Advertisement

22 ಸ್ಥಾನ ಮೇಲೇರಿದ ರಾಜಧಾನಿ

06:14 AM Mar 07, 2019 | |

ಬೆಂಗಳೂರು: ನಾಗರಿಕರ ನಿರಾಸಕ್ತಿ, ನಗರ ಬಯಲು ಶೌಚ ಮುಕ್ತವಾಗದ ಪರಿಣಾಮ ಕೇಂದ್ರ ಸರ್ಕಾರದ “ಸ್ವತ್ಛ ಸರ್ವೆಕ್ಷಣ್‌ ಅಭಿಯಾನ -2019’ರಲ್ಲಿ ಬೆಂಗಳೂರು 194ನೇ ರ್‍ಯಾಂಕ್‌ಗೆ ತೃಪ್ತಿಪಟ್ಟಿದ್ದು, ಯಾವುದೇ ಪ್ರಶಸ್ತಿ ದೊರೆಯದೆ ನಿರಾಸೆ ಅನುಭವಿಸಿದೆ.

Advertisement

ಇದೇ ಮೊದಲ ಬಾರಿ ಗೊಬ್ಬರ ತಯಾರಿಕೆ ಕಲಿಕಾ ಕೇಂದ್ರವನ್ನು ಪಾಲಿಕೆಯಿಂದ ಆರಂಭಿಸಿ, ವಾರ್ಡ್‌ ವಾರು ಕಾಂಪೋಸ್ಟ್‌ ಸಂತೆ, ಇ-ಶೌಚಾಲಯ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಸೇರಿ ಹಲವಾರು ಅಭಿಯಾನ ನಡೆಸಿ, ತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ನಗರದ ಸ್ವತ್ಛತೆಗೆ ಕೈಗೊಂಡ ಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಪ್ರಶಂಸೆಗೆ ಪಾತ್ರವಾದರೂ ಉತ್ತಮ ರ್‍ಯಾಂಕ್‌ ಪಡೆಯುವಲ್ಲಿ ಬೆಂಗಳೂರು ವಿಫ‌ಲವಾಗಿದೆ.

ಸ್ವತ್ಛ ಸವೇಕ್ಷಣ್‌ ಸಮೀಕ್ಷೆಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸ್ಥಾನ ಪಡೆಯುವಲ್ಲಿ ವಿಫ‌ಲವಾಗಿದ್ದ ಬಿಬಿಎಂಪಿ, 2018ರಲ್ಲಿ 216ನೇ ಸ್ಥಾನ ಪಡೆದಿತ್ತು. ಹಾಗೇ 2019ನೇ ಸಾಲಿನಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲೇಬೇಕೆಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದರಂತೆ ಸ್ವತ್ಛತಾ ಅಭಿಯಾನ, ಮೊಬೈಲ್‌ ಆ್ಯಪ್‌ ಮೇಲ್ವಿಚಾರಣೆ, ಅಭಿಪ್ರಾಯ ಸಂಗ್ರಹ, ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಘಟಕಗಳ ನಿರ್ಮಾಣ, ರಸ್ತೆ, ಮೇಲ್ಸೇತುವೆ ಸುಂದರೀಕರಣ, ಕ್ಲೀನ್‌ 150 ಚಾಲೇಂಜ್‌, ಬ್ಲಾಕ್‌ಸ್ಪಾಟ್‌ಗಳಲ್ಲಿ ರಂಗೋಲಿ ಅಭಿಯಾನ ಹೀಗೆ ಹಲವಾರು ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿತ್ತು.

ಇವೆಲ್ಲದರ ನಡುವೆಯೂ ಬೆಂಗಳೂರಿಗೆ 194ನೇ ರ್‍ಯಾಂಕ್‌ ಸಿಕ್ಕಿದೆ. ಇದರೊಂದಿಗೆ ಸ್ವತ್ಛತೆಗೆ ಆದ್ಯತೆ, ವಿನೂತನ ಕಾರ್ಯಕ್ರಮಗಳು, ಸಮರ್ಪಕ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಂತಹ ವಿಭಾಗಗಳಲ್ಲೂ ಪ್ರಶಸ್ತಿ ದೊರೆಯದಿರುವುದು ಪಾಲಿಕೆಗೆ ಬೇಸರ ತಂದಿದೆ.
 
ಮಾರಕವಾದ ಅಂಶವೇನು?: ನಗರಾಭಿವೃದ್ಧಿ ಇಲಾಖೆಯ ಸ್ವತ್ಛ ಸರ್ವೇಕ್ಷಣ್‌ ಸಮೀಕ್ಷೆಯಂತೆ ನಗರಗಳು ಸಂಪೂರ್ಣವಾಗಿ “ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಳ್ಳಬೇಕು. ರ್‍ಯಾಂಕಿಂಗ್‌ ನೀಡುವ ವೇಳೆ ಇದೇ ಅಂಶವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳ ಪೈಕಿ ಯಾವುದೇ ವಾರ್ಡ್‌ ಅಧಿಕೃತವಾಗಿ ಬಯಲು ಶೌಚ ಮುಕ್ತವಾಗಿರುವ ಬಗ್ಗೆ ಕೇಂದ್ರ ಸರ್ಕಾರದಿಂದ
ಪ್ರಮಾಣ ಪತ್ರ ಪಡೆದಿಲ್ಲ. ಲ್ಲಾ 198 ವಾರ್ಡ್‌ಗಳು ಬಯಲು ಶೌಚ ಮುಕ್ತವಾಗಿವೆ ಎಂದು ಬಿಬಿಎಂಪಿ ಕೌನ್ಸಿಲ್‌ನಲ್ಲಿ ಘೋಣೆ ಮಾಡಿದ್ದರೂ, ಕೇಂದ್ರ ಸರ್ಕಾರಕ್ಕೆ ಇನ್ನೂ ಪ್ರಸ್ತಾವನೆ ಸಲ್ಲಿಸಿಲ್ಲ. ಪರಿಣಾಮ ಈ ವಿಭಾಗದಲ್ಲಿಯೇ ಪಾಲಿಕೆಗೆ ಅತ್ಯಂತ ಕಡಿಮೆ ಅಂಕಗಳು ಬಂದಿದ್ದು, ರ್‍ಯಾಂಕಿಂಗ್‌ನಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.

