡಬ ತಾಲೂಕಿನ ಶೈಕ್ಷಣಿಕ ವ್ಯಾಪ್ತಿಯು ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಹೊಂದಿದ್ದು ಪುತ್ತೂರು ಕೇಂದ್ರದಲ್ಲಿ ಶಿಕ್ಷಕರ ಶೈಕ್ಷಣಿಕ ಕಾರ್ಯಚಟುವಟಿಕೆಗೆಂದು ನಿರ್ಮಿಸಿರುವ ಗುರುಭವನವು ದುಃಸ್ಥಿತಿಯಲ್ಲಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ.

Advertisement

ಹಾಲಿ ಬಿಇಒ ಕಚೇರಿ ಕಟ್ಟಡದ ಸನಿಹದಲ್ಲೇ ಇರುವ ಗುರುಭವನಕ್ಕೆ ಕಾಯಕಲ್ಪಕ್ಕಾಗಿ ಕೆಲವು ವರ್ಷಗಳಿಂದ ಶಿಕ್ಷಕರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳು ವಿಶೇಷ ಅನುದಾನ ಒದಗಿಸುವ ಮೂಲಕ ಗುರುಭವನವನ್ನು ಕಾರ್ಯಚಟುವಟಿಕೆ ಕೇಂದ್ರವನ್ನಾಗಿಸುವ ಆವಶ್ಯಕತೆ ಇದೆ.

ಶಿಕ್ಷಕರು ಕಟ್ಟಿದ ಗುರುಭವನ
1999ರಲ್ಲಿ ಅಂದಿನ ಬಿಇಒ ಅವರ ನೇತೃತ್ವದಲ್ಲಿ ಶಿಕ್ಷಕ ಸಂಘಗಳ ಸಹಭಾಗಿತ್ವದೊಂದಿಗೆ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರತೀ ಶಿಕ್ಷಕರು ತಲಾ 1,000 ರೂ. ನೀಡಿ ಸುಸಜ್ಜಿತ ಗುರುಭವನ ನಿರ್ಮಿಸಿದ್ದರು. 2001ರಲ್ಲಿ ಈ ಕಟ್ಟಡ ಲೋಕಾರ್ಪಣೆಗೊಂಡಿತ್ತು. ಗೋಡೆಗಳು ವರ್ಲಿ ಚಿತ್ರಕಲೆಯಿಂದ ಗಮನ ಸೆಳೆದು, ವಿಸ್ತಾರವಾದ ಸಭಾಂಗಣ ಸಹಿತ ಎಲ್ಲ ಆವಶ್ಯಕ ಮೂಲಸೌಕರ್ಯ ವನ್ನು ಒಳಗೊಂಡಿದ್ದ ಗುರುಭವನ ತಾಲೂಕಿನ ಶಿಕ್ಷಕರ ಶೈಕ್ಷಣಿಕ ಚಟುವಟಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಗೆ ಕೇಂದ್ರ ವಾಗಿತ್ತು. ಕಾಲ ಕ್ರಮೇಣ ಕಟ್ಟಡ ದುಃಸ್ಥಿತಿಗೆ ತಲುಪಿದ್ದು ಹೀಗಾಗಿ ಕಳೆದ 3 ವರ್ಷಗಳಿಂದ ಇಲ್ಲಿ ಕಾರ್ಯಕ್ರಮ ನಡೆಯುತ್ತಿಲ್ಲ.

ಸಮಸ್ಯೆ ಏನು ?
ಸಭಾಂಗಣದ ನೆಲ ಹಾಸು ಶಿಥಿಲ ಗೊಂಡಿದೆ. ಶೌಚಾಲಯ ಸಮರ್ಪಕವಾ ಗಿಲ್ಲ. ವೇದಿಕೆಗೆ ತಾಗಿಕೊಂಡಿರುವ ಕೊಠ ಡಿಯ ಗೋಡೆ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಈ ಎಲ್ಲ ಕಾರಣಗಳಿಂದ 22 ವರ್ಷಗಳ ಇತಿಹಾಸವಿರುವ ಗುರು ಭವನದಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸದ್ಯ ಸಭಾಂಗಣವು ವರ್ಷದ ಆರಂಭದಲ್ಲಿ ಮಕ್ಕಳಿಗೆ ವಿತರಿಸಲೆಂದು ಬರುವ ಸಾಮಗ್ರಿ ಗಳ ದಾಸ್ತಾನು ಕೇಂದ್ರವಾಗಿ ಮಾರ್ಪಟ್ಟಿದೆ.

