ಮುಂಬೈ: ಬೆಳ್ಳಂಬೆಳಗ್ಗೆ ಕೆಲಸದ ಅವಸರದಲ್ಲಿ ತುಂಬು ತುಳುಕುತ್ತಿದ್ದ ರೈಲು ಹತ್ತಿದ್ದ ಯುವತಿಯೋರ್ವಳು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ.
ದೊಂಬಿವಿಲಿ ನಿವಾಸಿ 22ರ ಹರೆಯದ ಚಾರ್ಮಿ ಪ್ರಸಾದ್ ಮೃತಪಟ್ಟ ಯುವತಿ.
ದೊಂಬಿವಿಲಿ ಮತ್ತು ಕೋಪರ್ ರೈಲ್ವೇ ನಿಲ್ದಾಣಗಳಲ್ಲಿ ನಡುವೆ ಸೋಮವಾರ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಸಕ್ತ ವರ್ಷದಲ್ಲಿ ನಡೆದ ನಾಲ್ಕನೇ ದುರ್ಘಟನೆಯಾಗಿದೆ.
ಚಾರ್ಮಿ ಪ್ರಸಾದ್ ಅವರು ರೈಲಿನಲ್ಲಿ ಜನಜನಂಗುಳಿ ಇದ್ದ ಕಾರಣ ಫೂಟ್ ಬೋರ್ಡ್ ನಲ್ಲಿ ನಿಂತಿದ್ದರು. ಕೆಳಗೆ ಬಿದ್ದ ಅವರನ್ನು ಸ್ಥಳೀಯ ಶಾಸ್ತ್ರೀ ನಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಮತ್ತು ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತರಾಗಿದ್ದಾರೆ ಎಂದು ವರದಿಯಾಗಿದೆ.
ರೈಲುಗಳಲ್ಲಿ ಅತಿಯಾದ ಜನರು ಪ್ರಯಾಣಿಸುತ್ತಿರುವುದರಿಂದ ಇಂತಹ ಅವಗಢಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆ ಇದಕ್ಕೆ ಸರಿಯಾದ ಪರಿಹಾರ ಮಾರ್ಗ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.