ನಾಗರಿಕರ ನಿರಾಸಕ್ತಿಯೂ ಕಾರಣ: ಸ್ವತ್ಛ ಸರ್ವೆಕ್ಷಣ್‌ ಅಭಿಯಾನದಲ್ಲಿ ಬಯಲು ಶೌಚ ಮುಕ್ತ ನಗರ ಘೋಷಣೆ ಹೊರತುಪಡಿಸಿದರೆ, ಸಾರ್ವಜನಿಕರ ಅಭಿಪ್ರಾಯಕ್ಕೆ ಹೆಚ್ಚಿನ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಅಭಿಯಾನದಲ್ಲಿ ಹಿನ್ನಡೆ ಅನುಭವಿಸಲು ನಗರ ಬಹಿರ್ದೆಸೆ ಮುಕ್ತವಾಗದಿರುವುದು ಒಂದು ಕಾರಣವಾದರೆ, ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿ, ನಗರ ಸ್ವತ್ಛವಾಗಿದೆ ಎಂದು ಅಭಿಪ್ರಾಯ ತಿಳಿಸದೇ ಇರುವುದು ಮತ್ತೂಂದು ಕಾರಣವಾಗಿದೆ. ಸ್ವತ್ಛ ಸರ್ವೇಕ್ಷಣ್‌ಗೆ ಸಂಬಂಧಿಸಿದ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ನಗರ ಎಷ್ಟು ಸ್ವತ್ಛವಾಗಿದೆ, ಸಮುದಾಯ ಶೌಚಾಲಯಗಳು ಇವೆಯೇ, ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆಯೇ, ತ್ಯಾಜ್ಯ ಸಮರ್ಪಕವಾಗಿ ವಿಂಗಡಣೆ ಹಾಗೂ ಸಂಸ್ಕರಣೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ನಗರಕ್ಕೆ ಅಂಕಗಳನ್ನು ನೀಡಲಾಗುತ್ತದೆ. ಆದರೆ, ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ಕೇವಲ 3,509 ಜನ ಮಾತ್ರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 

Advertisement

ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ ನಗರದ ಸಂಪೂರ್ಣವಾಗಿ ಬಯಲು ಶೌಚ ಮುಕ್ತವಾಗದಿರುವುದು ಕಡಿಮೆ ಅಂಕ ಪಡೆಯಲು ಪ್ರಮುಖ ಕಾರಣವಾಗಿದೆ. ಅಭಿಯಾನದಲ್ಲಿ ಬೆಂಗಳೂರಿಗೆ ಯಾವ ವಿಭಾಗದಲ್ಲಿ ಕಡಿಮೆ ಅಂಕಗಳು ಬಂದಿವೆ ಎಂಬ ಮಾಹಿತಿಯನ್ನು ಪಡೆಯಲಾಗುವುದು. ಅದರಂತೆ ಮುಂದಿನ ವರ್ಷ ಆ ಕ್ಷೇತ್ರಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

ಸ್ವತ್ಛ ಸರ್ವೇಕ್ಷಣ್‌ನಲ್ಲಿ ಬೆಂಗಳೂರಿಗೆ ಉತ್ತಮ ರ್‍ಯಾಂಕಿಂಗ್‌ ನೀಡಿಲ್ಲ. ಇದರಲ್ಲೂ ರಾಜಕೀಯ ನಡೆದಿರಬಹುದು. ಈಗಾಗಲೇ ಎರಡು ಬಾರಿ ಉನ್ನತ ಸ್ಥಾನ ಪಡೆದ ಮೈಸೂರು ಈ ಬಾರಿಯೂ 3ನೇ ಸ್ಥಾನ ಪಡೆದಿದೆ. ರಾಜ್ಯವೇನು ಪೂರ್ತಿ ಗಲೀಜಾಗಿದೆಯಾ? ಸಮೀಕ್ಷೆಗೆ ಮಾನದಂಡವೇನೆಂದು ಗೊತ್ತಿಲ್ಲ.
 ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಅಭಿಯಾನದಲ್ಲಿ ಸಣ್ಣ ನಗರಗಳೊಂದಿಗೆ ಪೈಪೋಟಿ ನಡೆಸುವ ಅನಿವಾರ್ಯತೆ ಎದುರಾಗಿತ್ತು. ಬಯಲು ಶೌಚ ಮುಕ್ತವಾಗದಿರುವುದು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸದಿರುವುದು ಪಾಲಿಕೆಗೆ ಮಾರಕವಾಯಿತು. ಈ ಬಾರಿ ಕಡಿಮೆ ಅಂಕ ಪಡೆದಿರುವ ವಿಭಾಗಗಳನ್ನು ಬಲಪಡಿಸುವ ಮೂಲಕ ಮುಂದಿನ ಬಾರಿ ಉತ್ತಮ ರ್‍ಯಾಂಕ್‌ ಪಡೆಯಲಾಗುವುದು.
 ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು 

Advertisement

Udayavani is now on Telegram. Click here to join our channel and stay updated with the latest news.

Next