ಸಾವಿರಕ್ಕೂ ಅಧಿಕ ಶಿಕ್ಷಕರು
ತಾಲೂಕಿನಲ್ಲಿ ಸರಕಾರಿ ಹಿ.ಪ್ರಾ. ಶಾಲೆ-180, ಅನುದಾನಿತ-12, ಅನುದಾನ ರಹಿತ-46, ಪ್ರೌಢಶಾಲೆಗೆ ಸಂಬಂಧಪಟ್ಟಂತೆ ಸರಕಾರಿ ಪ್ರೌಢಶಾಲೆ- 23, ಅನುದಾನಿತ-22, ಪ್ರೌಢಶಾಲೆ-37, ಇತರ – 4 ಶಾಲೆಗಳಿವೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ -596, ಅನುದಾನಿತ -30, ಪ್ರೌಢಶಾಲೆಗಳ ಪೈಕಿ ಸರಕಾರಿ -199, ಅನುದಾನಿತ -123 ಶಿಕ್ಷಕರು ಇದ್ದಾರೆ. ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಪ್ರತ್ಯೇಕವಿದೆ. ಹೀಗಾಗಿ ಒಟ್ಟು ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಪುತ್ತೂರು ಶೈಕ್ಷಣಿಕ ವಲಯ ಒಳಗೊಂಡಿದೆ.

Advertisement

ಬಾಡಿಗೆ ಕಟ್ಟಡವೇ ಗತಿ
ಗುರುಭವನ ಯೋಗ್ಯವಾಗಿಲ್ಲದ ಕಾರಣ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಕಾರ್ಯಕ್ರಮಗಳಿಗೆ ಬಾಡಿಗೆ ಕಟ್ಟಡ ಅಥವಾ ಯಾವುದಾದರೂ ಶಾಲೆಯ ಸಭಾಂಗಣವನ್ನೇ ಆಶ್ರಯಿಸಬೇಕಾದ ಸ್ಥಿತಿ ಶಿಕ್ಷಕರದ್ದು. ಸ್ವಂತ ಕಟ್ಟಡ ಹೊಂದಿ ಅದರಲ್ಲಿ ಕಾರ್ಯಕ್ರಮ ಮಾಡಲಾಗದ ಪರಿಸ್ಥಿತಿ ಇದೆ. ಶಿಕ್ಷಕರೇ ಸೇರಿ ನಿರ್ಮಿಸಿದ ಗುರುಭವನದ ದುರಸ್ತಿಗೆ ಸರಕಾರ ಅನುದಾನ ಬಿಡುಗಡೆ ಮಾಡಬೇಕಿದೆ. ಈ ಬಗ್ಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಾಸಕರಿಗೆ ಮನವಿ ಸಲ್ಲಿಸಿದ್ದು ಅದಕ್ಕೆ ಶೀಘ್ರ ಸ್ಪಂದನೆ ದೊರೆಯಬೇಕಿದೆ.

ಪೂರಕ
ಸ್ಪಂದನೆ
ಗುರುಭವನಕ್ಕೆ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಕ ಸಂಘಟನೆಗಳು ಈಗಾಗಲೇ ಮನವಿ ಸಲ್ಲಿಸಿವೆ. ಅದಕ್ಕೆ ಪೂರಕವಾಗಿ ಸ್ಪಂದಿಸುವ ಕಾರ್ಯ ಮಾಡುತ್ತೇನೆ.
-ಅಶೋಕ್‌ ಕುಮಾರ್‌ ರೈ,
ಶಾಸಕ, ಪುತ್ತೂರು

ಅನುದಾನಕ್ಕೆ ಪ್ರಸ್ತಾವನೆ
ಗುರುಭವನದ ದುರಸ್ತಿಗೆ ಐದು ಲಕ್ಷ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಂಡ ಬಳಿಕ ಮುಂದಿನ ಹಂತದ ಪ್ರಕ್ರಿಯೆ ನಡೆಯಲಿದೆ.
-ಲೋಕೇಶ್‌ ಇ.,
ಕ್ಷೇತ್ರ ಶಿಕ್ಷಣಾಧಿಕಾರಿ

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next